ADVERTISEMENT

ಗಡಿಯಲ್ಲಿ ಕನ್ನಡ ಶಾಲೆ ಆರಂಭಕ್ಕೆ ಅಡ್ಡಿ: ಆರೋಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 9:40 IST
Last Updated 13 ಅಕ್ಟೋಬರ್ 2011, 9:40 IST

ಅಥಣಿ: ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಖಾಸಗಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಶಿಕ್ಷಣ ಪ್ರೇಮಿಗಳ ಒತ್ತಾಸೆಗೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆಂದು ಆರೋಪಿಸಿ ಗಡಿನಾಡು ಕನ್ನಡಿಗರ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ಪ್ರಭಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ವೇದಿಕೆಯ ಅಧ್ಯಕ್ಷ ಬಸವರಾಜ ಅರಗೊಡ್ಡಿ, ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಅಥಣಿ ತಾಲ್ಲೂಕಿನ ಕೊಟ್ಟಲಗಿ ಗ್ರಾಮ ದಲ್ಲಿ ಶ್ರೀ ಸಿದ್ಧೇಶ್ವರ ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು ಆರಂಭಿಸಲು ಉದ್ದೇ ಶಿಸಿರುವ ಕನ್ನಡ ಮಾಧ್ಯಮ ಖಾಸಗಿ ಪ್ರಾಥಮಿಕ ಶಾಲೆಗೆ ಕ್ಷುಲ್ಲಕ ಕಾರಣ ನೀಡಿ ಸ್ಥಳೀಯ ಶಿಕ್ಷಣಾಧಿಕಾರಿಗಳು ಅನುಮತಿ ನೀಡಲು ನಿರಾಕರಿಸಿದ್ದಾ ರೆಂದು ದೂರಿದರು.

ಗಡಿ ಗ್ರಾಮದಲ್ಲಿ ಕನ್ನಡ ಕಲಿಸುವುದು ಅಪರಾಧ, ಒಂದು ವೇಳೆ ಇದಕ್ಕೂ ಮೀರಿ ಪದಾಧಿಕಾರಿಗಳು ಬಲವಂತ ದಿಂದ ಕನ್ನಡ ಶಾಲೆಯನ್ನು ಆರಂಭಿಸಲು ಮುಂದಾದಲ್ಲಿ ಅವರ ಮೇಲೆ ಪೊಲೀಸ್ ಕ್ರಮ ಕೈಗೊಳ್ಳಲಾಗುವುದು ಎಂದು ಪದಾಧಿಕಾರಿಗಳಿಗೆ ಬೆದರಿಕೆ ಒಡ್ಡಿದ್ದನ್ನು ಅವರು ಖಂಡಿಸಿದರು.

ಕರ್ನಾಟಕ ಸರ್ಕಾರ ಗಡಿ ಗ್ರಾಮಗಳಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸುವ ಮೂಲಕ ಕನ್ನಡ ಪರ ವಾತಾವರಣ ಹುಟ್ಟು ಹಾಕಲು ಕಾರ್ಯಕ್ರಮ ರೂಪಿಸುತ್ತಿದ್ದರೆ ಇತ್ತ ಅಥಣಿ ತಾಲ್ಲೂಕಿನ ಗಡಿ ಭಾಗದಲ್ಲಿ ಕನ್ನಡ ವಿರೋಧಿ ಧೋರಣೆ ಅನುಸರಿಸುವ ಮೂಲಕ ಸ್ಥಳೀಯ ಶಿಕ್ಷಣಾಧಿಕಾರಿಗಳು ಪರೋಕ್ಷವಾಗಿ ಮರಾಠಿ ಭಾಷೆ ಬೆಳೆಯಲು ಪೂರಕ ವಾತಾವರಣ ನಿರ್ಮಿಸುತ್ತಿದ್ದಾರೆಂದು ಅವರು ದೂರಿದರು.

ಒಂದು ವೇಳೆ ಬರುವ ಅ. 17 ರೊಳಗಾಗಿ ಶಿಕ್ಷಣಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸದಿದ್ದರೆ ಎಲ್ಲ ಕನ್ನಡ ಪರ ಸಂಘಟನೆಗಳ ಸಹಯೋಗ ದೊಂದಿಗೆ ಉಗ್ರ ಹೋರಾಟ ಕೈಗೊಳ್ಳ ಲಾಗುವುದೆಂದು ಎಚ್ಚರಿಸಿದರು.

ಈ ವೇಳೆ ಮೌಲಾನಾ ಮುಬಾರಕ್ ಸನದಿ, ರಾಜಶೇಖರ ಅರಗೊಡ್ಡಿ, ಸಂಗನಬಸವ ಶಿವಯೋಗಿಗಳು, ಮಹಾದೇವ ಝಳಕಿ, ರಾವಸಾಬ ಐಹೊಳೆ, ಮಹಾಂತೇಶ ಬಡಚಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.