ADVERTISEMENT

ಗುಟ್ಕಾ ಜಾಹೀರಾತು ಫಲಕಕ್ಕೆ ಮಸಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 9:25 IST
Last Updated 22 ಫೆಬ್ರುವರಿ 2011, 9:25 IST

ಬೆಳಗಾವಿ: ಸಾರಿಗೆ ಬಸ್‌ಗಳ ಮೇಲೆ ಗುಟ್ಕಾ ಕಂಪೆನಿಯ ಜಾಹೀರಾತು ಪ್ರಕಟಿಸಿರುವ ವಿರುದ್ಧ ಸರ್ವೋದಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ಸೋಮವಾರ ಫಲಕಗಳಿಗೆ ಮಸಿ ಬಳಿದು ಪ್ರತಿಭಟನೆ ನಡೆಸಿದರು. ಗುಟ್ಕಾ, ಪಾನ ಮಸಾಲಗಳು ಆರೋಗಕ್ಕೆ ಹಾನಿಕರ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದ್ದರೂ, ಸರ್ಕಾರಿ ಬಸ್‌ಗಳ ಮೇಲೆ ಅಂತಹ ಜಾಹೀರಾತು ಫಲಕಗಳನ್ನು ಹಾಕುವ ಮೂಲಕ ಪ್ರಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಇಂತಹ ಫಲಕಗಳ ಅಗತ್ಯತೆ ಇಲ್ಲ. ಈ ಫಲಕದ ಬದಲಿಗೆ ವಿಶ್ವ ಕನ್ನಡ ಸಮ್ಮೇಳನ ಫಲಕ ಹಾಕಿ ಪ್ರಚಾರ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಕಿತ್ತೂರು ಚೆನ್ನಮ್ಮ ವೃತ್ತದಿಂದ ಹಾದು ಹೋಗುವ ಬಸ್‌ಗಳ ಗುಟ್ಕಾ ಜಾಹೀರಾತಿಗೆ  ಪ್ರತಿಭಟನಾಕಾರರು ಕಪ್ಪು ಮಸಿ ಬಳಿದರು. ತಕ್ಷಣ ಇಂತಹ ಜಾಹೀರಾತು ಫಲಕಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯ ನೇತೃತ್ವವನ್ನು ಶ್ರೀನಿವಾಸ ತಾಳೂಕರ, ರಾಮಚಂದ್ರ ಢವಳಿ, ವಿನೋದ, ಮಹಾವೀರ ಸೊಂಟಕ್ಕಿ, ಪ್ರಕಾಶ ಶಿರೋಳಕರ, ಯಲ್ಲೇಶಿ ಶಿರೋಳ, ಕಲ್ಲಪ್ಪ ತಾಳೂಕರ, ನಾರಾಯಣ ಸೊಂಟಕ್ಕಿ, ಶಿವಪ್ಪ ಢವಳಿ ಮತ್ತಿತರರು ವಹಿಸಿದ್ದರು.

ಕ್ಲಬ್ ರಸ್ತೆ ಅಗಲಗೊಳಿಸಿ: ನಗರದ ಕ್ಲಬ್ ರಸ್ತೆಯನ್ನು ಸೂಕ್ತ ರೀತಿಯಲ್ಲಿ ಅಗಲಗೊಳಿಸಲು ಕ್ರಮ ಜರುಗಿಸಬೇಕು ಎಂದು ಜೈಭೀಮ ಆಟೋರಿಕ್ಷಾ ಮಾಲೀಕರ ಸಂಘ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಆದರೆ ರಸ್ತೆಯ ಅಕ್ಕ, ಪಕ್ಕದಲ್ಲಿರುವ ಗಿಡ, ಮರಗಳನ್ನು ಗಮನದಲ್ಲಿಟ್ಟುಕೊಂಡು ಅಗಲ ಮಾಡಬೇಕು. ಪ್ರಸ್ತುತ ಹಾಕಿರುವ ವಿಭಜಕವನ್ನು ಸ್ಥಳಾಂತರ ಮಾಡಬಾರದು ಎಂದು ಅವರು ಮನವಿ ಮಾಡಿಕೊಂಡರು.ಸಂಘಟನೆಯ ಮುಖಂಡರಾದ ಕಲ್ಲಪ್ಪ ಕಾಂಬಳೆ, ಬಸವರಾಜ ಅವರೊಳ್ಳಿ, ಸಂಜಯ ನಾಯಿಕ, ಶರದ ಮೇತ್ರಿ, ರಾಜು ದುರ್ಗಾಯಿ, ಮಾರುತಿ ತಳವಾರ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.