ADVERTISEMENT

ಗಮನ ಸಳೆದ ಮಲ್ಲಯಸ್ವಾಮಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 6:15 IST
Last Updated 14 ಆಗಸ್ಟ್ 2012, 6:15 IST

ಕಾರಿಮನಿ (ಬೈಲಹೊಂಗಲ): ಎಲ್ಲಿ ನೋಡಿದೆಲ್ಲೆಡೆ ಅಪಾರ ಜನಸ್ತೋಮ, ಭಕ್ತಿಯ ಪರಾಕಾಷ್ಟೆ, ಹೆಜ್ಜೆ ಇಟ್ಟಲ್ಲೆಲ್ಲ ಭಕ್ತರಿಗೆ ಭಂಡಾರ ಹಚ್ಚುವ ದೃಶ್ಯ. ನೋಡುಗರಿಗೆ ಸಂಭ್ರಮ, ಮೊಳಗಿದ ಏಳು ಕೋಟಿ ಏಳು ಕೋಟಿ ಚಾಂಗ್ ಬೊಲೊ..! ಎಂಬ ಜೈಘೋಷದ ಭಕ್ತಿಯ ಉನ್ಮಾದ...!

ಇದು ವರ್ಷ ಪದ್ದತಿಯಂತೆ ಮಲ್ಲಯ್ಯಸ್ವಾಮಿಯ ಜಾತ್ರೆಯಲ್ಲಿ ಕಂಡು ಬಂದ ನೋಟ. ವಗ್ಗಯ್ಯಗಳಿಂದ ಚಾಗಟೆ ಏಟು, ಹರಕೆ ಹೊತ್ತ ಭಕ್ತರು ವಗ್ಗಯ್ಯರಿಗೆ ಎಡಿ ತುಂಬುವದು, ಮದ್ದು ಸುಡುವ ಮೂಲಕ ತಮ್ಮ ಹರಕೆಯನ್ನು ಸಮರ್ಪಣೆ ಮಾಡಿದರು. ಅಲಂಕಾರಗೊಂಡ ಮಲ್ಲಯ್ಯಸ್ವಾಮಿ ಮೂರ್ತಿಯ ಪಲ್ಲಕ್ಕಿ ಉತ್ಸವ, ಸಕಲ ವಾದ್ಯಮೇಳಗಳೊಂದಿಗೆ ಅಪಾರ ಭಕ್ತರ ಮಧ್ಯ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ವಿಶೇಷ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಕಡಬು-ಹೋಳಿಗೆಯ ಬುತ್ತಿ ನೈವೇದ್ಯ, ತೀರ್ಥ-ಅನ್ನಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ರಾಜ್ಯದ ಹಾಗೂ ಮಹಾರಾಷ್ಟ್ರ, ಗೋವಾ ರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಲ್ಲಯ್ಯಸ್ವಾಮಿ ದರ್ಶನ ಪಡೆದರು.

ವಿದ್ಯಾರ್ಥಿಗಳಲ್ಲಿ ಜಾಗೃತಿ
ಸಂಪಗಾಂವ (ಬೈಲಹೊಂಗಲ):    ವಿದ್ಯಾರ್ಥಿಗಳಿಗೆ ವಚನಗಳ ಅರ್ಥವನ್ನು ತಿಳಿಸಿ, ಪಾಲನೆ ಮಾಡುವಂತೆ ಶಿಕ್ಷಕರು, ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.
ನಗರದ ಆರ್.ಇ.ಎಸ್. ಪ್ರೌಢ ಶಾಲೆಯ ಸಹಯೋಗದೊಂದಿಗೆ  ಆಯೋಜಿಸಲಾಗಿದ್ದ `ಪ್ರೌಢ ಶಾಲೆಯಿಂದ ಪ್ರೌಢಶಾಲೆಗೆ ವಚನ ಕಾರರು ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉಪವಿಭಾಗಾ ಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇ ಮಠ `ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಪುಸ್ತಕಗಳನ್ನು ಓದುವ ಮೂಲಕ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು~ ಎಂದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶಂಕರೆಪ್ಪ ಸಿದ್ನಾಳ ವಹಿಸಿದ್ದರು.

ಅತಿಥಿಗಳಾಗಿ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಡಿ.ನಂದೆಣ್ಣವರ, ಬಸವ ಸಮಿತಿ ಕೇಂದ್ರ ಸಮಿತಿ ನಿರ್ದೇಶಕ ಮೋಹನ ಪಾಟೀಲ,  ಮಹಾಂತೇಶ ಜಕಾತಿ, ಎಂ.ವಿ.ಸಣ್ಣವೀರಪ್ಪನವರ, ಅಶೋಕ ಶೆಟ್ಟರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.