ADVERTISEMENT

`ಕಾರಹುಣ್ಣಿಮೆ ಕರಿ' ಹರಿಯುವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಜುಲೈ 2013, 9:53 IST
Last Updated 23 ಜುಲೈ 2013, 9:53 IST
ಹುಕ್ಕೇರಿ ತಾಲ್ಲೂಕಿನ ಬಡಕುಂದ್ರಿಯಲ್ಲಿ ಎತ್ತು ಮತ್ತು ಹೋರಿಗಳ ಮೆರವಣಿಗೆ ಮಾಡುವ ಮೂಲಕ `ರೈತರ ಹಬ್ಬ ಕಾರಹುಣ್ಣಿಮೆ'ಯನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು
ಹುಕ್ಕೇರಿ ತಾಲ್ಲೂಕಿನ ಬಡಕುಂದ್ರಿಯಲ್ಲಿ ಎತ್ತು ಮತ್ತು ಹೋರಿಗಳ ಮೆರವಣಿಗೆ ಮಾಡುವ ಮೂಲಕ `ರೈತರ ಹಬ್ಬ ಕಾರಹುಣ್ಣಿಮೆ'ಯನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು   

ಹುಕ್ಕೇರಿ: ನೂರಾರು ವರ್ಷಗಳಿಂದ ನಡೆದು ಬಂದ ರೈತರ ಹಬ್ಬ `ಕಾರಹುಣ್ಣಿಮೆ ಕರಿ' ಹರಿಯುವ ಕಾರ್ಯಕ್ರಮ ಪಟ್ಟಣದಲ್ಲಿ ಶನಿವಾರ ಸಾಂಪ್ರದಾಯಿಕವಾಗಿ ಮತ್ತು ವಿಧಿವತ್ತಾಗಿ ಸಂಭ್ರಮದಿಂದ ಜರುಗಿತು.

ಪಟ್ಟಣದ ನಾಯಿಕ ಗಲ್ಲಿ, ಸಂಬಾಳ ಗಲ್ಲಿ ಹಾಗೂ ಮಾರುತಿ ಗುಡಿಯ ಬಳಿ ಸೇರಿ ಒಟ್ಟು ಮೂರು ಕಡೆ  ಕರಿ ಹರಿಯುವ ಕಾರ್ಯಕ್ರಮ ನಡೆದವು. ಮೊದಲಿಗೆ ಸಂಬಾಳ ಗಲ್ಲಿಯಲ್ಲಿ, ನಂತರ ಸುಟಗೊನ್ನವರ ಗಲ್ಲಿಯಲ್ಲಿ ತದನಂತರ ಮಾರುತಿ ಮಂದಿರ ಬಳಿ ಸಾರ್ವಜನಿಕ ಕರಿ ಹರಿಯಲಾಯಿತು.

ಸಾರ್ವಜನಿಕ ಕರಿ ಹರಿಯುವ ಹಕ್ಕು ಕೊಟಬಾಗಿ ಮನೆತನಕ್ಕಿದ್ದು, ಅವರ ಕರಿ ಹರಿಯಲಿರುವ ಎತ್ತನ್ನು ಮುಂಜಾನೆ ಸ್ವಚ್ಛಗೊಳಿಸಿ ಮೈಗೆ, ಕೊಂಬುಗಳಿಗೆ ಬಣ್ಣ ಬಳಿದು ರಿಬ್ಬನ್ ಕಟ್ಟುತ್ತಾರೆ. ಕೊರಳಲ್ಲಿ ಗಂಟೆ ಸರ ಮೈಮೇಲೆ ಝೂಲು ಹಾಕಿ ಅಲಕಂರಿಸಿ ಅದನ್ನು ಮಧ್ಯಾಹ್ನ ಪೊಲೀಸ್ ಪಾಟೀಲರ ಮನೆಗೆ ತರಲಾಗುತ್ತದೆ.

