ADVERTISEMENT

ಜಿಲ್ಲೆಯ ಜಲಾಶಯಗಳ ಒಳಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2012, 10:40 IST
Last Updated 5 ಆಗಸ್ಟ್ 2012, 10:40 IST

ಬೆಳಗಾವಿ: ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯ ಪೂರ್ಣವಾಗಿ ಭರ್ತಿ ಯಾಗಲು ಕೇವಲ 4 ಅಡಿ ಬಾಕಿ ಉಳಿದಿದೆ. ಜಲಾನಯನ ಪ್ರದೇಶದಲ್ಲಿ ಬಹಳ ಮಳೆಯಾಗುತ್ತಿದ್ದು, ಜಲಾ ಶಯಕ್ಕೆ ಬಹಳ ನೀರು ಹರಿದು ಬರುವ ಸಾಧ್ಯತೆ ಇದೆ. ಹೀಗಾಗಿ ಜಲಾಶಯ ದಿಂದ ಯಾವುದೇ ಕ್ಷಣದಲ್ಲೂ ನದಿಗೆ ನೀರು ಬಿಡಲಾಗುವುದು. ಜಲಾಶಯದ ಕೆಳಮಟ್ಟದ ಮಾರ್ಕಂಡೇಯ ನದಿಯ ದಡದಲ್ಲಿರುವವರು ಎಚ್ಚರಿಕೆಯಿಂದ ಇರಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಚಿಕ್ಕೋಡಿ: ತಾಲ್ಲೂಕಿನಲ್ಲಿ  ಕೃಷ್ಣಾ ಮತ್ತು ಉಪನದಿಗಳ ನೀರಿನ ಹರಿವಿನಲ್ಲಿ ಶನಿವಾರ ಮತ್ತೆ ಏರಿಕೆ ದಾಖಲಾಗಿದ್ದು, ಕೆಳಮಟ್ಟದ ಒಟ್ಟು ಏಳು ಸೇತುವೆಗಳು ಜಲಾವೃಗೊಂಡು ಸಾರಿಗೆ ಸಂಚಾರ ಸ್ಥಗಿತಗೊಂಡಿದೆ.
ತಾಲ್ಲೂಕಿನ ಕಲ್ಲೋಳ-ಯಡೂರ  ಮತ್ತು ಜತ್ರಾಟ-ಭೀವಶಿ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆ ಗಳು ಕಳೆದ ನಾಲ್ಕು ದಿನಗಳಿಂದ ಮುಳುಗಡೆ ಸ್ಥಿತಿಯಲ್ಲಿಯೇ ಇದ್ದು, ಶುಕ್ರವಾರವಷ್ಟೇ ಸಂಚಾರಕ್ಕೆ ಮುಕ್ತ ಗೊಂಡಿದ್ದ ಸದಲಗಾ -ಬೋರಗಾಂವ, ಸಿದ್ನಾಳ-ಅಕ್ಕೋಳ ಮತ್ತು ಮಲಿಕವಾಡ -ದತ್ತವಾಡ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆಗಳು ಸೇರಿದಂತೆ ಕಾರದಗಾ -ಭೋಜ, ಭೋಜ ವಾಡಿ-ಕುನ್ನೂರ ಸೇತುವೆಗಳ ಮೇಲೂ ಶನಿವಾರ ಸಂಜೆ ವೇಳೆಗೆ ನೀರು ಬಂದಿದೆ ಎಂದು ಪ್ರಭಾರಿ ಉಪವಿಭಾಗಾಧಿಕಾರಿ ರಾಜಶೇಖರ ಡಂಬಳ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಶನಿವಾರ ಮಳೆ ಬಿಡುವು ನೀಡಿದೆ. ಆದರೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನಲ್ಲಿ ನದಿಗಳು ಮೈದುಂಬಿಕೊಂಡು ಹರಿಯಲಾರಂಭಿ ಸಿವೆ. ಇದರಿಂದ ಕಳೆದೆರೆಡು ವಾರಗಳಲ್ಲಿ ಮೂರನೇ ಬಾರಿಗೆ ಸೇತುವೆಗಳು ಮುಳುಗಡೆಯಾಗಿವೆ. ಇದರಿಂದ ಸಾರಿಗೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದ್ದು, ಉಭಯ ಗ್ರಾಮಗಳ ಮಧ್ಯೆ ಅಲ್ಲದೇ, ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಪದೇಪದೇ ಮುಳುಗಡೆಯಾಗುತ್ತಿರುವದರಿಂದ ಜನರು ಸುತ್ತುಬಳಿಸಿ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ತುಂತುರು ಮಳೆ
ಬೆಳಗಾವಿ
: ನಗರದಲ್ಲಿ ಶನಿವಾರ ಆಗಾಗ ತುಂತುರು ಮಳೆ ಸುರಿಯುತ್ತಿತ್ತು. ಶುಕ್ರವಾರ ರಾತ್ರಿಯಿಡಿ ಸುರಿದ ಮಳೆಯು ಶನಿವಾರ ಬೆಳಿಗ್ಗೆಯಾಗು ತ್ತಿದ್ದಂತೆ ತೀವ್ರತೆಯನ್ನು ಕಳೆದು ಕೊಂಡಿತು. ಬಳಿಕ ತುಂತುರು ಮಳೆ ಸುರಿಯತೊಡಗಿದ್ದುದ್ದು, ಬೆಳಿಗ್ಗೆ 10 ಗಂಟೆಯ ಬಳಿಕ ಬಿಡುವು ನೀಡಿತು. ಮಧ್ಯಾಹ್ನದವರೆಗೂ ಆಗಾಗ ತುಂತುರು ಮಳೆಯಾದವು. ಒಂದೆರಡು ಬಾರಿ ಬಾನಲ್ಲಿ ಸೂರ್ಯನ ದರ್ಶನವೂ ಆಯಿತು.

ಸಂಜೆ 4ಗಂಟೆಯ ಬಳಿಕ ಆರಂಭವಾದ ಮಳೆಯು ಸುಮಾರು ಒಂದು ಗಂಟೆಗಳ ಕಾಲ ಉತ್ತಮವಾಗಿ ಸುರಿಯಿತು. ಬಳಿಕ ರಾತ್ರಿಯವರೆಗೂ ಸಣ್ಣದಾಗಿ ಮಳೆ ಸುರಿಯತೊಡಗಿತ್ತು.

ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆವರೆಗೆ ಖಾನಾಪುರ ತಾಲ್ಲೂಕಿನಲ್ಲಿ ಗುಂಜಲಿ 115.6 ಮಿ.ಮೀ, ಲೋಂಡಾ ರೈಲ್ವೆ ನಿಲ್ದಾಣ 100 ಮಿ.ಮೀ, ಬೆಳಗಾವಿ ತಾಲ್ಲೂಕಿನ ರಕಸಕೊಪ್ಪ 131.1 ಮಿ.ಮೀ, ಸಂತಿ ಬಸ್ತವಾಡದಲ್ಲಿ 98.1 ಮಿ.ಮೀ ಮಳೆ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.