ADVERTISEMENT

ಕಾನೂನು ಸೂಕ್ಷ್ಮತೆ ತಿಳಿಯಿರಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2011, 8:55 IST
Last Updated 28 ಮಾರ್ಚ್ 2011, 8:55 IST
ಕಾನೂನು ಸೂಕ್ಷ್ಮತೆ ತಿಳಿಯಿರಿ
ಕಾನೂನು ಸೂಕ್ಷ್ಮತೆ ತಿಳಿಯಿರಿ   

ಸವದತ್ತಿ: ಕಾನೂನಿನ ಸೂಕ್ಷ್ಮತೆ ಗೊತ್ತಿಲ್ಲದಿದ್ದಾಗ ವ್ಯಾಜ್ಯ ಹುಟ್ಟಿಕೊಳ್ಳುತ್ತವೆ. ಇದರಿಂದ ನ್ಯಾಯಾಲಯದ ಅಲೆದಾಡುವುದು ಅನಿವಾರ್ಯವಾಗುವುದು. ಇದರಿಂದ ಮುಕ್ತಿ ಪಡೆದು ನೆಮ್ಮದಿಯ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ಮೂರು ವಿಧದ ನ್ಯಾಯ ಪದ್ಧತಿಗಳನ್ನು ಜಾರಿಗೆ ತರಲಾಗಿದೆ. ಅದನ್ನು ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದು ನ್ಯಾಯಾಧೀಶ ಬಿ. ಜಯಂತಕುಮಾರ ಹೇಳಿದರು.

ಇಲ್ಲಿನ ಜೈಂಟ್ಸ್ ಗ್ರೂಪ್, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಅಯೋಜಿಸಿದ್ದ ಗ್ರಾಹಕರ ಹಿತರಕ್ಷಣಾ ಕಾಯ್ದೆ ತಿಳುವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವ್ಯಾಜ್ಯ ಹೊತ್ತು ಬರುವವರಿಗೆ ಮೊದಲು ‘ಕಾನೂನು ಅರಿವು’ ನೀಡಿ ನೆರವಾಗಲಾಗುವುದು. ನಂತರ ಪರಸ್ಪರ ಒಪ್ಪಂದದ ಮೂಲಕ ಲೋಕ ಅದಾಲತ್‌ನಲ್ಲಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಗ್ರಾಹಕ ವೇದಿಕೆ ಸದಸ್ಯರಾದ ಎಸ್.ಎಲ್. ಮಟ್ಟಿ ಮಾತನಾಡಿ, ಯಾವುದೇ ವ್ಯಕ್ತಿ ತನ್ನ ಅಥವಾ ತನ್ನ ಮನೆತನಕ್ಕೆ ಅಗತ್ಯವಿರುವ ವಸ್ತುವನ್ನು ಖರೀದಿಸಿದ ಸರಕು ಮತ್ತು ಸೇವೆಯ ಉದ್ದೇಶ ಈಡೇರದೆ ನ್ಯೂನತೆ ಕಂಡು ಬಂದಾಗ ನ್ಯಾಯಾಲಯದ ಮೊರೆ ಹೋಗಿ, ಪರಿಹಾರ ಪಡೆಯಬಹುದು. ಆದರೆ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದು ಅನಿವಾರ್ಯ ಎಂದು ತಿಳಿಸಿದರು.

ನ್ಯಾಯಾಧೀಶ ಪಿ.ಜಿ. ಚಲುವಮೂರ್ತಿ, ಕಡಿಮೆ ದರದಲ್ಲಿ ಹೆಚ್ಚಿನ ಲಾಭ ಪಡೆಯುವ ದುರಾಸೆಯಿಂದ ಜನರು ಮೊಸ ಹೊಗುತ್ತಿದ್ದಾರೆ. ಹೀಗಾಗಿ ಗ್ರಾಹಕರಿಗೆ ‘ಕಾನೂನು ಎಚ್ಚರಾ; ಗ್ರಾಹಕ ಎಚ್ಚರಾ’ ಎಂದು ಅರಿವು ಮೂಡಿಸುವ ಜೊತೆಗೆ ಅನೇಕ ಸವಲತ್ತು ಒದಗಿಸಿದೆ. ಅದಾಗ್ಯೂ ಜನ ಜಾಗೃತರಾಗುತ್ತಿಲ್ಲ ಎಂದು ವಿಷಾದಿಸಿದರು. ವಕೀಲ ಜಗದೀಶ ಕುಸುಗಲ್ಲ, ಎಸ್.ಎಸ್. ಪಾಟೀಲಪದಕಿ, ಜಗದೀಶ ಹಂಪಣ್ಣವರ, ಆರ್.ಎಂ. ನಡವನಿ ಉಪಸ್ಥಿತರಿದ್ದರು. ಉಮೇಶ ಸರದಾರ ಸ್ವಾಗತಿಸಿದರು. ಪ್ರೊ. ಎಂ.ಎಸ್. ಬಾಗೇವಾಡಿ ನಿರೂಪಿಸಿದರು. ಪ್ರಶಾಂತ ಲಾಳಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.