ಪಾಟೀಲರ ಮನೆಯಲ್ಲಿ ಕುಟುಂಬದ ಮಹಿಳೆಯರು ಕರಿ ಹರಿಯುವ ಎತ್ತಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸುವರು.
ಸಂಜೆ ವಾದ್ಯಗಳೊಂದಿಗೆ ಎತ್ತಿನ ಮೆರವಣಿಗೆ ಪ್ರಾರಂಭಗೊಳ್ಳುವುದು. ಮಾರುತಿ ಮಂದಿರದ ಬಳಿ ರಚಿಸಲಾದ ಮುಳ್ಳು ಬನ್ನಿ ಹಾಗೂ ಅರಳಿ ಮರದ ಎಲೆಗಳಿಂದ ತಯಾರಿಸಿ ಕಟ್ಟಲಾದ ತೋರಣವನ್ನು ಹರಿದು ಎತ್ತು ಬೇಲಿ ಜಿಗಿದು ಹೋದರೆ ಕರಿ ಹರಿಯಿತು ಎನ್ನಲಾಗುವುದು.

ಕರಿ ಹರಿದ ನಂತರ ರಸ್ತೆಗೆ ಅಡ್ಡಕ್ಕೆ ಇರಿಸಿದ್ದ ಮುಳ್ಳು ಬೇಲಿಯ ಟೊಂಗೆಗಳನ್ನು ಜನರು  ಕೈಯಲ್ಲಿ ಹಿಡಿದುಕೊಂಡು ತಮ್ಮ ಮನೆಗಳ ಮೇಲೆ ಒಗೆಯುವ ಪದ್ಧತಿ ಇಂದಿಗೂ ಮುಂದುವರೆದಿದೆ. ಇದರಿಂದ ಸುಖ, ಶಾಂತಿ, ನೆಮ್ಮದಿ ದೊರೆತು ಮುಂಗಾರು ಹಾಗೂ ಹಿಂಗಾರು ಬೆಳೆಗಳು ಚೆನ್ನಾಗಿ ಬರುತ್ತವೆಯೆಂಬ ಭಾವನೆ ರೈತ ಸಮೂಹದಲ್ಲಿದೆ.

ರೈತರು ತಮ್ಮ ಮನೆಗಳಲ್ಲಿ ಎತ್ತುಗಳನ್ನು ಪೂಜಿಸಿದರೆ ಇನ್ನಿತರರು ಮಣ್ಣಿನಿಂದ ತಯಾರಿಸಿದ ಜೋಡು ಎತ್ತುಗಳನ್ನು ಪೂಜಿಸುತ್ತಾರೆ. ಕುಂಬಾರ ಕುಟುಂಬದವರು ಹೊಲಗಳಲ್ಲಿಯ ಕರಿಯ ಜಿಗುಟಾದ ಮಣ್ಣನ್ನು ಮನೆಗೆ ತಂದು ಬಸವಣ್ಣನ ಮೂರ್ತಿಗಳನ್ನು ತಯಾರಿಸಿ ಮುಂಜಾವಿನಲ್ಲಿ ಪ್ರತಿಯೊಬ್ಬರ ಮನೆ ಮನೆಗೆ ಹೋಗಿ ಮಾರಾಟ ಮಾಡುತ್ತಾರೆ.

