ADVERTISEMENT

ಜ್ಞಾನ ನೀಡುವುದೇ ನಿಜ ಧರ್ಮ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 6:40 IST
Last Updated 3 ಸೆಪ್ಟೆಂಬರ್ 2011, 6:40 IST

ಬೈಲಹೊಂಗಲ: ಅಜ್ಞಾನ ಹಾಗೂ ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡಿ, ಸಮಾಜಕ್ಕೆ ಜ್ಞಾನದ ಬೆಳಕು ನೀಡುವುದೇ ನಿಜವಾದ ಧರ್ಮ. ಇದನ್ನು ರುದ್ರಾಕ್ಷಿಮಠದ ಶ್ರೀಗಳು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ ಎಂದು ಬೆಳಗಾವಿ ನಾಗನೂರ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಇಲ್ಲಿಯ ರುದ್ರಾಕ್ಷಿಮಠದಲ್ಲಿ ಇತ್ತೀಚೆಗೆ ಪೀಠಾಧಿಕಾರಿ ಬಸವಲಿಂಗ ಸ್ವಾಮೀಜಿ ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಾತು ಕೃತಿಯಲ್ಲಿ ಒಂದೇ ಮನೋಭಾವದೊಂದಿಗೆ ಭಕ್ತರಿಗೆ ಶಿಕ್ಷಣ ಹಾಗೂ ಅಧ್ಯಾತ್ಮ ಸಂಸ್ಕಾರವನ್ನು ಶ್ರೀಮಠ ನೀಡುತ್ತಿದೆ. ಅದಕ್ಕೆ ಬಸವಲಿಂಗ ಶ್ರೀಗಳು ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವುದು ಅರ್ಥಪೂರ್ಣ ಎಂದರು.

ಹೂಲಿ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಮುರಗೋಡ ನೀಲಕಂಠ ಸ್ವಾಮೀಜಿ, ಹಂದಿಗುಂದ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಹೊಸೂರ ಮಡಿವಾಳೇಶ್ವರಮಠ ಗಂಗಾಧರ ಸ್ವಾಮೀಜಿ, ಬಾದಾಮಿ ಶಿವಪೂಜ ಶಿವಾಚಾರ್ಯ, ಹಣ್ಣಿಕೇರಿ ರಾಚೋಟೇಶ್ವರ ಶಿವಾಚಾರ್ಯ, ಧಾರವಾಡ ಕೆಲಗೇರಿ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಭಾಜಿ ಉಪಸ್ಥಿತರಿದ್ದರು.

ವಿದೇಶದಲ್ಲಿ ಆಧ್ಯಾತ್ಮಿಕ ಸಂದೇಶ ನೀಡಿ ಬಂದ ಬಸವಲಿಂಗ ಸ್ವಾಮೀಜಿ ಅವರ ರುದ್ರಾಕ್ಷಿ ತುಲಾಭಾರ ಹಾಗೂ ಶತಾಯುಷಿ ಪಡದಯ್ಯಸ್ವಾಮಿ ಹಿರೇಮಠ (ಬಾಳೇಕುಂದರಗಿ) ಅವರನ್ನು ಸತ್ಕರಿಸಲಾಯಿತು.

ಮಾಜಿ ಸಚಿವ ಶಿವಾನಂದ ಕೌಜಲಗಿ, ಕೆ.ಎಲ್.ಇ. ನಿರ್ದೇಶಕ ಡಾ. ವಿ.ಎಸ್. ಸಾಧುನವರ, ಉಪಾಧ್ಯಕ್ಷ ಬಸವರಾಜ ತಟವಾಟಿ, ಸುರೇಶ ಮೆಟಗುಡ್, ಪ್ರಮೋದಕುಮಾರ ವಕ್ಕುಂದಮಠ, ರುದ್ರಸ್ವಾಮಿ ಶಿಕ್ಷಣ ಸಂಸ್ಥೆಯ ವಿಲಾಸ ವಾಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಲಿಂಗದೀಕ್ಷೆ ಹಾಗೂ ಸಾಮೂಹಿಕ ಲಿಂಗಪೂಜೆ ಜರುಗಿತು. ಎಂ.ಕೆ. ಕುರಿ ಸ್ವಾಗತಿಸಿದರು. ಮೃತ್ಯುಂಜಯಸ್ವಾಮಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.