ADVERTISEMENT

ಕುಂದಾನಗರಿಯಲ್ಲಿ ವಿಶ್ವದಾಖಲೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 9:40 IST
Last Updated 7 ಜೂನ್ 2011, 9:40 IST

ಬೆಳಗಾವಿ: ಇಲ್ಲಿನ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್‌ನಲ್ಲಿ ಭಾರತದ ಸುಮಾರು 80 ಕ್ರೀಡಾಪಟುಗಳು ನಿರಂತರವಾಗಿ 31 ಗಂಟೆಗಳ ಕಾಲ ಸ್ಕೇಟಿಂಗ್ ಮಾಡುವ ಮೂಲಕ ಸೋಮವಾರ ವಿಶ್ವದಾಖಲೆ ನಿರ್ಮಿಸಿದರು.

ಭಾನುವಾರ ಮಧ್ಯಾಹ್ನ 11.25ಕ್ಕೆ  ಸ್ಕೇಟಿಂಗ್ ಆರಂಭಿಸಿದ ಕ್ರೀಡಾಪಟುಗಳು, ಸುರಿಯುವ ಮಳೆಯನ್ನೂ ಲೆಕ್ಕಿಸದೇ ಗುರಿಯತ್ತ ಮುನ್ನಡೆಯುತ್ತಿದ್ದರು. ಸಿಂಗಾಪುರ ರೋಲರ್ ಸ್ಪೋಟ್ಸ್‌ನವರು 24 ಗಂಟೆ 14 ನಿಮಿಷಗಳ ಕಾಲ ನಿರಂತರ ಸ್ಕೇಟಿಂಗ್ ಮಾಡಿ ನಿರ್ಮಿಸಿದ್ದ ದಾಖಲೆಯನ್ನು ಸೋಮವಾರ ಮಧ್ಯಾಹ್ನ 11.30ಕ್ಕೆ ಮುರಿಯುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ಹರ್ಷೋದ್ಘಾರ, ಬಾನಲ್ಲಿ ಸಿಡಿಮದ್ದುಗಳ ಚಿತ್ತಾರ ಮೂಡಿತು.

ದಾಖಲೆ ನಿರ್ಮಿಸಿದ ಖುಷಿಯಲ್ಲಿ ಕ್ರೀಡಾಪಟುಗಳು ರಾಷ್ಟ್ರಧ್ವಜ ಹಿಡಿದು ಸ್ಕೇಟಿಂಗ್ ಮುಂದುವರಿಸಿದರು. ಸಂಜೆ 6.30ರವರೆಗೂ ನಿಲ್ಲದೇ ಸ್ಕೇಟಿಂಗ್ ಮಾಡಿದ 12 ವರ್ಷದೊಳಗಿನ ಪುಟಾಣಿಗಳು ಹಗಲು-ರಾತ್ರಿ ನಿರಂತರ 30 ಗಂಟೆಗಳ ಕಾಲ ಸ್ಕೇಟಿಂಗ್ ಮಾಡುವ ಮೂಲಕ ಕುಂದಾನಗರಿಯಲ್ಲಿ ವಿಶ್ವದಾಖಲೆ ಬರೆದರು.

ಭಾರತೀಯ ಕ್ರೀಡಾಪಟುಗಳು ನೂತನ ದಾಖಲೆ ನಿರ್ಮಿಸಿರುವುದುನ್ನು ಇಂಡಿಯನ್ ಇನ್‌ಲೈನ್ ಹಾಕಿ ತಂಡದ ಮುಖ್ಯ ಕೋಚ್ ಹಾಗೂ ಹರಿಯಾಣ ಸರ್ಕಾರದ ಕ್ರೀಡಾ ಅಧಿಕಾರಿ ಎ.ಡಿ. ಶರ್ಮಾ ಘೋಷಿಸಿದರು.
ಫೆಡರೇಶನ್ ಆಫ್ ಇಂಟರ್‌ನ್ಯಾಶನಲ್ ರೋಲರ್ ಸ್ಪೋರ್ಟ್ಸ್‌ನ ಪ್ರತಿನಿಧಿಗಳಾಗಿ ಅಂತರರಾಷ್ಟ್ರೀಯ ರೆಫರಿಗಳಾದ ಹಾಂಕ್ ಕಾಂಗ್‌ನ ಮೇನ್ ಚೊವ್ ಹಾಗೂ ಬ್ರೆಜಿಲ್‌ನ ಪೆಬ್ಲೋ ಮತ್ತು ಮಾರ್ಸೆಲ್ಲೊ ಇದಕ್ಕೆ ಸಾಕ್ಷಿಯಾದರು.

ಲಿಮ್ಕಾ ಬುಕ್ ದಾಖಲೆಗೆ ಸೇರಿಸುವ ಸಲುವಾಗಿ ನಡೆದ ಈ ಸಾಧನೆಗೆ ಸಾಕ್ಷಿಯಾದ ಅಧಿಕಾರಿಗಳಾದ ಮೂರ್ತಿ ಹಾಗೂ ರಾಮಕೃಷ್ಣ ವರದಿ ಒಪ್ಪಿಸಲಿದ್ದಾರೆ. ಬೆಳಗಾವಿಯ ಎಂಟು ಜನರು ಸೇರಿದಂತೆ ಒಟ್ಟು 80 ಕ್ರೀಡಾಪಟುಗಳು ವಿಶ್ವ ದಾಖಲೆಯ ಸ್ಕೇಟಿಂಗ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.