ಹೆಣ್ಣು ಮಕ್ಕಳು ಬಸವಣ್ಣನ ಜೋಡು ಮೂರ್ತಿಗಳನ್ನು ಖರೀದಿಸಿ ಪೂಜೆ ಸಲ್ಲಿಸಿ ಆರತಿ ಬೆಳಗಿ ಹೋಳಿಗೆಯ ನೈವೇದ್ಯ ಅರ್ಪಿಸುತ್ತಾರೆ. ಎಲ್ಲರ ಮನೆಗಳಲ್ಲಿ ಕರಿಯ ದಿನ ಹೋಳಿಗೆಯ ಊಟ. ಈ ಬಾರಿ ಅಡ್ಡ ಮಳೆಗಳು ಅಥವಾ ಮುಂಗಾರು ಮಳೆಯಾಗದ್ದರಿಂದ ರೈತರು ಚಿಂತೆಗೀಡಾಗಿದ್ದರು. ಆದರೆ ಕಳೆದ ನಾಲ್ಕಾರು ದಿನಗಳಿಂದ ಮಳೆ ಆಗುತ್ತಿದೆ. ಇದರಿಂದ ರೈತರ ಮುಖದಲ್ಲಿ ಸಂತೋಷ ಮೂಡಿದೆ. ಕರಿ ಹರಿಯುವ ಸಂದಂರ್ಭದಲ್ಲಿ ಜಿಟಿ  ಜಿಟಿ ಮಳೆಯಿದ್ದರೂ ಜನರು ಮಳೆ ಲಕ್ಷಿಸದೆ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಬಡಕುಂದ್ರಿಯಲ್ಲಿ ಸಂಭ್ರಮ
ಹುಕ್ಕೇರಿ ತಾಲ್ಲೂಕಿನ ಬಡಕುಂದ್ರಿ ಗ್ರಾಮದಲ್ಲಿ ಎತ್ತು ಮತ್ತು ಹೋರಿಗಳ ಮೆರವಣಿಗೆ ಮಾಡುವ ಮೂಲಕ  ರೈತರು ಕಾರ ಹುಣ್ಣಿಮೆಯನ್ನು ಭಾನುವಾರ ಸಂಭ್ರಮದಿಂದ ಆಚರಿಸಿದರು.

ವರ್ಷವಿಡೀ ದುಡಿದು ಬಸವಳಿದ ಎತ್ತು ಮತ್ತು ಹೋರಿ (ಬಸವಣ್ಣ) ಮೈತೊಳೆದು, ಹುರಮಂಜು, ಬಣ್ಣ ಹಚ್ಚಿ ಹೂಮಾಲೆ ಹಾಕಿ ಕೊಂಬಿಗೆ ರಿಬ್ಬನ್ ಕಟ್ಟಿ ಶೃಂಗರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮದ್ದು, ಪಟಾಕಿ ಹಾರಿಸಿ, ವಾಧ್ಯಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು.

ಮುಂಗಾರು ಮಳೆಯ ಉತ್ತಮ ಪ್ರವೇಶದಿಂದ ಹರ್ಷಗೊಂಡಿರುವ ರೈತರು ಬಿತ್ತನೆ ಕಾರ್ಯದ ತರುವಾಯ ಕಾರಹುಣ್ಣಿಮೆ ಅಥವಾ ಚಿಕ್ಕಾರ ಹುಣ್ಣಿಮೆಯಲ್ಲಿ ಆಯಾ ಊರಿನ ಪದ್ಧತಿಯಂತೆ ಹಬ್ಬವನ್ನು ಆಚರಿಸುತ್ತಾರೆ. ಹೊಲ-ಗದ್ದೆಗಳಲ್ಲಿ ಉತ್ತಿ-ಬಿತ್ತಿ ಬೆಳೆ ಬೆಳೆಯಲು ಅನ್ನದಾತನಿಗೆ ಬೆನ್ನೆಲುಬಾಗಿರುವ ಎತ್ತುಗಳಿಗೆ ಗ್ರಾಮದ ಮಹಿಳೆಯರು ನೀರು ಹಾಕಿ, ಆರತಿ ಬೆಳಗಿ ಸ್ವಾಗತಿಸಿದರು.

ಹಬ್ಬದ ಪ್ರಯುಕ್ತ ಗ್ರಾಮದ ಪ್ರಮುಖ ದೇವರಿಗೆ ವಿಶೇಷ ಪೂಜೆ ಹಾಗೂ ನೈವೇದ್ಯ ಅರ್ಪಿಸಲಾಯಿತು. ಚಂದ್ರಪ್ಪ ಮರಡಿ, ಕಲ್ಲಪ್ಪ ಚೌಗಲಾ, ಮಾರುತಿ ಖಾನಾಪುರಿ, ಗಂಗಪ್ಪ ಮೆನಸನ್ನವರ, ಗುರಪ್ಪ ಮಾನಗಾಂವಿ, ಅಶೋಕ ಚೌಗಲಾ,  ಮಲ್ಲಿಕಾರ್ಜುನ ಮಾನಗಾಂವಿ, ಅಡಿವೆಪ್ಪ ಚೌಗಲಾ, ಶಂಕರ ನಾಶಿಪುಡಿ, ಅಶೋಕ ಈರಗಾರ, ರಾಮಚಂದ್ರ ಬಿದರಿ ಹಾಗೂ ಮಾರುತಿ ಗುರವ ಇವರಿಗೆ ಸೇರಿದ ಹೋರಿ ಮತ್ತು ಎತ್ತುಗಳನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು.

