ADVERTISEMENT

ಕಬ್ಬಿನ ಬಿಲ್ ಪಾವತಿಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 8:20 IST
Last Updated 1 ಜೂನ್ 2011, 8:20 IST

ಬೆಳಗಾವಿ: ಪ್ರಸಕ್ತ ಸಾಲಿನ ಕಬ್ಬಿನ ಬಿಲ್ ಪಾವತಿಸುವಂತೆ ಕಾರ್ಖಾನೆಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿ ಮಂಗಳವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡಿದರು.

ಕಬ್ಬು ನುರಿಸಿ ಮೂರು ತಿಂಗಳು ಕಳೆದಿದೆ. ಆದರೂ ಬಿಲ್ ನೀಡಿರುವುದಿಲ್ಲ. ಕಬ್ಬು ತೆಗೆದುಕೊಂಡ 15 ದಿನದ ಒಳಗೆ ಬಿಲ್ ಪಾವತಿಸಬೇಕು ಎಂದು ನಿಯಮವಿದ್ದರೂ ಕಾರ್ಖಾನೆಗಳು ಪಾಲಿಸುತ್ತಿಲ್ಲ ಎಂದು ಎಂದು ದೂರಿದರು.

ಒಂದು ಟನ್ ಕಬ್ಬಿಗೆ 1,800 ರೂಪಾಯಿ ಕೊಡುವುದಾಗಿ ಹೇಳಲಾಗಿತ್ತು. ಆದರೆ ಈಗ ಕಡಿಮೆ ಹಣ ನೀಡುವ ಮೂಲಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಕೂಡಲೇ ಹಣ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಳೆದ ಸಾಲಿನ 200 ರೂಪಾಯಿಯನ್ನು ಈಗಾಗಲೇ 11 ಕಾರ್ಖಾನೆಗಳು ನೀಡಿವೆ. ಉಳಿದ ಕಾರ್ಖಾನೆಗಳು ನೀಡುವಂತೆ ಸೂಚಿಸಬೇಕು. ಪಕ್ಕದ ಮಹಾರಾಷ್ಟ್ರ ಕಾರ್ಖಾನೆಗಳು ಇಲ್ಲಿಗಿಂತ ಪ್ರತಿ ಟನ್‌ಗೆ 300 ರೂಪಾಯಿ ಹೆಚ್ಚಿಗೆ ನಿಡುತ್ತಾರೆ. ಇಲ್ಲಿ ಮಾತ್ರ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆಪಾದಿಸಿದರು. ಕಬ್ಬು ದರ ನಿಗದಿಗಾಗಿ ಎಸ್‌ಎಪಿ ಕಾಯ್ದೆ ಜಾರಿಗೊಳಿಸಬೇಕು. ಕಬ್ಬಿನಿಂದ ಬರುವ ಇತರ ಉಪ ಉತ್ಪನ್ನಗಳಲ್ಲಿಯೂ ರೈತರಿಗೆ ಪಾಲಿ ನೀಡಬೇಕು ಎಂದು ಆಗ್ರಹಿಸಿದರು.

ಕೂಡಲೇ ಎಲ್ಲ ಕಾರ್ಖಾನೆಗಳ ಪ್ರತಿನಿಧಿಗಳ ಹಾಗೂ ರೈತರ ಸಭೆ ಕರೆಯಬೇಕು. ಈ ಕುರಿತು ಒಪ್ಪಂದವಾಗಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಲಾಯಿತು.

ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ, ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಷಾ, ಟಿ.ಟಿ. ಮುರುಕಟ್ನಾಳ, ಲಿಂಗರಾಜ ಪಾಟೀಲ, ಬಾಳಜ್ಜ ಗೋದಳ್ಳಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.