ADVERTISEMENT

`ಕ್ಷೇತ್ರಕ್ಕೆ ಅಪಮಾನ ಮಾಡುವವರ ಆಯ್ಕೆ ಬೇಡ'

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 6:51 IST
Last Updated 22 ಏಪ್ರಿಲ್ 2013, 6:51 IST

ಚನ್ನಮ್ಮನ ಕಿತ್ತೂರು: `ಬ್ರಹ್ಮಾಂಡ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ರಾಜ್ಯ ಬೊಕ್ಕಸ ಲೂಟಿ ಹಾಗೂ ಯೋಜನೆಗಳಲ್ಲಿ `ಕಮಿಷನ್' ಪಡೆಯುತ್ತಿರುವ ಶಾಸಕರಿಂದ ಕೂಡಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ಈಗ ಬಂದಿರುವ ಚುನಾವಣೆಯಲ್ಲಿ ಕಿತ್ತೆಸೆಯಬೇಕು' ಎಂದು ಮಾಜಿ ಸಚಿವ ಡಿ. ಬಿ. ಇನಾಮದಾರ ಮತದಾರರಿಗೆ ಹೇಳಿದರು.

ಇಲ್ಲಿಗೆ ಸಮೀಪದ ಚಿಕ್ಕನಂದಿಹಳ್ಳಿ ಗ್ರಾಮದ ಬಿಜೆಪಿ ನಾಯಕ ಹಾಗೂ ಜಿ. ಪಂ. ಮಾಜಿ ಸದಸ್ಯ ಶಿವನಸಿಂಗ್ ಮೊಕಾಶಿ ಮತ್ತು ಅವರ ನೂರಾರು ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ನಂತರ ನಡೆದ ಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

`ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ಬಿಪಿಎಲ್ ಕಾರ್ಡುಗಳು ದೊರೆಯುತ್ತಿಲ್ಲ, ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದಾಗ ಮೊದಲು ನೀಡುತ್ತಿದ್ದ 28ಕೆ.ಜಿ. ಅಕ್ಕಿಯನ್ನು ಈಗ ಕಡಿಮೆ ಮಾಡಲಾಗಿದೆ. 12ವರ್ಷದ ಕೆಳಗಿನ ಮಕ್ಕಳಿಗೆ ಪಡಿತರ ನೀಡುತ್ತಿಲ್ಲ. ಈ ವಯೋಮಾನದ ಮಕ್ಕಳು ಊಟ ಮಾಡುವುದಿಲ್ಲವೇ?' ಎಂದು ಖಾರವಾಗಿ ಪ್ರಶ್ನಿಸಿದರು.

`ರೈತರ ಪಂಪ್‌ಸೆಟ್‌ಗಳಿಗೆ ಈಗ ಕೇವಲ ಮೂರು ಗಂಟೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ. ಗುಣಮಟ್ಟದ ವೋಲ್ಟೇಜ್ ಕೂಡಾ ಇರುವುದಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದ ಆಡಳಿತವಿದ್ದಾಗ ತೀವ್ರ ಬರಗಾಲ ಕಾಡಿದ ಸಂದರ್ಭದಲ್ಲೂ 8ಗಂಟೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯವಿತ್ತು ಎಂಬುದನ್ನು ರೈತರು ಮರೆಯಬಾರದು' ಎಂದು ನುಡಿದರು.

`ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಶಾಸಕರೆ ಗುದ್ದಲಿ ಹಿಡಿದು ಪೂಜೆ ಮಾಡುತ್ತಾರೆ. ಪಂಚಾಯ್ತಿ ಕೆಲಸಗಳನ್ನು ಪಂಚಾಯ್ತಿಯವರೇ ಮಾಡಬೇಕು' ಎಂದೂ ಇನಾಮದಾರ ಸಲಹೆ ಇತ್ತರು.

ಕಾಂಗ್ರೆಸ್ ಧುರೀಣ ಜಗದೀಶ ವಸ್ತ್ರದ, `ನಿಮ್ಮ ಮತಕ್ಕೆ ಬೆಲೆ ಬರುವ ಯೋಗ್ಯ ವ್ಯಕ್ತಿಯನ್ನು ಮತದಾರರು ಆರಿಸಬೇಕು. ಕ್ಷೇತ್ರಕ್ಕೆ ಅಪಮಾನ ಮಾಡುವ, ದುಡ್ಡು ಹೊಡೆಯುವ ವ್ಯಕ್ತಿಗಳ ಆಯ್ಕೆ ಬೇಡ' ಎಂದರು.

`ಒಂದೇ ಕುಟುಂಬದ ಜನ ಮತ್ತೆ ಒಂದುಗೂಡಿದ ಅನುಭವವಾಗಿದೆ. ನಾನೂ ಒಂದು ವರ್ಷ 4ತಿಂಗಳು ಪಕ್ಷ ಬಿಟ್ಟು ಹೋಗಿದ್ದೆ. ದುರ್ಜನರ ಸಂಗ... ಎಂಬ ಅನುಭವ ನನಗಾಯಿತು' ಎಂದು ವೀರಣ್ಣ ಕಂಬಳಿ ಹೇಳಿದರು.

ಕಾಂಗ್ರೆಸ್ ಸೇರ್ಪಡೆಯಾದ ಶಿವನಸಿಂಗ್ ಮೊಕಾಶಿ, ಮಹಾಂತೇಶ ಚಿಕ್ಕಮಠ, ಚಂದ್ರು ಪಾಟೀಲ ಮತ್ತಿತರರು ಮಾತನಾಡಿದರು.
ವೀರಣ್ಣ ಹುಬ್ಬಳ್ಳಿ, ರಾಮಣ್ಣ ಉಳ್ಳೇಗಡ್ಡಿ, ಬಸನಗೌಡ ಪಾಟೀಲ, ಸುರೇಶ ಹುಲಿಕಟ್ಟಿ, ಹಿರೇನಂದಿಹಳ್ಳಿಯ ಚಂದ್ರಗೌಡ ಪಾಟೀಲ, ದೇಗಾಂವ ಚಂದ್ರಗೌಡ ಪಾಟೀಲ, ಜಿ. ಪಂ. ಮಾಜಿ ಸದಸ್ಯೆ ಶ್ಯಾಮಲಾ, ಅಶೋಕ ಅಳ್ನಾವರ, ಸಂಜೀವ ಲೋಕಾಪುರ, ರಮೇಶ ಮೊಕಾಶಿ ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.