ರಾಮಪುರದಲ್ಲಿ ಕಾರಹುಣ್ಣಿಮೆ
ನಿಪ್ಪಾಣಿ:
ಸಮೀಪದ ರಾಮಪುರ ಗ್ರಾಮದಲ್ಲಿ ಭಾನುವಾರ ಕಾರ ಹುಣ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ರಾಮಲಿಂಗ ದೇಗುಲದ ಹತ್ತಿರ ನಾಲ್ಕು ಟ್ರಾಲಿ ಬನ್ನಿ ಸುಮಾರು 15 ಅಡಿಗಳಷ್ಟು ಒಟ್ಟಲಾಗಿತ್ತು.

ಶಿವಗೊಂಡಾ ಪಾಟೀಲ ಇವರ ಎತ್ತಿನ ಜೋಡಿಯನ್ನು ಶೃಂಗರಿಸಿ ಗ್ರಾಮದಲ್ಲಿ ಸಕಲ ವಾದ್ಯವೃಂದಗಳೊಂದಿಗೆ ಮೆರವಣಿಗೆ ಮಾಡಿಸಲಾಯಿತು. ರಾಮಗೊಂಡಾ ಪಾಟೀಲ ಇವರ ಮನೆಯ ಮುಂದೆ ಎತ್ತಿನ ಜೋಡಿಗೆ ಪೂಜೆ ಸಲ್ಲಿಸಲಾಯಿತು. ಸಂಜೆ ಗ್ರಾಮದ ವಿವಿಧ ಮಂದಿರದಲ್ಲಿ ಎತ್ತಿನ ಜೋಡಿಗೆ ಪೂಜೆ ಸಲ್ಲಿಸಿ ಕುಮಾರ ಪಾಟೀಲ  ಚಾಲನೆ ನೀಡಿದ ನಂತರ ದೇಗುಲದ ಬಳಿ ಕರಿ ಹರಿಯಲಾಯಿತು. ಮಳೆಯನ್ನೂ ಲೆಕ್ಕಿಸಿದೇ ಜನರು ಹಬ್ಬದಲ್ಲಿ ಪಾಲ್ಗೊಂಡಿದ್ದರು.

15 ಅಡಿ ಒಟ್ಟಲಾದ ಬನ್ನಿಯ ಮೇಲೆ ಎತ್ತುಗಳನ್ನು ಹಿಡಿದು ಯುವಕರು ತುದಿಮೇಲಿದ್ದ ಕೊಬ್ಬರಿಯ ಬಟ್ಟಲು ಗಿಟ್ಟಿಸಲು ನಾ ಮುಂದು ನೀ ಮುಂದು ಮಾಡುವ ಸನ್ನಿವೇಶ ರೋಮಾಂಚನಗೊಳ್ಳುವ ಹಾಗಿತ್ತು. ಅಂತಿಮವಾಗಿ ಸುನೀಲ ಮಗದುಮ ಮತ್ತು ಸಂಗಡಿಗರು ಬಟ್ಟಲನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕರಿ ಹರಿಯುವ ಉತ್ಸವದಲ್ಲಿ ರಾಮಗೊಂಡಾ ಪಾಟೀಲ, ಕುಮಾರ ಪಾಟೀಲ, ಮಹೇಶ ಪಾಟೀಲ, ಅಣ್ಣಾಸಾಹೇಬ ತಾಂದಳೆ, ನಂದು ಪೊವಾರ, ವಲ್ಲಭ ದೇಶಪಾಂಡೆ, ಬಾಳಾಸಾಹೇಬ ಪಾಟೀಲ, ಮಲಗೊಂಡಾ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.