ADVERTISEMENT

ಕಿತ್ತೂರು ಉತ್ಸವ: ಭರವಸೆಯಲ್ಲೇ ಉಳಿದ ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 8:00 IST
Last Updated 18 ಅಕ್ಟೋಬರ್ 2011, 8:00 IST

ಚನ್ನಮ್ಮನ ಕಿತ್ತೂರು: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಪ್ರಥಮ ಕಹಳೆಯೂದಿದ ರಾಣಿ ಚನ್ನಮ್ಮ ಸ್ಮರಣೆಯ ಐತಿಹಾಸಿಕ ಕಿತ್ತೂರು ಉತ್ಸವವನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲು ಸರಕಾರ ಕೋಟಿ ರೂಪಾಯಿ ನೀಡುವುದು ಎಂಬ ಘೋಷಣೆ ಮೊಳಗಿ ನಾಲ್ಕು ವರ್ಷ ಕಳೆದರೂ ಇನ್ನೂ ಕನಸಾಗಿಯೇ ಉಳಿದಿದೆ.

2007ನೇ ಸಾಲಿನಲ್ಲಿ ಅಂದಿನ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರಕಾರದಲ್ಲಿ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಉತ್ಸವ ಸಮಾರೋಪ ಸಮಾರಂಭಕ್ಕೆ ಬಂದಾಗ ನೆರೆದಿದ್ದ ಸಹಸ್ರಾರು ಜನರು ಮುಂದೆ ಕೋಟಿ ರೂಪಾಯಿಯ ಆಶ್ವಾಸನೆ ನೀಡಿದ್ದರು.

ರಾಜ್ಯದಲ್ಲಿ ಕೆಲ ರಾಜಕೀಯ ವಿದ್ಯಮಾನಗಳು ನಡೆದು ಅವರು ಮುಖ್ಯಮಂತ್ರಿಯೂ ಆದರು. ಆದರೆ ಈ ಕೋಟಿ ರೂಪಾಯಿ ಬಿಡುಗಡೆ ಭರವಸೆ ಈಡೇರುವ  ಕಾಲವಂತೂ ಅವರ ಅಧಿಕಾರವಧಿಯಲ್ಲಿ ಕೂಡಿ ಬರಲಿಲ್ಲ ಎಂದು ನಾಗರಿಕರು ದೂರುತ್ತಾರೆ.

`ಪ್ರಸಕ್ತ ಸಾಲಿನ ಉತ್ಸವ ಆಚರಣೆಗೆ ಕೋಟಿ ರೂಪಾಯಿ ಕೇಳಲಾಗಿದೆ~ ಎಂದು ಸ್ಥಳೀಯ ಶಾಸಕ ಸುರೇಶ ಮಾರಿಹಾಳ ಹೇಳಿದ್ದರು. ಈಗ ರೂ 80 ಲಕ್ಷ ಬಿಡುಗಡೆ ಮಾಡುವುದಾಗಿ ಸರಕಾರದ ಅಧಿಕೃತ ಆದೇಶ ಪತ್ರ ತಿಳಿಸಿದೆ.

ಜೊತೆಯಲ್ಲೇ ಬಿಡುಗಡೆ ಮಾಡಲಾದ ಅನುದಾನವನ್ನು ಉದ್ದೇಶಿತ ಕಾರ್ಯಕ್ಕೆ ಮಾತ್ರ ಬಳಸಬೇಕು. ಅನುದಾನ ಸಮರ್ಪಕವಾಗಿ ಖರ್ಚು ಮಾಡಿರುವ ಬಗ್ಗೆ ಹಣಬಳಕೆ ಪ್ರಮಾಣಪತ್ರ ಸಲ್ಲಿಸಬೇಕು. ಕರ್ನಾಟಕ ಪಾರದರ್ಶಕ ಕಾಯ್ದೆ ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಷರತ್ತುಗಳನ್ನು ವಿಧಿಸಿದೆ.

ಭರವಸೆಗಳ ಸುರಿಮಳೆ: `ಕಿತ್ತೂರು ಉತ್ಸವ ಆಚರಣೆಯಲ್ಲಿ ಪಾಲ್ಗೊಂಡು ನೆರೆದಿದ್ದ ಜನಸಮೂಹ ನೋಡಿದ ಉಮ್ಮೇದಿಯಲ್ಲಿ  ಅನೇಕರು ಕೆಲ ಘೋಷಣೆಗಳನ್ನು ಇಲ್ಲಿಯ ಜನರಿಗೆ ನೀಡಿ ಹೋಗಿದ್ದಾರೆ~ ಎಂಬುದನ್ನು ಇಲ್ಲಿಯ ಜನರು ಸ್ಮರಿಸುತ್ತಾರೆ.

