ADVERTISEMENT

ಉದ್ಯೋಗ ಖಾತ್ರಿ: 55 ಕೋಟಿ ಲಭ್ಯ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 8:45 IST
Last Updated 15 ಏಪ್ರಿಲ್ 2011, 8:45 IST

ಬೆಳಗಾವಿ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈ ವರ್ಷ 299 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಇನ್ನೂ 55 ಕೋಟಿ ರೂಪಾಯಿ ಅನುದಾನ ಲಭ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಗೆ ಈ ಮಾಹಿತಿ ನೀಡಿದ ಅವರು, ಉದ್ಯೋಗ ಖಾತ್ರಿ ಅನುದಾನ ಬಳಕೆಯಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಕಾಯ್ದುಕೊಂಡಿದೆ. ಮುಂಬರುವ ದಿನಗಳಲ್ಲಿ ಯೋಜನೆಯ ಕಾಮಗಾರಿಗಳನ್ನು ತೀವ್ರಗೊಳಿಸಬೇಕು. ಕಾಮಗಾರಿ ಉದ್ದೇಶದಿಂದ ರೂ 55 ಕೋಟಿ ಲಭ್ಯವಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಈ ಅನುದಾನದ ಖರ್ಚುವೆಚ್ಚ ಪರಿಶೀಲನೆ ಉದ್ದೇಶದಿಂದ ಪರಿಶೀಲನಾ ತಂಡಗಳನ್ನು ರಚಿಸಲಾಗಿದೆ. ಆ ತಂಡಗಳು ವರದಿ ನೀಡಿದ ನಂತರ ಸದರಿ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ ಬರಬೇಕಾದ ಇನ್ನೂ 55 ಕೋಟಿ. ರೂ.ಗಳ ಅನುದಾನ ಬಿಡುಗಡೆಯಾಗಲಿದೆ. ಅಧಿಕಾರಿಗಳು ಮುಂಬರುವ ದಿನಗಳಲ್ಲಿ ತಮಗೆ ವಹಿಸಿದ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಕುಡಿಯುವ ನೀರಿನ ಸರಬರಾಜು ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ. ಅಧ್ಯಕ್ಷ ಈರಣ್ಣಾ ಕಡಾಡಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿದ್ಯುತ್ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಲಾಯಿತು. ಉಪಾಧ್ಯಕ್ಷೆ ಸುನೀತಾ ಶಿರಗಾಂವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.