ADVERTISEMENT

ಕೆರೆಗಳಿಗೆ ನೀರು ತುಂಬಿಸಲು ಆದ್ಯತೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 5:38 IST
Last Updated 3 ಜುಲೈ 2017, 5:38 IST
ಚಿಕ್ಕೋಡಿ ತಾಲ್ಲೂಕಿನ ಕಾಡಾಪುರ ಗ್ರಾಮದಲ್ಲಿನ ಕೆರೆಗೆ ಕೃಷ್ಣಾ ನದಿಯಿಂದ ನೀರು ತಂದು ತುಂಬಿಸಿರುವುದು.
ಚಿಕ್ಕೋಡಿ ತಾಲ್ಲೂಕಿನ ಕಾಡಾಪುರ ಗ್ರಾಮದಲ್ಲಿನ ಕೆರೆಗೆ ಕೃಷ್ಣಾ ನದಿಯಿಂದ ನೀರು ತಂದು ತುಂಬಿಸಿರುವುದು.   

ಚಿಕ್ಕೋಡಿ: ಕಳೆದ ಮೂರ್ನಾಲ್ಕು ವರ್ಷಗಳ ಸತತ ಬರಗಾಲದಿಂದ ನಲುಗಿ ಹೋಗಿರುವ ಚಿಕ್ಕೋಡಿ ಉಪವಿಭಾಗದ ತಾಲ್ಲೂಕುಗಳ ಪಾಲಿಗೆ ಮಳೆರಾಯ ಮುನಿಸಿಕೊಂಡಂತಾಗಿದೆ. ಆದರೆ, ಮಳೆ ಕೈಕೊಟ್ಟಿದ್ದರಿಂದ ಉಂಟಾದ ಬರದ ಸ್ಥಿತಿಯನ್ನು ನಿಭಾಯಿಸಲು ಕೆರೆಗಳಿಗೆ ಜಿಲ್ಲೆಯ ಪ್ರಮುಖ ನದಿಗಳಿಂದ ನೀರು ತಂದೊಗಿಸುವ ಯೋಜನೆಗಳ ಅನುಷ್ಠಾನದಿಂದ ಕೃಷಿಕರು ಕೊಂಚ ನಿರಾಳರಾಗುತ್ತಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಶಿರಗಾಂವ ಗ್ರಾಮದ ಬೃಹತ್ ಬಸವೇಶ್ವರ ಕೆರೆಗೆ ಈಗಾಗಲೇ ನೀರು ತುಂಬಿಸುವ ಮೂಲಕ, ಈ ಕೆರೆ ವ್ಯಾಪ್ತಿಯ ಮೂರು ಗ್ರಾಮಗಳ ಜನ ಮತ್ತು ಜಾನುವಾರು ಗಳಿಗೆ ಬೇಸಿಗೆಯಲ್ಲಿ ನೀರೊದಗಿಸ ಲಾಗುತ್ತಿದೆ.  ಸುಮಾರು ₹22 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ನಾಲ್ಕು ಪ್ರಮುಖ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಗಳನ್ನು ಮಂಜೂರು ಆಗಿದ್ದು, ಅವು ಗಳಲ್ಲಿ ಎರಡು ಯೋಜನೆಗಳು ಪೂರ್ಣ ಗೊಂಡಿದ್ದರೆ, ಇನ್ನೆರಡು ಯೋಜನೆಗಳು ಪ್ರಗತಿಯ ಹಾದಿಯಲ್ಲಿವೆ.

ಕಾಡಾಪುರ ಗ್ರಾಮದ ಕೆರೆ ತುಂಬಲು ₹4.33 ಕೋಟಿ ವೆಚ್ಚದ ಯೋಜನೆ, ಮಲ್ಲಿಕವಾಡ ಏತ ನೀರಾವರಿ ಮೂಲಕ ಯಾದ್ಯಾನವಾಡಿ, ಭೈನಾಕವಾಡಿ ಮತ್ತು ವಡಗೋಲ ಗ್ರಾಮದ ಕೆರೆಗಳಿಗೆ ದೂಧಗಂಗಾ ನದಿಯಿಂದ ನೀರು ತುಂಬಿಸಲು ₹1.50 ಕೋಟಿ ವೆಚ್ಚದ ಯೋಜನೆ, ಜೋಡಕುರಳಿ ಗ್ರಾಮದ ಕೆರೆಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವುದಕ್ಕಾಗಿ ₹6.50 ಕೋಟಿ ಮತ್ತು ನಾಯಿಂಗ್ಲಜ್ ಗ್ರಾಮದ ಕೆರೆಗೆ ನೀರು ತುಂಬಿಸಲು ₹7 ಕೋಟಿ ಅನುದಾನ ಮಂಜೂರಾಗಿದೆ.