`ಪ್ರತಿವರ್ಷ ಜರುಗುವ ಉತ್ಸವದಲ್ಲಿ ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಸ್ಮರಣೀಯ ಸೇವೆ ಮಾಡಿರುವ ಮಹಿಳೆಯೊಬ್ಬರಿಗೆ `ರಾಣಿ ಚನ್ನಮ್ಮ~ ಪ್ರಶಸ್ತಿ ಪ್ರತಿವರ್ಷ ನೀಡಲಾಗುವುದೆಂದು ಉಸ್ತುವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದರು. ನಗದು ಲಕ್ಷ ರೂಪಾಯಿ ಪ್ರಶಸ್ತಿ ಇದಾಗಿರುತ್ತದೆ. ಇದರ ಮೊತ್ತವನ್ನು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ನೀಡಲು ಒಪ್ಪಿದ್ದಾರೆ~ ಎಂದೂ ಅವರು ಮಾಹಿತಿ ನೀಡಿದ್ದರು.

`2007ನೇ ಸಾಲಿನಲ್ಲಿ ಘೋಷಣೆಯಾಗಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭ ಉತ್ಸವದಲ್ಲಿ ಇಲ್ಲಿಯವರೆಗೂ ನಡೆದಿಲ್ಲ. ವಿಪರ್ಯಾಸವೆಂದರೆ ಪ್ರಶಸ್ತಿಗೆ ಅರ್ಹ ಮಹಿಳೆಯರು ಇನ್ನೂವರೆಗೆ ಸಿಕ್ಕಿಲ್ಲ ಎಂಬುದು ನೋವಿನ ಸಂಗತಿ~ ಎಂದು ವ್ಯಂಗ್ಯವಾಡುತ್ತಾರೆ ನಾಗರಿಕರು.

ಕನ್ನಡಿಯೊಳಗಿನ ಗಂಟಿನಂತೆ ತೋರುವ ಈ ಘೋಷಣೆ ಆದ ಮರುವರ್ಷದ (2008) ಉತ್ಸವಕ್ಕೆ ಅಂದಿನ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರೂ ಆಗಮಿಸಿದ್ದರು. ವೇದಿಕೆ ಮೇಲೆ ಅವರು ಭಾವಾವೇಶದಿಂದ `ಕಿತ್ತೂರಿನಲ್ಲಿ ಯಾತ್ರಿ ನಿವಾಸ ನಿರ್ಮಿಸಲು ರೂ 50ಲಕ್ಷ ಹಾಗೂ ಶೌಚಾಲಯ ನಿರ್ಮಾಣಕ್ಕಾಗಿ ರೂ 8 ಲಕ್ಷ ಜಿಲ್ಲಾಧಿಕಾರಿಗಳಿಗೆ ಈಗಲೇ ಬಿಡುಗಡೆ ಮಾಡಿದ್ದೇನೆ~ ಎಂದು ಘೋಷಿಸಿದರು.

`2008 ಅಲ್ಲ ಈಗ 2011ರ ಉತ್ಸವ ಆಚರಣೆಯ ಹೊಸ್ತಿಲಲ್ಲಿ ಇರುವಾಗಲೂ ಈ ಯಾತ್ರಿ ನಿವಾಸ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಾಣ ಭರವಸೆಯ ಮಾತುಗಳು ಕಾಲಗರ್ಭದಲ್ಲಿ ಕರಗಿ ಅರಬ್ಬಿ ಸಮುದ್ರ ಸೇರಿವೆ~ ಎಂದು ಹೇಳುತ್ತಾರೆ ಸಂಘಟನೆಯ ಕೆಲವರು.

ಒಂದೂವರೆ ದಶಕ: ಪ್ರತಿವರ್ಷ ಸರಕಾರದ ವತಿಯಿಂದ  ಅಧಿಕೃತ ಹಾಗೂ ಅದ್ದೂರಿಯಾಗಿ ಉತ್ಸವ ಆಚರಣೆ ಆರಂಭವಾಗಿ ಈಗ 14 ವರ್ಷಗಳು ಗತಿಸಿವೆ. ಪ್ರಸಕ್ತ ಸಾಲಿನ ಉತ್ಸವ ಕೂಡ ಮಹತ್ವದ ಘಟ್ಟ.
1997ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ ಉತ್ಸವ ಉದ್ಘಾಟಿಸಿದ್ದನ್ನು ಬಿಟ್ಟರೆ ಇಲ್ಲಿಯವರೆಗೆ ಯಾವುದೇ ಮುಖ್ಯಮಂತ್ರಿ ಉತ್ಸವ ಉದ್ಘಾಟನೆಗಾಗಲಿ ಅಥವಾ ಸಮಾರೋಪ ಸಮಾರಂಭಕ್ಕಾಗಲಿ ಆಗಮಿಸಿಲ್ಲ.

ಈ ಬಾರಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಬರುತ್ತಾರೆ ನಿರೀಕ್ಷೆ ಸಾರ್ವಜನಿಕರಲ್ಲಿ ಗರಿಗೆದರಿದೆ. ಇವರಾದರೂ ಆಗಮಿಸಿ ಉತ್ಸವ ಉದ್ಘಾಟಿಸಲಿ ಎಂಬ ಆಶಯ ಸಾರ್ವಜನಿಕರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.