ADVERTISEMENT

ಕೆಸರು ಗದ್ದೆಯಾದ ಉಪಮಾರುಕಟ್ಟೆ

ಚನ್ನಮ್ಮನ ಕಿತ್ತೂರು; ನೀರು, ನೆರಳಿಲ್ಲದೆ ವ್ಯಾಪಾರಸ್ಥರ ಪರದಾಟ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 3:59 IST
Last Updated 12 ಜೂನ್ 2018, 3:59 IST
ಭಾನುವಾರ ಬಿದ್ದ ಮಳೆಗೆ ಕೆಸರು ಗದ್ದೆಯಂತಾಗಿರುವ ಚನ್ನಮ್ಮನ ಕಿತ್ತೂರು ಉಪಮಾರುಕಟ್ಟೆಯ ಒಳ ರಸ್ತೆ
ಭಾನುವಾರ ಬಿದ್ದ ಮಳೆಗೆ ಕೆಸರು ಗದ್ದೆಯಂತಾಗಿರುವ ಚನ್ನಮ್ಮನ ಕಿತ್ತೂರು ಉಪಮಾರುಕಟ್ಟೆಯ ಒಳ ರಸ್ತೆ   

ಚನ್ನಮ್ಮನ ಕಿತ್ತೂರು: ಬೇಸಿಗೆಯಲ್ಲಿ ನೆರಳಿಲ್ಲ, ಕುಡಿಯಲು ನೀರಿಲ್ಲ, ಮಳೆಗಾಲದಲ್ಲಿ ನಿಲ್ಲಲು ಚಿಕ್ಕದೊಂದು ಚಾಟೂ ಇಲ್ಲ. ಸರಿಯಾದ ಸಂಪರ್ಕ ರಸ್ತೆಗಳೂ ಇಲ್ಲಿಲ್ಲ…

ಇದು ಕಿತ್ತೂರು ಕೃಷಿ ಉತ್ಪನ್ನ ಉಪಮಾರುಕಟ್ಟೆಯ ಸ್ಥಿತಿ. ಯಾವ ಮೂಲ ಸೌಲಭ್ಯವಿಲ್ಲದ ಈ ಸ್ಥಳಕ್ಕೆ ಪ್ರತಿ ಸೋಮವಾರ ಜಾನುವಾರು ಮಾರಾಟ ಮಾಡುವ ಮತ್ತು ಖರೀದಿಸುವ ಸುಮಾರು 50ಕ್ಕಿಂತಲೂ ಹೆಚ್ಚು ಹಳ್ಳಿಗಳ ರೈತರು ಬರುತ್ತಾರೆ. ಬೇಸಿಗೆಯಲ್ಲಿ ಹೇಗಾದರೂ ವ್ಯಾಪಾರ ವಹಿವಾಟು ಮಾಡಿಕೊಂಡು ಹೋಗುತ್ತಾರೆ. ಆದರೆ ಮಳೆಗಾಲದಲ್ಲಿ ಮಾರುಕಟ್ಟೆಗೆ ತೆರಳಲು ಹರಸಾಹಸ ಪಡಬೇಕಿದೆ.

‘ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಈ ಮಾರುಕಟ್ಟೆ ಸ್ಥಾಪನೆಗೊಂಡು ಒಂದೂವರೆ ದಶಕ ಕಳೆದಿದೆ. ವ್ಯಾಪಾರಸ್ಥರಿಂದ ಸಾಕಷ್ಟು ತೆರಿಗೆ ಸಹ ಸಂಗ್ರಹವಾಗುತ್ತದೆ. ಆದರೆ ಈ ಕೃಷಿ ಉತ್ಪನ್ನ ಉಪ ಮಾರುಕಟ್ಟೆಗೆ ಅಗತ್ಯವಿರುವ ಸವಲತ್ತು ಕಲ್ಪಿಸಲು ಯಾರೂ ಮುಂದಾಗಿಲ್ಲ. ಮಾದರಿ ಮಾರುಕಟ್ಟೆಯಾಗುವ ಲಕ್ಷಣಗಳಿದ್ದ ಇದು ಈಗ ಜಾನುವಾರು, ಕುರಿ, ಮೇಕೆ ಮಾರುಕಟ್ಟೆಯಾಗಿ ಸೀಮಿತವಾಗಿದ್ದು ವಿಪರ್ಯಾಸ’ ಎನ್ನುತ್ತಾರೆ ಬಸವರಾಜ ಬಾರಿಗಿಡದ.

ADVERTISEMENT

ಭರ್ಜರಿ ಹತ್ತಿ ವ್ಯಾಪಾರ: ಕಿತ್ತೂರು ಸುತ್ತಲಿನ ಪ್ರದೇಶದಲ್ಲಿ ಹತ್ತಿ ಬೆಳೆ ಅಧಿಕ ಪ್ರಮಾಣದಲ್ಲಿದ್ದಾಗ ಇಲ್ಲಿಯ ಅಕ್ಕಿ ಗಿರಣಿ ಮಿಲ್ ಆವರಣದಲ್ಲಿ ‌ಹತ್ತಿ ಅಂಡಿಗೆಗಳ ಹರಾಜು ನಡೆಯುತ್ತಿತ್ತು. ಸಾವಿರಾರು ಅಂಡಿಗೆಗಳನ್ನು ಇದೇ ಮಾರುಕಟ್ಟೆಗೆ ರೈತರು ತೆಗೆದುಕೊಂಡು ಬರುತ್ತಿದ್ದರು. ಆ ಸಂದರ್ಭದಲ್ಲಿಯೇ ಇಲ್ಲೊಂದು ಕೃಷಿ ಉತ್ಪನ್ನ ಮಾರುಕಟ್ಟೆ ಬೇಕೆಂಬ ಕೂಗು ಎದ್ದಿತು.

