ADVERTISEMENT

ಕನ್ನಡದಲ್ಲೇ ಮುಂಬೈ ಹೈಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 7:30 IST
Last Updated 2 ಜನವರಿ 2012, 7:30 IST

ಬೆಳಗಾವಿ: ಮಹಾರಾಷ್ಟ್ರ ಸರ್ಕಾರವು ಅತ್ತ ಬೆಳಗಾವಿ ಗಡಿ ಬಗ್ಗೆ ಇನ್ನೂ ಕ್ಯಾತೆ ತೆಗೆಯುತ್ತಿದ್ದರೆ, ಸ್ವಾತಂತ್ರ್ಯ ಪೂರ್ವದಲ್ಲೇ ಮುಂಬೈ ನ್ಯಾಯಾಧಿಕಾರದ ಹೈಕೋರ್ಟ್‌ನಲ್ಲಿ ಕನ್ನಡ ಭಾಷೆ ಬಳಕೆಯಾಗುತ್ತಿರುವ ಬಗ್ಗೆ ಒಂದೊಂದೇ ದಾಖಲೆಗಳು ಹೊರ ಬೀಳುತ್ತಿವೆ.

ಬೆಳಗಾವಿ ಜಿಲ್ಲೆ ಭಾಷಾವಾರು ಪ್ರಾಂತಗಳ ರಚನೆಯ ಪೂರ್ವದಲ್ಲಿ (1956) ಮುಂಬೈ ಪ್ರಾಂತದ ಆಡಳಿತಕ್ಕೆ ಒಳಪಟ್ಟಿತ್ತು. ಅಂದಿನಿಂದಲೂ ಇಲ್ಲಿ ಕನ್ನಡ ಪ್ರಮುಖ ಆಡಳಿತ ಭಾಷೆಯಾಗಿತ್ತು ಎಂಬುದಕ್ಕೆ ಮುಂಬೈ ಹೈಕೋರ್ಟ್‌ನ ಆದೇಶದ ದಾಖಲೆಗಳು ಖಚಿತಪಡಿಸುತ್ತಿವೆ.

ದಿವಾಣಿ ಅರ್ಜಿ ನಂ. 553ರಲ್ಲಿ ಅರ್ಜಿದಾರರಾದ ಜಿಲ್ಲೆಯ ವಂಟಮೂರಿಯ ರಾಜಾ ಲಖಮಗೌಡ ಬಸವಪ್ರಭು ಸರದೇಸಾಯಿ ಅವರು ಪ್ರಿ.ವಿ. ಕೌನ್ಸಿಲ್‌ಗೆ ಅಪೀಲು ಮಾಡಲು ಪರವಾನಿಗೆ ಕೇಳಿದ್ದರು. ಪ್ರತಿವಾದಿಯಾದ ಹುಕ್ಕೇರಿ ತಾಲ್ಲೂಕಿನ ವಂಟಮೂರಿಯ ಅಪ್ಪಾಸಾಹೇಬ ಬಸವಂತರಾವ  ಉರ್ಫ್ ಅಣ್ಣಾ ಸಾಹೇಬ ಸುಬೇದಾರ ಅವರಿಗೆ ಸೆಪ್ಟೆಂಬರ್ 10, 1026ರಲ್ಲಿ ಮುಂಬೈ ಹೈಕೋರ್ಟ್ ಕನ್ನಡದಲ್ಲಿ ನೋಟಿಸ್ ಹೊರಡಿಸಿತ್ತು. ಇದರ ಮೂಲ ಪ್ರತಿಯನ್ನು ಸುಬೇದಾರ ಮನೆತನದ ರಾವಸಾಹೇಬ ಅಪ್ಪಾಸಾಹೇಬ ಸುಬೇದಾರ ಅವರು ಬೆಳಗಾವಿಯ ವಕೀಲರಾದ ಎಸ್.ವಿ. ಪಾಟೀಲರಿಗೆ ಒಪ್ಪಿಸಿದ್ದಾರೆ.

ಮೇ 1926ರಲ್ಲಿ ಬೆಳಗಾವಿಯಲ್ಲಿ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಕೇಸರಿ ಪತ್ರಿಕೆ ಸಂಪಾದಕ ಎನ್.ಸಿ. ಕೇಳಕರ ಅವರು, ಪ್ರಕಟಣೆ ಹೊರಡಿಸಿ `ಬೆಳಗಾವಿ ಜಿಲ್ಲೆ ಪೂರ್ವದಿಂದಲೂ ಕರ್ನಾಟಕ ಪ್ರಾಂತದಲ್ಲಿ ಇದೆ. ಇಲ್ಲಿಯ ಪ್ರಮುಖ ಭಾಷೆ ಕನ್ನಡವಾಗಿದೆ~ ಎಂದು ಸ್ಪಷ್ಟಪಡಿಸಿದ್ದರು ಎಂಬುದನ್ನು ವಕೀಲರಾದ ಎಸ್.ವಿ. ಪಾಟೀಲ ಹಾಗೂ ರಾಜ್ಯ ವಕೀಲರ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷ ರವೀಂದ್ರ ತೋಟಿಗೇರ ಸ್ಮರಿಸಿಕೊಂಡಿದ್ದಾರೆ.
ಬೆಳಗಾವಿ ಗಡಿ ವಿಭಾಗದ ಬಗ್ಗೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ಗೆ ಈ ದಾಖಲೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.