ADVERTISEMENT

ಸದ್ಯ ಕಾಡಾಪುರ ಮತ್ತು ಮಲ್ಲಿಕವಾಡ ಏತ ನೀರಾವರಿ ಯೋಜನೆ ಮೂಲಕ ಯಾದ್ಯಾನವಾಡಿ, ಭೈನಾಕ ವಾಡಿ ಮತ್ತು ವಡಗೋಲ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಪೂರ್ಣಗೊಂಡಿದ್ದು, ಜೋಡಕುರಳಿ ಮತ್ತು ನಾಯಿಂಗ್ಲಜ್ ಗ್ರಾಮದ ಕೆರೆಗಳ ನೀರು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ.

ಕಾಡಾಪುರ ಗ್ರಾಮದ ಪ್ರಮುಖ ಕೆರೆಗೆ ಕೃಷ್ಣಾ ನದಿಯಿಂದ, ಮಲ್ಲಿಕವಾಡ ಏತ ನೀರಾವರಿ ಯೋಜನೆ. ಈ ಯೋಜನೆ ಮೂಲಕ ಯಾದ್ಯಾನವಾಡಿ, ಭೈನಕವಾಡಿ ಮತ್ತು ವಡಗೋಲ ಮೂರೂ ಗ್ರಾಮಗಳ ಕೆರೆಗೆ ದೂಧ ಗಂಗಾ ನದಿಯಿಂದ,  ಜೋಡಕುರಳಿ ಗ್ರಾಮದ ಕೆರೆಗೆ ಕೃಷ್ಣಾ ನದಿಯಿಂದ, ನಾಯಿಂಗ್ಲಜ್ ಗ್ರಾಮದ ಕೆರೆಗೆ ವೇದಗಂಗಾ ನದಿಯಿಂದ ನೀರು ತರುವ ಯೋಜನೆ ಅನುಷ್ಠಾನಗೊಳ್ಳುತ್ತಿವೆ.

‘ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ, ಶಿರಗಾಂವ, ಕಾಡಾಪುರ ಮತ್ತು ಮಲ್ಲಿಕವಾಡ ಕೆರೆಗಳಿಗೆ ನೀರು ತುಂಬಿಸಿದ್ದೇವೆ. ಇನ್ನು, ಕೆಲಸ ಪ್ರಗತಿ ಯಲ್ಲಿರುವ ಜೋಡಕುರಳಿ ಮತ್ತು ನಾಯಿಂಗ್ಲಜ್ ಗ್ರಾಮಗಳ ಕೆರೆಗಳಿಗೂ ಶೀಘ್ರವೇ ನೀರು ತುಂಬಿಸಿ ಜನರಿಗೆ ನೀರೊದಗಿಸಲಾಗುವುದು. ಇದರ ಜೊತೆಗೆ ಮೂಲ ಸೌಕರ್ಯಗಳಿಗೂ ಮೊದಲ ಆದ್ಯತೆ ನೀಡಲಾಗಿದೆ’ ಎನ್ನುತ್ತಾರೆ ಶಾಸಕ ಗಣೇಶ ಹುಕ್ಕೇರಿ.

* * 

ಕೆರೆಗಳಿಗೆ ನದಿಗಳಿಂದ ನೀರು ತುಂಬಿಸುವ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದ್ದು, ಇದರಿಂದ ಮಳೆಯಾಶ್ರಿತ ಭೂಮಿಗಳಿಗೆ ನೀರಾವರಿ ಸೌಕರ್ಯ ದೊರಕಲಿದೆ
ಗಣೇಶ ಹುಕ್ಕೇರಿ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.