ADVERTISEMENT

ಚುನಾವಣಾ ಬಹಿರಂಗ ಪ್ರಚಾರ ಅಂತ್ಯ

ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ; ಮತದಾನಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಮೇ 2018, 5:46 IST
Last Updated 11 ಮೇ 2018, 5:46 IST

ಬೆಳಗಾವಿ: ಇದೇ ತಿಂಗಳ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಕೊನೆಯ ಸುತ್ತಿನ ಬಹಿರಂಗ ಪ್ರಚಾರವು ಗುರುವಾರ ಸಂಜೆ ಅಂತ್ಯಗೊಂಡಿತು.

ಜಿಲ್ಲೆಯ ಎಲ್ಲ 18 ಕ್ಷೇತ್ರಗಳಲ್ಲಿ ಒಟ್ಟು 203 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಬಹಿರಂಗ ಪ್ರಚಾರವನ್ನು ಕೊನೆಗೊಳಿಸಿದರು.

ಬೆಳಿಗ್ಗೆ ಪೂಜೆ ನೆರವೇರಿಸಿ ಮನೆಯಿಂದ ಹೊರಬಿದ್ದ ಅಭ್ಯರ್ಥಿಗಳು, ತೆರೆದ ವಾಹನಗಳಲ್ಲಿ ಪ್ರಚಾರ ನಡೆಸಿದರು. ಅವರ ಜೊತೆ ನೂರಾರು ಬೆಂಬಲಿಗರು ಸಾಥ್‌ ನೀಡಿದರು. ಮೈಕ್‌ ಬಳಸಿದ ಅಭ್ಯರ್ಥಿಗಳು, ದಾರಿಗುಂಟ ಭಾಷಣ ಮಾಡುತ್ತ ಸಾಗಿದರು. ತಮ್ಮ ಸಾಧನೆ ಹಾಗೂ ವಿರೋಧ ಪಕ್ಷಗಳ ವೈಫಲ್ಯಗಳನ್ನು ಜನರ ಎದುರು ಸಾದರಪಡಿಸಿದರು. ಇವರ ಭಾಷಣಕ್ಕೆ ಜನರು ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು.

ADVERTISEMENT

ಆಟೊ, ಟಾಂಟಾಂ ಬಳಕೆ: ಅಭ್ಯರ್ಥಿಗಳ ಭಾವಚಿತ್ರ, ಹೆಸರು, ಪಕ್ಷದ ಚಿಹ್ನೆಯನ್ನು ಒಳಗೊಂಡ ಫಲಕಗಳನ್ನು ಆಟೊ, ಟಾಂಟಾಂ ಸುತ್ತ ಕಟ್ಟಿಕೊಂಡು ತಿರುಗಿದರು. ಬೈಕ್‌ಗಳ ಮೇಲೆ ಪಕ್ಷದ ಧ್ವಜ ಕಟ್ಟಿಕೊಂಡ ಯುವಕರು ಕ್ಷೇತ್ರದ ತುಂಬೆಲ್ಲ ಸುತ್ತಿದರು. ಕ್ಷೇತ್ರದ ಪ್ರಮುಖ ವೃತ್ತಗಳಲ್ಲಿ ವಾಹನವನ್ನು ನಿಲ್ಲಿಸಿ, ಅಭ್ಯರ್ಥಿಗಳ ಧ್ವನಿಮುದ್ರಿತ ಭಾಷಣವನ್ನು ನುಡಿಸಲಾಯಿತು. ಹಸ್ತಪ್ರತಿಗಳನ್ನು ಹಂಚಲಾಯಿತು.

ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದ ಕಾರ್ಯಕರ್ತರು ಚಿಹ್ನೆ ಹೊಂದಿದ್ದ ಟೋಪಿಗಳನ್ನು, ಟೀ ಶರ್ಟ್‌ಗಳನ್ನು ಧರಿಸಿದ್ದರು. ಗಲ್ಲಿ ಗಲ್ಲಿಯಲ್ಲಿ ಅಭ್ಯರ್ಥಿಗಳ ಪರ ಹಾಗೂ ಪಕ್ಷದ ಘೋಷಣೆಗಳನ್ನು ಕೂಗಿದರು. ಇವಿಎಂ ಮತಪತ್ರದಲ್ಲಿರುವ ಅಭ್ಯರ್ಥಿಯ ಸ್ಥಾನ ಹಾಗೂ ಕ್ರಮಸಂಖ್ಯೆಯ ಬಗ್ಗೆ ಜನರಿಗೆ ತಿಳಿಹೇಳಿದರು. ಮತ ಚಲಾಯಿಸಿದ ನಂತರ ವಿವಿಪ್ಯಾಟ್‌ನಲ್ಲಿ ಬರುವ ಚೀಟಿಯನ್ನು ನೋಡಿ ತಮ್ಮ ಮತ ಖಾತರಿ ಪಡಿಸಿಕೊಳ್ಳಬೇಕೆಂದು ಅರಿವು ಮೂಡಿಸಿದರು.

ಬಿಸಿಲಿನ ತಾಪ: ಮಧ್ಯಾಹ್ನ 12 ಗಂಟೆಯ ಮೇಲೆ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಕಾರ್ಯಕರ್ತರು ಪ್ರಚಾರವನ್ನು ಕೆಲಹೊತ್ತು ಸ್ಥಗಿತಗೊಳಿಸಿದ್ದರು.

ಅಂಗಡಿಗಳು ಹಾಗೂ ಮನೆಗಳ ಮುಂಭಾಗದಲ್ಲಿ, ಮರಗಳ ನೆರಳಿನಲ್ಲಿ ನಿಂತು ವಿಶ್ರಾಂತಿ ಪಡೆದರು. ನೀರು, ಮಜ್ಜಿಗೆ, ತಂಪು ಪಾನೀಯ ಕುಡಿದು ಒಂದಿಷ್ಟು ಹೊತ್ತು ಕಳೆದರು. ಪುನಃ ಚೇತರಿಸಿಕೊಂಡ ನಂತರ ಮತ್ತೆ ಪ್ರಚಾರ ಮುಂದುವರಿಸಿದರು.

ಮೊಬೈಲ್‌ ಕರೆ: ಸಾಮಾಜಿಕ ತಾಣಗಳನ್ನು ಕೂಡ ಅಭ್ಯರ್ಥಿಗಳು ತಮ್ಮ ಪ್ರಚಾರಕ್ಕಾಗಿ ಬಳಸಿಕೊಂಡರು. ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ, ಫೇಸ್‌ಬುಕ್‌ನಲ್ಲಿಯೂ ಪ್ರಚಾರ ನಡೆಸಿದರು. ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಮೊಬೈಲ್‌
ಮೂಲಕ ತಮ್ಮ ಭಾಷಣದ ಆಡಿಯೊ– ವಿಡಿಯೊ ತುಣಕುಗಳು ಎಲ್ಲೆಡೆ ಪ್ರಸಾರವಾಗುವಂತೆ ನೋಡಿಕೊಂಡರು. ಮತದಾರರನ್ನು ತಲುಪಲು ಸಾಧ್ಯತೆ ಇರುವ ಎಲ್ಲ ದಾರಿಗಳನ್ನೂ ಬಳಸಿಕೊಂಡರು.

ಮದ್ಯ ಮಾರಾಟ ನಿಷೇಧ: ಮತದಾನದ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಇದೇ ತಿಂಗಳ 12ರಂದು ರಾತ್ರಿ 12ಗಂಟೆಯವರೆಗೆ ಬಂದ್‌ ಆಗಿರುತ್ತದೆ.

ಜಿಲ್ಲೆಯ ಎಲ್ಲ ಮದ್ಯದ ಅಂಗಡಿಗಳು, ಬಾರ್‌ಗಳು ಹಾಗೂ ಮಾರಾಟ ಮಳಿಗೆಗಳನ್ನು ಬಂದ್‌ ಮಾಡಿರುವಂತೆ ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಅವರು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.