ADVERTISEMENT

ಏರ್‌ಮೆನ್‌ಗಳ ನಿರ್ಗಮನ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:00 IST
Last Updated 1 ಅಕ್ಟೋಬರ್ 2012, 6:00 IST

ಬೆಳಗಾವಿ: ನಗರದ ಸಾಂಬ್ರಾದಲ್ಲಿರುವ ಭಾರತೀಯ ವಾಯುನೆಲೆ ಕೇಂದ್ರದಲ್ಲಿ ಯಶಸ್ವಿಯಾಗಿ ತರಬೇತಿಯನ್ನು ಪೂರೈಸಿದ ನಾನ್ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ (ಎನ್‌ಟಿಟಿಐ)ನ 215 ಏರ್‌ಮೆನ್‌ಗಳ ನಿರ್ಗಮನ ಪಥ ಸಂಚಲನವು ಶನಿವಾರ ನಡೆಯಿತು.

ನಿರ್ಗಮನ ಪಥ ಸಂಚಲನ ಮಾಡಿದ 215 ಏರ್‌ಮೆನ್‌ಗಳು ಶೀಘ್ರದಲ್ಲೇ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಭಾರತ ಮಾತೆಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಲಿದ್ದಾರೆ. ದೆಹಲಿಯ ವಾಯುನೆಲೆ ಕೇಂದ್ರದ ಏರ್ ಸ್ಟಾಫ್ (ಎಜ್ಯುಕೇಶನ್)ನ ಸಹಾಯಕ ಮುಖ್ಯಸ್ಥ ಏರ್ ವೈಸ್ ಮಾರ್ಷಲ್ ಸತ್ಯೇಂದ್ರ ಕುಮಾರ ಏರ್‌ಮೆನ್‌ಗಳ ಪಥ ಸಂಚಲನವನ್ನು ಪರಿವೀಕ್ಷಿಸಿದರು. 

ವಿವಿಧ ವಿಭಾಗಗಳಲ್ಲಿ ಸಾಧನೆಗೈದ ಏರ್‌ಮೆನ್‌ಗಳಿಗೆ ಟ್ರೋಫಿಯನ್ನು ವಿತರಿಸಿ ಮಾತನಾಡಿದ ಏರ್ ವೈಸ್ ಮಾರ್ಷಲ್ ಸತ್ಯೇಂದ್ರ ಕುಮಾರ, `ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದೆ. ಕಾಲ ಕಾಲಕ್ಕೆ ಬದಲಾಗುವ ತಾಂತ್ರಿಕತೆಗೆ ತಕ್ಕಂತೆ ನೀವೂ ಅದರ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಬೇಕು. ಭಾರತೀಯ ವಾಯುಪಡೆಯಲ್ಲೆಗ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ತಕ್ಕಂತೆ ನೀವು ಪರಿಶ್ರಮವನ್ನು ವಹಿಸಿ ಸೇವೆ ಸಲ್ಲಿಸಬೇಕು~ ಎಂದು ಸಲಹೆ ನೀಡಿದರು.

`ಅವಕಾಶಗಳನ್ನು ಬಳಸಿಕೊಂಡು ಬದುಕಿನಲ್ಲಿ ಉನ್ನತ ಮಟ್ಟವನ್ನು ತಲುಪಬೇಕು. ಉತ್ತಮ ಕ್ಷಮತೆಯನ್ನು ಹೊಂದುವುದರ ಜೊತೆಗೆ ನಿಮ್ಮ ಗುರಿಯನ್ನು ತಲುಪಲು ಹೋರಾಟ ನಡೆಸಬೇಕು~ ಎಂದು ಯುವ ಏರ್‌ಮೆನ್‌ಗಳಿಗೆ ಅವರು ಕಿವಿಮಾತು ಹೇಳಿದರು.

ಪಥ ನಿರ್ಗಮನ ಸಂಚಲನದಲ್ಲಿ ಏರ್‌ಮೆನ್‌ಗಳು ಡ್ರಿಲ್‌ನೊಂದಿಗೆ ಆಕರ್ಷಕ ಪಥ ಸಂಚಲನವನ್ನು ಪ್ರದರ್ಶಿಸಿದರು.  ಜನರಲ್ ಸರ್ವೀಸ್ ಟ್ರೈನಿಂಗ್ ಹಾಗೂ ಬೆಸ್ಟ್ ಆಲ್‌ರೌಂಡರ್ ಟ್ರೋಫಿಯನ್ನು ಲೀಡಿಂಗ್ ಏರ್‌ಕ್ರಾಫ್ಟ್‌ಮನ್ ರಾಜ ಕುಮಾರ ಪಡೆದುಕೊಂಡರು.
 

ಲೀಡಿಂಗ್ ಏರ್‌ಕ್ರಾಫ್ಟ್‌ಮನ್‌ಗಳಾದ ಸಾತವೀರ ಹಾಗೂ ದಿಬಾಕರ ಪ್ರಧಾನ ಅವರು ಕ್ರಮವಾಗಿ ಎಡ್ಮಿನ್ ಅಸಿಸ್ಟಂಟ್ ಹಾಗೂ ಅಕೌಂಟ್ಸ್ ಅಸಿಸ್ಟಂಟ್ ಟ್ರೇಡ್ಸ್ ವಿಭಾಗದಲ್ಲಿ ಬಹುಮಾನ ಗೆದ್ದುಕೊಂಡರು. ಸೆರಜಂಟ್ ಭುರಿ ಸಿಂಗ್ ಅವರು ಎಜ್ಯುಕೇಶನ್ ಇನ್‌ಸ್ಟ್ರಕ್ಟರ್ ಟ್ರೇಟ್‌ನಲ್ಲಿ ಬಹುಮಾನ ಪಡೆದುಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT