ಬೆಳಗಾವಿ: ಕಳೆದ ಕೆಲ ದಿನಗಳಿಂದ ಗೋಹತ್ಯೆ ಮಾಡಲಾಗುತ್ತದೆ ಎಂದು ವಿವಾದಕ್ಕೆ ಸಿಲುಕಿದ್ದ `ಇಸ್ತೇಮಾ~ ಉತ್ಸವದಲ್ಲಿ ಸೋಮವಾರ ಸಂಪೂರ್ಣವಾಗಿ ಶುದ್ಧ ಸಸ್ಯಹಾರವನ್ನೇ ಮಾಡಲಾಗಿದೆ. ಇಲ್ಲಿ ಯಾವುದೇ ರೀತಿಯ ಪ್ರಾಣಿಯ ಬಲಿಯನ್ನು ನೀಡಲಾಗಿಲ್ಲ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ತಿಳಿಸಿದರು.
ನಗರದ ಸಾಂಬ್ರಾ ರಸ್ತೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ `ಇಸ್ತೇಮಾ~ ಉತ್ಸವಕ್ಕೆ ಸೋಮವಾರ ಭೇಟಿ ನೀಡಿದ ದಯಾನಂದ ಸ್ವಾಮೀಜಿ ಮುಸ್ಲಿಂ ಬಾಂಧವರೊಂದಿಗೆ ಸಹಪಂಕ್ತಿ ಭೋಜನ ಮಾಡಿದರು. ಊಟದಲ್ಲಿ ಗೋಮಾಂಸ, ಮೊಟ್ಟೆ ಸೇರಿದಂತೆ ಯಾವುದೇ ತರಹದ ಮಾಂಸಾಹಾರ ಇಲ್ಲದಿರುವುದನ್ನು ಕಂಡು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಭೋಜನಕ್ಕೆ ಮುನ್ನ ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸಿದ ಸ್ವಾಮೀಜಿ, ಪ್ರಾಣಿ ಬಲಿ- ಗೋಹತ್ಯೆ ಮಾಡುವುದರಿಂದ ಉಂಟಾಗುವ ಪರಿಣಾಮದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಅಹಿಂಸಾ ತತ್ವವನ್ನು ಪಾಲಿಸುವಂತೆ ಸಲಹೆ ನೀಡಿದರು.
ಮುಸ್ಲಿಂ ಮುಖಂಡರಾದ ಅಮಾನುಲ್ಲಾ ಖಾನ್ ಪಠಾಣ, ಮಜೀದ್ ಬಾಗಲಕೋಟೆ, ಅಬ್ದುಲ್ ಗಫಾರ್ ಘೀವಾಲ, ಮೂರುಬ್ಬಾಯಿ ಸುಂದರವಾಲೆ, ಕುತುಬುದ್ದೀನ್ ಮತ್ತಿತರ ಮುಸ್ಲಿಂ ಮುಖಂಡರು ಹಾಜರಿದ್ದರು.
ಸ್ವಾಮೀಜಿಯೊಂದಿಗೆ ಜೈನ ಸಮಾಜ ದ ಮುಖಂಡರಾದ ಸಂಪತ ರಾಜ್ ಬಾಗ್ರೇಚ, ಮಂಡಳಿಯ ರಾಜ್ಯ ಮಹಿಳಾ ಸಂಚಾಲಕಿ ಸುನಂದಾದೇವಿ, ಕಿಶೋರ ಮಿಠಾರಿ, ಚಂದ್ರಶೇಖರ ತಡಸದ, ಆದಿಲಬ್ದಿ ಜೀವ ದಯಾ ಸಂಸ್ಥಾನದ ಮಹಾವೀರಚಂದ ಚೌದರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.