ADVERTISEMENT

ಕೈಕೊಟ್ಟ ಮಳೆ, ರೈತರಲ್ಲಿ ನಿರಾಸೆ

ಬಿತ್ತನೆ ಮಾಡದೆ ಕಾದು ಕೂತಿರುವ ರೈತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 4:25 IST
Last Updated 18 ಜೂನ್ 2018, 4:25 IST

ಅಥಣಿ: ತಾಲ್ಲೂಕಿನಲ್ಲಿ ಮಳೆಯ ಲಕ್ಷಣ ಕಾಣುತ್ತಿಲ್ಲ. ಬಿಸಿಲಿನ ತಾಪ ಜಾಸ್ತಿಯಾಗುತ್ತಿದೆ. ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ಜನ ನಿರಾಶರಾಗಿದ್ದಾರೆ. ಮೊದಲ ಒಂದೆರಡು ಮಳೆಗೆ ಕೆಲ ರೈತರು ಬಿತ್ತನೆ ಮಾಡಿದ್ದಾರೆ. ಆದರೆ ಇನ್ನೊಂದು ಮಳೆಗೆ ಕಾದ ಬಹುತೇಕ ರೈತರು ಬಿತ್ತಿಲ್ಲ.

ಕೃಷ್ಣಾ ನದಿ ನೀರಿನ ಭರವಸೆಯ ಮೇಲೆ ದಂಡೆಯ ಕೆಲ ರೈತರು ಬಿತ್ತಿದ್ದಾರೆ. ಆದರೆ ಸವದಿ, ಶಿರಹಟ್ಟಿ, ತುಬಚಿ ಹಳ್ಳಿಗಳಲ್ಲಿ ಬಿತ್ತನೆ ಕಾವು ಪಡೆಯುವ ಮೊದಲೇ ನಿರಾಸೆ ಮೂಡಿಸಿದೆ. ರೈತರು ಆಕಾಶದತ್ತ ಮುಖ ಮಾಡಿ ಮಳೆಗಾಗಿ ಕಾದಿದ್ದಾರೆ.

ಈ ನಡುವೆ ಬಿಸಿಲು ಹೆಚ್ಚಾಗಿದ್ದರಿಂದ ಕೊಳವೆ ಬಾವಿ ಮತ್ತು ತೆರೆದ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಕುಸಿಯುತ್ತಿದೆ. ಕಳೆದ ವರ್ಷ ಈ ಅವಧಿಯಲ್ಲಿ ತಾಲ್ಲೂಕಿನ ನಾಲ್ಕೂ ಹೋಬಳಿಯಲ್ಲಿ ಸರಾಸರಿ 165 ಮಿ.ಮೀ ಮಳೆ ಆಗಿತ್ತ . ಈ ಸಲ ಕೇವಲ 96 ಮಿ.ಮೀ ಆಗಿದೆ. ಮೇ ತಿಂಗಳ ಮಳೆ ನಂಬಿ ಬಿತ್ತಿದ ಬೆಳೆಗಳು ಬಾಡುತ್ತಿವೆ. ಅನುಕೂಲಸ್ಥರು ಕೊಳವೆ ಬಾವಿ ಮೊರೆ ಹೋಗಿದ್ದಾರೆ.

ADVERTISEMENT

ಕೃಷಿ ಇಲಾಖೆ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ 80,600 ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿದೆ. ಈಗ 30,752 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಕೃಷಿ ಇಲಾಖೆ ಉಪನಿರ್ದೇಶಕ ಪಾಡಪ್ಪ ಲಮಾಣಿ ಅವರು ಜೂನ್‌ ಕೊನೆಯಲ್ಲಿ ಮಳೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ತಾಲ್ಲೂಕಿನಲ್ಲಿ 30,500 ಹೆಕ್ಟೇರ್‌ ಪ್ರದೇಶ ಕಬ್ಬು ನಾಟಿ ಮಾಡಲಾಗಿದೆ. ಜತೆಗೆ ಸೋಯಾಬೀನ್ 335 ಹೆಕ್ಟೇರ್‌ದಲ್ಲಿ, ಹೆಸರು 166 ಹೆಕ್ಟೇರ್‌ದಲ್ಲಿ, ಮೆಕ್ಕೆಜೋಳ 295 ಹೆಕ್ಟೇರ್‌ದಲ್ಲಿ ಬಿತ್ತನೆಯಾಗಿದೆ. ಅದಕ್ಕೆಲ್ಲ ಈಗ ಮಳೆ ತೀರ ಅಗತ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಲ್ಲೂಕು ರೈತ ಸಂಘದ ಮುಖಂಡ ಮಹಾದೇವ ಮಡಿವಾಳ ಅವರು, ’ಅಥಣಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ರೈತರ ಸಾಲಮನ್ನಾ ಮಾಡಬೇಕು. ರೈತರ ಹೊರೆ ಇಳಿಸಬೇಕು’ ಎಂದರು.

ಮಾರಾಟವಾಗದ ಬಿತ್ತನೆ ಬೀಜ

ಬಿತ್ತನೆ ಬೀಜ ಮಾರಾಟಗಾರರಾದ ಬಸವರಾಜ ಹಂಜಿ ಅವರು, ‘ವರ್ಷದಂತೆ ಈಗ ಮಳೆ ಆಗಿಲ್ಲ, ರೈತರು ಬಿತ್ತಲು ಹೆದರುತ್ತಿದ್ದಾರೆ. ಮೊದಲ ಮಳೆಯಾದ ಕೂಡಲೇ ಸ್ವಲ್ಪ ಪ್ರಮಾಣದ ಬೀಜಗಳು ಮಾರಾಟವಾಗಿವೆ, ಅನಂತರ ರೈತರು ಖರೀದಿಗೆ ಬರುತ್ತಿಲ್ಲ’ ಎಂದು ಹೇಳಿದರು.

ಪರಶುರಾಮ ನಂದೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.