ADVERTISEMENT

ಟಿಸಿ ಕೊಟ್ಟು ಮನೆಗೆ ಕಳುಹಿಸಿದರು...

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 6:10 IST
Last Updated 23 ಆಗಸ್ಟ್ 2012, 6:10 IST
ಟಿಸಿ ಕೊಟ್ಟು ಮನೆಗೆ ಕಳುಹಿಸಿದರು...
ಟಿಸಿ ಕೊಟ್ಟು ಮನೆಗೆ ಕಳುಹಿಸಿದರು...   

ಬೆಳಗಾವಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ ನಿಯಮಾವಳಿಯನ್ನು ಉಲ್ಲಂಘಿಸಿ ನಗರದ ಗಣೇಶಪುರ ರಸ್ತೆಯ ಗುಡ್ ಶೆಫರ್ಡ್ ಸೆಂಟ್ರಲ್ ಸ್ಕೂಲ್ ಹೆಚ್ಚುವರಿ ಶುಲ್ಕ ಪಡೆದಿರುವುದನ್ನು ಖಂಡಿಸಿ ಪ್ರತಿಭಟಿಸಿದ ಪಾಲಕರ ಇಬ್ಬರು ಮಕ್ಕಳಿಗೆ ಶಾಲೆಯು ವರ್ಗಾವಣೆ ಪತ್ರ (ಟಿಸಿ)ವನ್ನು ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ವಿ.ಎಸ್. ಚೌಗಲಾ ಅವರಿಗೆ ಬುಧವಾರ ಮನವಿ ಸಲ್ಲಿಸಿದ ಪಾಲಕರಾದ ವಿಜಯ ಮಾರುತಿ ಶಿಂಗಟೆ ಹಾಗೂ ಅವರ ಪತ್ನಿ ಮನಾಲಿ, `ಎರಡು ವರ್ಷಗಳ ಹಿಂದೆ ನಮ್ಮ ಪುತ್ರ ಅಭಿಷೇಕ ಹಾಗೂ ಪುತ್ರಿ ಸಾನಿಯಾ ಅವರನ್ನು ಗುಡ್ ಶೆಫರ್ಡ್ ಸೆಂಟ್ರಲ್ ಸ್ಕೂಲ್‌ಗೆ ಸೇರಿಸಿದ್ದೆವು. ಈಗ ಅಭಿಷೇಕ 6ನೇ ತರಗತಿಯಲ್ಲಿ ಹಾಗೂ ಸಾನಿಯಾ 2ನೇ ತರಗತಿಯಲ್ಲಿ ಓದುತ್ತಿದ್ದರು. ಪ್ರವೇಶದ ಸಂದರ್ಭದಲ್ಲಿ ವರ್ಷಕ್ಕೆ 8,500 ರೂಪಾಯಿ ನಿಗದಿಪಡಿಸಿ, ಮುಂದಿನ 5 ವರ್ಷಗಳ ಕಾಲ ಶುಲ್ಕವನ್ನು ಹೆಚ್ಚಿಸುವುದಿಲ್ಲ ಎಂದು ಶಾಲೆಯು ಭರವಸೆ ನೀಡಿತ್ತು~ ಎಂದು ತಿಳಿಸಿದ್ದಾರೆ.

ಆದರೆ, 2012-13ನೇ ಸಾಲಿನ ಪ್ರವೇಶದ ಸಂದರ್ಭದಲ್ಲಿ ಪಾಲಕರ ಅಭಿಪ್ರಾಯವನ್ನು ಕೇಳದೇ ಶುಲ್ಕವನ್ನು ಏಕಾಏಕಿ 21 ಸಾವಿರ ರೂಪಾಯಿಗೆ ಹೆಚ್ಚಿಸಲಾಯಿತು. ಶಿಂಗಟೆ ಸೇರಿದಂತೆ ಹಲವು ಪಾಲಕರು ಶುಲ್ಕ ಹೆಚ್ಚಳವನ್ನು ಖಂಡಿಸಿ ಆಗಸ್ಟ್ 9ರಂದು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಶಾಲೆಯು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಶಿಂಗಟೆ ಅವರ ವಿರುದ್ಧ ದೂರು ದಾಖಲಿಸಿತ್ತು.

`ಅಭಿಷೇಕ ಹಾಗೂ ಸಾನಿಯಾ ಅವರ ವರ್ಗಾವಣೆ ಪತ್ರವನ್ನು ಆಗಸ್ಟ್ 14ರಂದು ಶಾಲೆಯ ಆಡಳಿತ ಮಂಡಳಿಯು ಮನೆಗೆ ಕಳುಹಿಸಿಕೊಟ್ಟಿದೆ. ಅಂದಿನಿಂದ ಶಾಲೆಗೆ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ ಮಕ್ಕಳಿಗೆ ನ್ಯಾಯ ಒದಗಿಸಿಕೊಡಿ~ ಎಂದು ಶಿಂಗಟೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.

ತಮಗೆ ನ್ಯಾಯ ಒದಗಿಸಿಕೊಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾವು ತಂದಿದ್ದ ವಿಷದ ಬಾಟಲಿಗಳನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳ ಮುಂದೆ ಶಿಂಗಟೆ ಕುಟುಂಬದವರು ಪ್ರದರ್ಶಿಸಿದರು.

ಶಾಲೆಯ ಪ್ರಾಚಾರ್ಯರನ್ನು ಕರೆಸಿ ಮಾತುಕತೆ ನಡೆಸಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗದಂತೆ ಕ್ರಮ ಕೈಗೊಳ್ಳುವಂತೆ ಡಿಡಿಪಿಐ ದಿವಾಕರ ಶೆಟ್ಟಿ ಅವರಿಗೆ ಡಾ. ವಿ.ಎಸ್. ಚೌಗಲೆ ಅವರು ಸೂಚಿಸಿದರು.
ಶಿಂಗಟೆ ಕುಟುಂಬಕ್ಕೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಪೊಲೀಸ್ ಇಲಾಖೆಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳು ಆದೇಶಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.