ADVERTISEMENT

ಕುಲಷಿತ ಘಟಪ್ರಭಾ ನೀರು ಪರೀಕ್ಷೆ: ಕಡಾಡಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2012, 9:35 IST
Last Updated 30 ಏಪ್ರಿಲ್ 2012, 9:35 IST
ಕುಲಷಿತ ಘಟಪ್ರಭಾ ನೀರು ಪರೀಕ್ಷೆ: ಕಡಾಡಿ
ಕುಲಷಿತ ಘಟಪ್ರಭಾ ನೀರು ಪರೀಕ್ಷೆ: ಕಡಾಡಿ   

ಗೋಕಾಕ: ಈಚೆಗೆ ಜಲಚರಗಳು ಮಾರಣ ಹೋಮಗೊಂಡ ತಾಲ್ಲೂಕಿನ ಅಡಿಬಟ್ಟಿ ಗ್ರಾಮಕ್ಕೆ  ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ ಭಾನುವಾರ ಭೇಟಿ ನೀಡಿದರು.

ಘಟಪ್ರಭಾ ನದಿಯ ನೀರು ಕಲುಷಿತಗೊಳ್ಳಲು ಪ್ರಮುಖ ಕಾರಣ ಏನೆಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು  ಅಧಿಕಾರಿಗಳನ್ನು  ತರಾಟೆಗೆ ತೆಗೆದುಕೊಂಡು ಜಿ.ಪಂ. ಕೂಡ ನೀರಿನ ಮಾದರಿಯನ್ನು  ಪರೀಕ್ಷಿಸಲಿದೆ ಎಂದರು.

ಘಟನೆಯ ಬಗ್ಗೆ ಸ್ಪಷ್ಟತೆ ನೀಡದ ಅಧಿಕಾರಿಗಳು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮಸ್ಥರ ಆರೋಗ್ಯ ರಕ್ಷಣೆ, ಜಲಚರಗಳ ಮಾರಣಹೋಮದಿಂದ ಉತ್ಪತ್ತಿಯಾದ ಹುಳುಗಳ ನಾಶಕ್ಕೆ  ಔಷಧಿ ಸಿಂಪಡಿಕೆಯಂತಹ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಜನರಲ್ಲಿ ಕಲುಷಿತ ನೀರಿನ ಭೀತಿಯ ಹಿನ್ನೆಲೆಯಲ್ಲಿ ಅಡಿಬಟ್ಟಿ, ಮೆಳವಂಕಿ ಹಾಗೂ ಚಿಗಡೊಳ್ಳಿ ಗ್ರಾಮಗಳಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು.   ಈ ಕುರಿತು ಜನರಲ್ಲಿ ಮೂಡಿರುವ ಕುಡಿಯುವ ನೀರಿನ ಆತಂಕವನ್ನು ಸರಿಪಡಿಸಬೇಕು, ಗ್ರಾಮಕ್ಕೆ ಹೆಚ್ಚಿನ ಟ್ಯಾಂಕರ್‌ಗಳ ವ್ಯವಸ್ಥೆ, ನೀರು ಪಡೆಯಲು ಗ್ರಾಮಸ್ಥರಲ್ಲಿ ಗೊಂದಲ ಉಂಟಾಗದಂತೆ ಪೊಲೀಸ್‌ರಿಂದ ನಿಗಾ ವಹಿಸುವಿಕೆ, ಜಾನುವಾರಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ ಅವರು, ತಾಲ್ಲೂಕಾಡಳಿತ ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾಗಿದ್ದು, ಜಿಲ್ಲಾಡಳಿತದ ನೆರವು ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

ಘಟನೆಗೆ ಕಾರಣೀಭೂತರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ನೆಪ ಹೇಳಿ ತಮ್ಮ ಜವಾಬ್ದಾರಿಯಿಂದ ಅಧಿಕಾರಿಗಳು ಹಿಂದೆ ಸರಿಯಬಾರದು ಎಂದು ಸಲಹೆ ನೀಡಿದರು

ಅಡಿಬಟ್ಟಿ ಘಟನೆಯನ್ನು ಸರಿಯಾಗಿ ನಿಭಾಯಿಸುವಲ್ಲಿ ತಹಶೀಲ್ದಾರ ವಿಫಲರಾಗಿದ್ದಾರೆ. ಘಟನೆಯನ್ನು ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಳ್ಳಲು ನಾನು ಸ್ಥಳಕ್ಕೆ ಆಗಮಿಸಿದರೂ ತಹಶೀಲ್ದಾರ ತಾವಾಗಲಿ ಇಲ್ಲವೇ ಕಂದಾಯ ಅಧಿಕಾರಿಗಳನ್ನು  ಕಳುಹಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಅಡಿಬಟ್ಟಿ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ರಸ್ತೆಗಳ ಸುಧಾರಣೆ  ಕೈಗೊಳ್ಳಬೇಕು. ಗ್ರಾಮದ ಬಹುದಿನಗಳ ಬೇಡಿಕೆಯಾಗಿರುವ  ಮಹಿಳೆಯರ ಬಟ್ಟೆ ತೊಳೆಯುವ ದೋಬಿ ಘಾಟ್  ಕಾಮಗಾರಿಯನ್ನು ಜಿ.ಪಂ. ಹಾಗೂ ತಾ.ಪಂ. ಅನುದಾನದಲ್ಲಿ ಪ್ರಸಕ್ತ ಸಾಲಿನ  ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ತಾ.ಪಂ. ಸದಸ್ಯ ಬಸವರಾಜ ಕಾಪಸಿ, ಬಿಜೆಪಿ ಜಿಲ್ಲಾ ಘಟಕ ಕಾರ್ಯದರ್ಶಿ ಆನಂದ ಮೂಡಲಗಿ, ರೈತ ಸಂಘದ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ  ರಮೇಶ ಕೌಜಲಗಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ  ಕೆ.ಎಸ್.ಪಾಟೀಲ, ಡಿವೈಎಸ್‌ಪಿ ಬಸವರಾಜ ಕಡಕೊಳ,  ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ಲಖನ್ ಮುಸಗುಪ್ಪಿ, ಮೆಳವಂಕಿ ಆರೋಗ್ಯ ಕೇಂದ್ರದ  ವೈದ್ಯಾಧಿಕಾರಿ ಕವಿತಾ ಪಟ್ಟಣಶೆಟ್ಟಿ,  ಸಹಾಯಕ ಕೃಷಿ ನಿರ್ದೇಶಕ ಆರ್.ಜಿ.ನಾಗಣ್ಣವರ,  ಶಂಕರ ಗೋರೋಶಿ ಮತ್ತು ಅಪ್ಪಾಸಾಬ ಮಾಳವಾಡ ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.