ADVERTISEMENT

ದಲಿತ ಸಾಹಿತ್ಯ ಸಮ್ಮೇಳನ 29ರಿಂದ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 7:10 IST
Last Updated 25 ಡಿಸೆಂಬರ್ 2012, 7:10 IST

ಬೆಳಗಾವಿ: ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕ ಹಾಗೂ ಬೆಳಗಾವಿ ಜಿಲ್ಲಾ ಘಟಕದ ಆಶ್ರಯದಲ್ಲಿ 4ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ 29 ಮತ್ತು 30ರಂದು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಡಾ. ಚೆನ್ನಣ್ಣ ವಾಲೀಕಾರ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ.

ಎರಡು ದಿನಗಳ ಕಾಲ ಸಮ್ಮೇಳನದಲ್ಲಿ ಐದು ವಿಚಾರ ಗೋಷ್ಠಿಗಳು, ಮೂರು ವಿಶೇಷ ಉಪನ್ಯಾಸ ಗೋಷ್ಠಿಗಳು, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯ ಸೇರಿದಂತೆ ವಿವಿಧ  ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರು ಸಾಧಕರಿಗೆ ವಿವಿಧ ಗೌರವ ಪ್ರಶಸ್ತಿ ಪ್ರದಾನ, ಹದಿನೆಂಟು ಬರಹಗಾರರಿಗೆ ಪುಸ್ತಕ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಸಮ್ಮೋನ ಮಾಡಲಾಗುವುದು ಜೊತೆಗೆ ಎರಡು ದಿನಗಳ ಕಾಲ ಖ್ಯಾತ ಕಲಾವಿದರಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

29ರಂದು ಬೆಳಿಗ್ಗೆ 8 ಗಂಟೆಗೆ ಕುಮಾರ ಗಂಧರ್ವ ರಂಗಮಂದಿರದ ಆವರಣದಲ್ಲಿ ಶಾಸಕ ಫಿರೋಜ್ ಸೇಠ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ 9 ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯು ಪ್ರಾರಂಭವಾಗಿ, ಎಸ್.ಪಿ. ಕಚೇರಿ ಮೂಲಕ ಕುಮಾರ ಗಂಧರ್ವ ರಂಗಮಂದಿರದಲ್ಲಿ ಅಂತ್ಯಗೊಳ್ಳಲಿದೆ. ಮೆರವಣಿಗೆಗೆ ಜಿ.ಪಂ. ಅಧ್ಯಕ್ಷೆ ಶಾಂತಾ ಕಲ್ಲೋಳಿಕರ ಚಾಲನೆ ನೀಡಲಿದ್ದಾರೆ. ರಾಜ್ಯದ ವಿವಿಧೆಡೆಯ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ನಂತರ 11 ಗಂಟೆಗೆ ಸಮ್ಮೇಳನವನ್ನು ಮಹಾರಾಷ್ಟ್ರದ ಖ್ಯಾತ ಸಾಹಿತಿ ಉತ್ತಮ ಕಾಂಬಳೆ ಉದ್ಘಾಟಿಸಲಿದ್ದಾರೆ. ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ದಲಿತ ಸಾಹಿತ್ಯ ಪರಿಷತ್ತಿನ ಕೃತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕರಾದ ಪ್ರಕಾಶ ಹುಕ್ಕೇರಿ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಸಿ. ಚಂದ್ರಶೇಖರ ಅವರು ಕಲಾ ಪ್ರದರ್ಶನ, ಗೋಕಾಕದ ವರ್ತಕರಾದ ಮಹಾಂತೇಶ ತಾಂವಶಿ ಅವರು ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.

ಮಧ್ಯಹ್ನ 2.30ಕ್ಕೆ `ದಲಿತ ಸಾಹಿತ್ಯ ಸಂವೇದನೆಗಳು' ಕುರಿತು ಡಾ. ಎಂ.ಎಸ್. ಶೇಖರ್ ಅಧ್ಯಕ್ಷತೆಯಲ್ಲಿ ಮೊದಲನೇ ಗೋಷ್ಠಿ ನಡೆಯಲಿದೆ. ಡಾ. ಟಿ.ಎಂ. ಭಾಸ್ಕರ ಆಶಯ ಮಾತನಾಡಲಿದ್ದಾರೆ. ಕಥಾ ಸಾಹಿತ್ಯ ಕುರಿತು ಡಾ. ಲಿಂಗಣ್ಣ ಗೋನಾಲ, ಕಾವ್ಯ ಕುರಿತು ಡಾ. ಎಸ್. ನಂದಕುಮಾರ, ಕಾದಂಬರಿ ಮತ್ತು ನಾಟಕಗಳ ಕುರಿತು ಡಾ. ಸುಭಾದಾಸ ಮರವಂತೆ ಮಾತನಾಡಲಿದ್ದಾರೆ. ಬಾಗಲಕೋಟೆಯ ಪರಶುರಾಮ ಮಹಾರಾಜನವರ ಅವರು ಬುದ್ಧ-ಬಸವ-ಅಂಬೇಡ್ಕರ್ ಸಮನ್ವಯ ಕುರಿತು ವಿಚಾರ ಹಂಚಿಕೊಳ್ಳಲಿದ್ದಾರೆ.

