ADVERTISEMENT

ಆಹಾರ ಹಬ್ಬದಲ್ಲಿ ಗಮನ ಸೆಳೆದ ರಾಗಿ ನೂಡಲ್ಸ್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 6:35 IST
Last Updated 14 ಸೆಪ್ಟೆಂಬರ್ 2011, 6:35 IST

ಚನ್ನಮ್ಮನ ಕಿತ್ತೂರು: ಅಲ್ಲಿ ಇಣುಕಿ ನೋಡಿದರೆ ಪಿಜ್ಜಾ, ಬರ್ಗರ್, ಪಾವ್‌ಬಜಿ, ಸೇವ್‌ಪುರಿಯಂತಹ ಫಾಸ್ಟ್ ಫುಡ್‌ಗಳಲ್ಲಿರುವ ಕಡುವಾಸನೆ  ಮೂಗಿಗೆ ಮೆತ್ತುತ್ತಿರಲಿಲ್ಲ. ಗಾಢವಾದ ಬಣ್ಣವೂ  ಕಣ್ಣಿಗೆ ರಾಚುತ್ತಿರಲಿಲ್ಲ. ರಾಸಾಯನಿಕ ವಸ್ತುಗಳಿಂದಲೂ ಆ ತಿಂಡಿಗಳು ಗಾವುದ ದೂರದಲ್ಲಿದ್ದವು...

ಪಕ್ಕಾ ದೇಸೀ ಕಿರು ಆಹಾರಧಾನ್ಯಗಳಾದ  ಸಜ್ಜೆ, ನವಣೆ, ರಾಗಿ, ಅರಗ, ಬರಗ, ವರದಕ್ಕಿ ಹಾಗೂ ಸಾಂವಿಯಿಂದ ಸಿದ್ಧಪಿಡಿಸಿದ್ದ ವಿವಿಧ ಭಕ್ಷ್ಯಗಳು ಅವಾಗಿದ್ದವು. ಇಂತಹ ಆಹಾರ ಧಾನ್ಯಗಳಿಂದ ಇಷ್ಟೆಲ್ಲ ವೈವಿಧ್ಯಮಯ ತಿಂಡಿ, ತಿನಿಸುಗಳ ಆಹಾರ ಸಿದ್ಧಪಡಿಸಲು ಸಾಧ್ಯವೇ ಎಂಬ ಸಹಜ ಕುತೂಹಲಕ್ಕೆ ಸಮೀಪದ ಗುಂಡೇನಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದ ಸಿರಿಧಾನ್ಯಗಳ ಆಹಾರ ಹಬ್ಬದಲ್ಲಿ ಆಯೋಜಿಸಲಾಗಿದ್ದ ಸ್ಫರ್ಧೆಯಲ್ಲಿ ಉತ್ತರ ದೊರಕಿತ್ತು.

ಇಪ್ಪತ್ತೊಂಬತ್ತು ಮಹಿಳೆಯರು ಭಾಗವಹಿಸಿದ್ದ ಆಹಾರ ಹಬ್ಬದ ಈ ಸ್ಫರ್ಧೆಯಲ್ಲಿ ಸುಮಾರು 140ಕ್ಕಿಂತಲೂ ಹೆಚ್ಚು ಖಾದ್ಯಗಳನ್ನು ಅವರು ಸಿದ್ಧಪಡಿಸಿಕೊಂಡು ಬಂದಿದ್ದರು.

ನವಣೆ ಗಿಣ್ಣ, ಪೆಢೆ,  ರಾಗಿ ಅಂಬಲಿ, ಜಾಮೂನು, ಹೋಳಿಗೆ, ಚಕ್ಕಲಿ, ಬಜಿ, ಮೊದಕ, ಹುಗ್ಗಿ, ಪೆಢೆ, ದೋಸೆ, ಬರ್ಫಿ, ನೂಡಲ್ಸ್ ವರದಕ್ಕಿ, ಸಾವಿ, ಸಜ್ಜೆಯಿಂದ ತಯಾರಿಸಲಾಗಿದ್ದ ತರಹೇವಾರಿ ತಿಂಡಿ, ತಿನಿಸುಗಳನ್ನು ಸ್ಫರ್ಧೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದರು.

ಸ್ಫರ್ಧೆ ನಿರ್ಣಾಯಕರಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೃಹವಿಜ್ಞಾನ ಮಹಾ ವಿದ್ಯಾಲಯ ಸಿರಿಧಾನ್ಯ ಯೋಜನೆ ಸಂಶೋಧಕಿಯರಾದ ಮೇಘನಾ ಹಾಗೂ ಶ್ವೇತಾ ತೀರ್ಪುಗಾರರಾಗಿ ಆಗಮಿಸಿದ್ದರು.

ನವಣೆ ಗಿಣ್ಣ ತಯಾರಿಸಿದ್ದ ಲಿಲಿತಾ ಪಾಟೀಲ ಪ್ರಥಮ, ನವಣೆ ಪೇಢೆ ಸಿದ್ಧಪಡಿಸಿದ್ದ ರೂಪಾ ಹಿರೇಮಠ ದ್ವಿತೀಯ, ನವಣೆ ಜಾಮೂನು ತಯಾರಿಸಿದ್ದ ಮಾಲತಿ ಚಿನ್ನಣ್ಣವರ ತೃತೀಯ ಹಾಗೂ ಸತ್ಯಭಾಮಾ ಎಮ್ಮಿನಕಟ್ಟಿ, ಭಾರತಿ ತಿಗಡಿ, ಪಾರ್ವತಿ ಎಮ್ಮಿನಕಟ್ಟಿ, ಚಂದ್ರಾವತಿ ಕಂಬಾರ ಅವರಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.