ADVERTISEMENT

ಕಂಪ್ಯೂಟರ್ ಬಳಕೆಯಿಂದ ಪುಸ್ತಕ ನಿರ್ಲಕ್ಷ್ಯ: ಆತಂಕ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 12:45 IST
Last Updated 10 ಮಾರ್ಚ್ 2011, 12:45 IST

ಬೆಳಗಾವಿ: ಕಂಪ್ಯೂಟರ್ ಬಳಕೆಯಿಂದ ಪುಸ್ತಕಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ಸಮಾಜದಲ್ಲಿ ಬೆಳೆಯುತ್ತಿದ್ದು, ಪುಸ್ತಕಗಳ ನಿರ್ಲಕ್ಷ್ಯ ಭಾವನೆ ತೊರೆದು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಹಾಗೂ ಕೇರಳ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ಹಾಗೂ ಕರ್ನಾಟಕ ಕಾನೂನು ಆಯೋಗದ ಆಧ್ಯಕ್ಷ ನ್ಯಾಯಮೂರ್ತಿ ವಿ.ಎಸ್. ಮಳಿಮಠ ಕರೆ ನೀಡಿದರು.

ನಗರದ ಲಿಂಗರಾಜ ಕಾಲೇಜು ಮೈದಾನದಲ್ಲಿ ಬುಧವಾರ ಸಮಗ್ರ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಜ್ಞಾನ ಆಸ್ತಿ ವಿಶ್ವದ ಅತೀ ದೊಡ್ಡ ಆಸ್ತಿಯಾಗಿದೆ. ಓದುವ ಹವ್ಯಾಸದಿಂದ ಜ್ಞಾನಾಭಿವೃದ್ಧಿ ಆಗುವ ಹಿನ್ನಲೆಯಲ್ಲಿ ಇದರ ಮಹತ್ವವನ್ನು ತಿಳಿ ಹೇಳುವ ದಿಸೆಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಪುಸ್ತಕ ಪ್ರದರ್ಶನವನ್ನು ಹಮ್ಮಿಕೊಂಡಿರುವುದು ಪ್ರಶಂಸಾರ್ಹವಾಗಿದೆ ಎಂದರು.

ಬೆಳಗಾವಿಯು ಸ್ವಾತಂತ್ರ್ಯ ಹೋರಾಟಗಾರರ ಪುಣ್ಯಭೂಮಿ ಯಾಗಿದೆ. ಅನೇಕ ಶರಣರ ದಾನಶೂರರ ಭೂಮಿಯಾಗಿದೆ. ಇಂತಹ ನೆಲದಲ್ಲಿ ವಿಶ್ವ ಕನ್ನಡ ಸಮ್ಮೇಳನ ಹಮ್ಮಿಕೊಂಡಿವುದು ಸಮಸ್ತ ಕನ್ನಡಿಗರ ಅಭಿಮಾನದ, ಸ್ವಾಭಿಮಾನದ, ಏಕೀಕರಣದ, ಕನ್ನಡಿಗರ ಭಾವೆಕ್ಯತೆಯ, ಕರ್ನಾಟಕ ಪ್ರಗತಿಯ, ಕನ್ನಡ ಸಾಹಿತ್ಯ ಪ್ರತಿಷ್ಠೆಯ, ಜ್ಞಾನ ದಾಸೋಹದ ಸಂಕೇತವಾಗಿದೆ. ಕರ್ನಾಟಕ ವಿಶ್ವದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ವಿಶ್ವಕ್ಕೆ ಕನ್ನಡದ ಹಿರಿಮೆ ತೋರಿಸುವ ಅವಕಾಶ ಒದಗಿ ಬಂದಿದ್ದು, ಈ ವಿಶ್ವ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಪಟ್ಟ ದೊರೆತಿದ್ದು, ಸಮಸ್ತ ಕನ್ನಡಿಗರಿಗೆ ಅಭಿಮಾನ ತರುವ ಸಂಕೇತವಾಗಿದೆ. ಅದರಂತೆ 7 ಜ್ಞಾನಪೀಠ ಪ್ರಶಸ್ತಿ ಪಡೆದ ಏಕೈಕೆ ಭಾಷೆ ಎಂದು ಹೆಗ್ಗಳಿಕೆ ನಮ್ಮದು. ಇಂತಹ ನಾಡಿನ ಜಿಲ್ಲೆಯಾದ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಕೆ.ಎಲ್.ಇ. ಸಂಸ್ಥೆಯ ಕೊಡುಗೆಯನ್ನು ಸಹ ಈ ಸಂದರ್ಭದಲ್ಲಿ ಸ್ಮರಿಸಿದ ಅವರು,  ಪುಸ್ತಕ ಪ್ರದರ್ಶನದಲ್ಲಿ ಅತ್ಯಂತ ಪ್ರಾಚೀನ ಕಾಲದ ಪುಸ್ತಕಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಲಾಭ ಪಡೆಯಬೇಕು ಎಂದು ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಅವರು, ಬೆಳಗಾವಿ ಜಿಲ್ಲೆಯ ಪ್ರವಾಸಿ ಕೈಪಿಡಿ ಬಿಡುಗಡೆ ಮಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಸಿದ್ದಲಿಂಗಯ್ಯ ಅವರು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಭಿತ್ತಿ ಪತ್ರ ಬಿಡುಗಡೆ ಮಾಡಿ ಈ ಪುಸ್ತಕ ಪ್ರದರ್ಶನದಲ್ಲಿ 90 ಪ್ರಕಾಶಕರು ಭಾಗವಹಿಸಿದ್ದಾರೆ. 1855 ರಿಂದ ಪ್ರಕಟವಾದ ಪ್ರಾಚೀನ ಪುಸ್ತಕಗಳು ಲಭ್ಯವಿದ್ದು, ಇದರ ಲಾಭ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕತಿ ಖಾತೆ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸಂಸದ ಸುರೇಶ ಅಂಗಡಿ, ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಸಂಜಯ ಪಾಟೀಲ, ಜಗದೀಶ ಮೆಟಗುಡ್ಡ, ಮಹಾಂತೇಶ ಕವಟಗಿಮಠ, ಜಿಲ್ಲಾ ಪಂಚಾಯತ್ ಅಧ್ಯಕ್ಷ  ಈರಣ್ಣ ಕಡಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ, ಬೆಳಗಾವಿ ಜಿಲ್ಲಾಧಿಕಾರಿ ಡಾ. ಏಕರೂಪ ಕೌರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.