ADVERTISEMENT

ಕಂಬಾರರ ಕೃತಿ ಅಧ್ಯಯನವೇ ಗೌರವ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 9:55 IST
Last Updated 1 ಅಕ್ಟೋಬರ್ 2011, 9:55 IST

ರಾಮದುರ್ಗ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರಿಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಸಾಲದು. ನಿಜವಾಗಿಯೂ ಅಭಿನಂದನೆ ಸಲ್ಲಿಸಬೇಕೆಂಬುವರು ಕಂಬಾರರ ಕೃತಿಗಳನ್ನು ಓದಿ ಸಾರ್ಥಕತೆ ಪಡೆಯಬೇಕು ಎಂದು ಡಾ. ವೈ.ಎಂ. ಯಾಕೊಳ್ಳಿ ಹೇಳಿದರು.

ಇಲ್ಲಿನ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಚುಟುಕು ಸಾಹಿತ್ಯ ಪರಿಷತ್ ಮತ್ತು ವಿಶ್ವಕರ್ಮ ಸಮಾಜದ ವತಿಯಿಂದ ಜಂಟಿಯಾಗಿ ಹಮ್ಮಿಕೊಂಡಿದ್ದ `ಡಾ. ಚಂದ್ರಶೇಖರ ಕಂಬಾರ ಅವರ ಅಭಿನಂದನಾ~ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ವಿಶ್ವಕರ್ಮ ಸಮಾಜ ಸೂಕ್ಷ್ಮ ಸಮಾಜವಾಗಿದೆ. ಕಂಬಾರರಂತೆ ಸಮಾಜದ ಪ್ರತಿಯೊಬ್ಬರು ಉನ್ನತ ಮಟ್ಟಕ್ಕೇರಲು ಯತ್ನಿಸಬೇಕೆಂದು ನುಡಿದರು.

ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರರು ಕೇವಲ ಒಂದೇ ಸಮಾಜ ಸೀಮಿತವಾದವರಲ್ಲ. ಕಂಬಾರರು ಈ ನಾಡಿನ ಆಸ್ತಿ ಎಂದು ಬಿಜೆಪಿ ಧುರೀಣ ರಮೇಶ ದೇಶಪಾಂಡೆ ಪ್ರತಿಪಾದಿಸಿದರು. ಇನ್ನೊಬ್ಬ ಉಪನ್ಯಾಸಕ ಪ್ರೊ. ವಿ.ಬಿ. ಸೋಮಣ್ಣವರ ಡಾ. ಚಂದ್ರಶೇಖರ ಕಂಬಾರರ ಕುರಿತು ಮಾತನಾಡಿದರು.
ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಶಿಕಾಂತ ನೆಲ್ಲೂರ, ರಾಜ್ಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಈರಪ್ಪ ಬಡಿಗೇರ ವೇದಿಕೆ ಮೇಲಿದ್ದರು.


ಸಮಾಜದ ಮುಖಂಡ ವಿ. ಡಿ. ಕಮ್ಮಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುತ್ತು ಕಮ್ಮಾರ ಸ್ವಾಗತಿಸಿದರು. ಎಸ್. ವಿ. ಸೊಗಲದ ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ ಶಲವಡಿ ವಂದಿಸಿದರು. ಲಲಿತಾ ಕಲಾ ಪ್ರಶಸ್ತಿ ಪುರಸ್ಕೃತ ಮುಳ್ಳೂರಿನ ಕುಸುರಿ ಕಲಾವಿದ ವೀರಭದ್ರಪ್ಪ ದೇವೇಂದ್ರಪ್ಪ ಬಡಿಗೇರಿ ಅವರನ್ನು ಸಮಾಜದ ಪರವಾಗಿ ಬಸಪ್ಪ ಬಾಳಪ್ಪ ಬಡಿಗೇರ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಇದಕ್ಕೂ ಮುಂಚೆ ಡಾ. ಚಂದ್ರಶೇಖರ ಕಂಬಾರರ ಭಾವಚಿತ್ರವನ್ನು ಇಲ್ಲಿನ ವೆಂಕಟೇಶ್ವರ ದೇವಸ್ಥಾನದಿಂದ ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಪಟ್ಟಣದ ತೇರ ಬಜಾರ ಅಂಬೇಡ್ಕರ್ ಬೀದಿ, ಬೆಳಗಾವಿ ರಸ್ತೆ, ಬಸವೇಶ್ವರ ಮಾರ್ಗಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಚಿಪ್ಪಲಕಟ್ಟಿಯ ಗಜರಾಜ ಆಕರ್ಷಣೆಯಾಗಿತ್ತು. ಡೊಳ್ಳು,  ಕರಡಿ ಮಜಲು ಮೆರವಣಿಗೆಗೆ ಸಾಥ್ ನೀಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT