ಚಿಕ್ಕೋಡಿ: ತಾಂತ್ರಿಕ ಕ್ಷೇತ್ರದ ಸಾಧನೆಯಿಂದ ಇಡೀ ಜಗತ್ತಿನ ಗಮನ ಸೆಳೆಯುತ್ತಿರುವ ಕನ್ನಡದ ಪ್ರತಿಭಾವಂತರು ವಿದೇಶಗಳಲ್ಲಿ ಸೇವೆ ಸಲ್ಲಿಸುವಾಗಲೇ ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊರದೇಶಗಳಲ್ಲಿ ನೆಲೆಗೊಳಿಸಲು ಮುಂದಾಗಬೇಕು” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. ಪಟ್ಟಣದ ಕೆಎಲ್‌ಇ ಸಂಸ್ಥೆಯ ಚಿದಾನಂದ ಬಸವಪ್ರಭು ಕೋರೆ ಬಹುತಾಂತ್ರಿಕ ವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕನ್ನಡ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ನಶಿಸಿ ಹೋಗುತ್ತಿರುವ ಪ್ರಾದೇಶಿಕ ಭಾಷೆಗಳ ಸಾಲಿನಲ್ಲಿ ಕನ್ನಡ ಭಾಷೆಯೂ ಸೇರಿದಂತೆ ತಾಯ್ನುಡಿ ಯನ್ನು ಉಳಿಸಿ ಬೆಳೆಸುವಲ್ಲಿ ಯುವ ಜನಾಂಗದ ಪಾತ್ರ ಮಹತ್ತರವಾಗಿದೆ. ಜಾಗತೀಕರಣದ ಭರಾಟೆಯಲ್ಲಿಯೂ ಕನ್ನಡವನ್ನು ಗಟ್ಟಿಯಾಗಿ ಬೆಳೆಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಸಮರ್ಥವಾಗಿ ನಿಭಾಯಿಸಬೇಕು ಎಂದು ಕರೆ ನೀಡಿದರು.ಕಿರುತೆರೆ ಕಲಾವಿದ ನಾಗರಾಜ ಮೂರ್ತಿ ಮಾತನಾಡಿದರು. ಚಿಂಚಣಿಯ ಶ್ರೀ ಅಲ್ಲಮಪ್ರಭು ಸ್ವಾಮೀಜಿ, ಚರಮೂರ್ತಿಮಠದ ಶ್ರೀ ಸಂಪಾದನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕನ್ನಡಪರ ಹೋರಾಟಗಾರ ಸಿದ್ದನಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಶೋಭಾ ಚೆನ್ನವರ, ಉಪಾಧ್ಯಕ್ಷ ಸುರೇಶ ಕಟ್ಟೀಕರ, ಟಿಎಪಿಎಂಸಿ ಅಧ್ಯಕ್ಷ ಜಗದೀಶ ಕವಟಗಿಮಠ, ಮಾಜಿ ಶಾಸಕ ಮನೋಹರ ಕಟ್ಟೀಮನಿ, ಜಿ.ಪಂ. ಸದಸ್ಯ ಮಹೇಶ ಭಾತೆ, ಉಪವಿಭಾಗಾಧಿಕಾರಿ ಪಿ.ಎನ್. ರವೀಂದ್ರ, ಡಿಡಿಪಿಐ ಕೆ.ಸಿ. ಕೃಷ್ಣಶೆಟ್ಟಿ, ಎಸ್.ವೈ. ಹಂಜಿ ಮುಂತಾದವರು ಉಪಸ್ಥಿತರಿದ್ದರು. ಪ್ರಾಚಾರ್ಯ ಬಿ.ಎ. ಪೂಜಾರಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.