‘ಸಾರ್ವಜನಿಕರ ಕೂಗಿಗೆ ಮನ್ನಣೆ ನೀಡಿದ ಸರ್ಕಾರ ಐತಿಹಾಸಿಕ ಕಿತ್ತೂರು ಪಟ್ಟಣಕ್ಕೊಂದು ಉಪಮಾರುಕಟ್ಟೆಯನ್ನು ಮಂಜೂರು ಮಾಡಿತು. ಅನೇಕ ವರ್ಷಗಳು ಕಳೆದ ನಂತರ ಇದಕ್ಕಾಗಿ ಜಮೀನು ಖರೀದಿಸಲಾಯಿತು. ಈ ಮಾರುಕಟ್ಟೆ ಸಿದ್ಧಗೊಂಡ ನಂತರ ಒಂದೆರಡು ವರ್ಷ ಹತ್ತಿ ವ್ಯಾಪಾರವೂ ಭರ್ಜರಿಯಾಗೇ ನಡೆಯಿತು. ಆದರೆ ಹತ್ತಿ ಬೆಳೆಯುವುದನ್ನು ರೈತರು ಕಡಿಮೆ ಮಾಡಿದರು. ಹೀಗಾಗಿ ಪ್ರತಿವಾರ ಅನ್ನದಾತರಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆ ಪಾಳು ಬಿದ್ದಿತು’ ಎಂದು ಸಿದ್ದಣ್ಣ ಶಿರಗಾಪುರ ಮಾಹಿತಿ ನೀಡಿದರು.

‘ಇದೇ ಸಂದರ್ಭದಲ್ಲಿ ಊರೊಳಗಿದ್ದ ಜಾನುವಾರು ಮಾರುಕಟ್ಟೆ ಜಾಗೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ತಲೆಯೆತ್ತಿತು. ಇದರಿಂದ ಜಾನುವಾರು ಮಾರುಕಟ್ಟೆ ಈ ಉಪಮಾರುಕಟ್ಟೆ ಇದ್ದ ಸ್ಥಳಕ್ಕೆ ಬಂದಿತು. ಬರೀ ಜಾನುವಾರು ಮಾರುಕಟ್ಟೆ ಎಂದು ಇಲ್ಲಿ ನಿರ್ಲಕ್ಷ್ಯ ತೋರಿಸಲಾಯಿತು. ಉದ್ದನೆಯದೊಂದು ರಸ್ತೆಗೆ ಡಾಂಬರೀಕರಣ ಮಾಡಿ, ಒಂದು ಬಿಲ್ಡಿಂಗ್ ಕಟ್ಟಿದ್ದು ಬಿಟ್ಟರೆ ಬೇರೇನೂ ಕೆಲಸವಿಲ್ಲಿ ಆಗಿಲ್ಲ’ ಎನ್ನುತ್ತಾರೆ ಅವರು.

‘ಬೇಸಿಗೆ ಬಂದರೆ ಬಿಸಿಲಿನಲ್ಲೇ ಜಾನುವಾರು, ಕುರಿ, ಮೇಕೆ ಮಾರಲು ನಿಲ್ಲಿಸಬೇಕು. ತಂದವರು ತಲೆಯ ಮೇಲೊಂದು ವಸ್ತ್ರ ಹಾಕಿಕೊಂಡು ನಿಲ್ಲುತ್ತಾರೆ. ಮಳೆಗಾಲ ಬಂದರೂ ಒಂದು ಸೂರಿಲ್ಲ’ ಎಂದು ಶಫಿಕ್ಅಹ್ಮದ್ ದೂರಿದರು.

‘ಮಳೆಗಾಲ ಇರುವುದರಿಂದ ಇಲ್ಲಿಯ ಬಯಲು ಪ್ರದೇಶದಲ್ಲಿ ಸಾಕಷ್ಟು ಗಿಡ ನೆಡುವ ಅವಕಾಶವಿದೆ. ಅರಣ್ಯ ಇಲಾಖೆ ಈ ಅವಕಾಶವನ್ನು ಬಳಸಿಕೊಳ್ಳಬೇಕು. ಇದರಿಂದ ಬೇಸಿಗೆಯಲ್ಲಾದರೂ ರೈತರು, ಜಾನುವಾರುಗಳಿಗೆ ನೆರಳು ಸಿಕ್ಕೀತು’ ಎನ್ನುತ್ತಾರೆ ಚಂದ್ರಗೌಡ ಪಾಟೀಲ.

ಪ್ರದೀಪ ಮೇಲಿನಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.