4 ಗಂಟೆಗೆ  ದಲಿತ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಉದ್ಯೋಗ ವಿಷಯ ಕುರಿತು ವಿಶೇಷ ಉಪನ್ಯಾಸಕ ಜರುಗಲಿದೆ. ಡಾ. ರಾಜಪ್ಪ ದಳವಾಯಿ ಮಾತನಾಡಲಿದ್ದು, ಶ್ರೀನಾಥ ಪೂಜಾರಿ ಹಾಗೂ ಶಿವಕುಮಾರ ಅಮ್ಮೋಪೂರ ಪ್ರತಿಕ್ರಿಯೆ ನೀಡಲಿದ್ದಾರೆ. 5 ಗಂಟೆಗೆ `ಕನ್ನಡ ಮರಾಠಿ ದಲಿತ ಸಾಹಿತ್ಯ ಸಂವೇದನೆಗಳು' ವಿಷಯ ಕುರಿತು ಮತ್ತೊಂದು ವಿಶೇಷ ಉಪನ್ಯಾಸ ನಡೆಯಲಿದೆ. ವಿಷಯ ಕುರಿತು ಡಾ. ಕೃಷ್ಣ ಕಿರವಲೆ ಮಾತನಾಡಲಿದ್ದು, ಡಾ. ಚಂದ್ರಕಾಂತ ವಾಘಮಾರೆ, ಡಾ. ಸಿದ್ರಾಮ ಕಾರಣಿಕ ಪ್ರತಿಕ್ರಿಯೆ ನೀಡಲಿದ್ದಾರೆ.

29ರಂದು ಸಂಜೆ 6 ಗಂಟೆಗೆ ಕಾವ್ಯ-ಕುಂಚ-ಗಾಯನ ಹಾಗೂ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಅಂದು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೊತಬಾಳ ಅರುಣೊದಯ ಕಲಾ ತಂಡದವರಿಂದ ಕ್ರಾಂತಿಗೀತೆಗಳು ಮತ್ತು ಜೋಗತಿ ಕುಣಿತ, ವಿಜಯಕುಮಾರ ಸುತಾರ ಅವರಿಂದ ತಬಲಾ ಸಾಥ್, ಗೌರವ್ವ ಕಾಂಬಳೆ ಹಾಗೂ ಯಲ್ಲವ್ವ ಬಸಪ್ಪ ಮಾದರ ಅವರಿಂದ ಗೀಗೀ ಪದಗಳು ಹಾಗೂ ಗುಲ್ಬರ್ಗದ ಆಟ-ಮಾಟ ತಂಡದವರಿಂದ ಹೊಲಗೇರಿ ರಾಜಕುಮಾರ ನಾಟಕ ಪ್ರದರ್ಶನಗೊಳ್ಳಲಿದೆ.

ಪ್ರಶಸ್ತಿ ಪ್ರದಾನ: ಡಿ. 30ರಂದು ಬೆಳಿಗ್ಗೆ 9.30ಕ್ಕೆ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಕಾರ್ಯಕ್ರಮ ಜರುಗಲಿದೆ. ಡಾ. ಯಲ್ಲಪ್ಪ ಕಕೆಪುರ ಮತ್ತು ಬಿ ಸುಕನ್ಯಾ ಅವರಿಗೆ ಗೌರವ ಪ್ರಶಸ್ತಿ, ಡಾ. ಹನುಮಂತ ನಾಯಕ ದೊರೆ ಅವರಿಗೆ ಬಹದ್ದೇಶಿ ಪ್ರಶಸ್ತಿ, ಮಾವಳ್ಳಿ ಶಂಕರ ಅವರಿಗೆ ದಲಿತ ಚೇತನ ಪ್ರಶಸ್ತಿ, ಹನುಮಂತ ಬಾಗೇವಾಡಿ ಅವರಿಗೆ ದಲಿತಸಿರಿ ಪ್ರಶಸ್ತಿ ಮತ್ತು ಡಾ. ಸಿ. ಚಂದ್ರಶೇಖರ ಅವರಿಗೆ ದಲಿತ ಕಲಾಸಿರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ 2010 ಮತ್ತು 11ನೇ ಸಾಲಿನ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗಳನ್ನು ಖ್ಯಾತ ಸಾಹಿತಿ ಕು. ವೀರಭದ್ರಪ್ಪ ಪ್ರದಾನ ಮಾಡಲಿದ್ದಾರೆ.

ಅಂದು 11 ಗಂಟೆಗೆ ಬುಡಕಟ್ಟು ಜನಾಂಗದ ಬದುಕಿನ ಸವಾಲುಗಳು ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ಡಾ. ಎ.ಎಸ್. ಪ್ರಭಾಕರ ನೀಡಲಿದ್ದಾರೆ. ಡಾ. ಎಂ.ಸೋಮಕ್ಕ ಹಾಗೂ ಡಾ. ವೈ.ಬಿ. ಹಿಮ್ಮಡಿ ಪ್ರತಿಕ್ರಿಯೆ ನೀಡಲಿದ್ದಾರೆ.

12 ಗಂಟೆಗೆ ವಿವಿಧ ವಿಷಯ ಕುರಿತು ಸಂಕೀರ್ಣ ವಿಚಾರಗೋಷ್ಠಿ ಜರುಗಲಿದೆ. ದಲಿತ ಸಮುದಾಯದ ಪರ್ಯಾಯ ರಾಜಕಾರಣ ವಿಷಯ ಕುರಿತು ಡಾ. ಸಿದ್ಧನಗೌಡ ಪಾಟೀಲ, ದಲಿತ ಮಹಿಳಾ ಲೋಕದ ಸವಾಲುಗಳು ಕುರಿತು ಡಾ. ಶರಣಮ್ಮ ಗೊರೇಬಾಳ, ಸಾಹಿತ್ಯ ಕ್ಷೇತ್ರಕ್ಕೆ ಡಾ. ಚೆನ್ನಣ್ಣ ವಾಲೀಕಾರ ಅವರ ಕೊಡುಗೆ ಕುರಿತು ಡಾ. ಶ್ರೀಶೈಲ ನಾಗರಾಳ ಮಾತನಾಡುವರು. ಬಿ. ಗೋಪಾಲ ಆಶಯ ಮಾತಗಳನ್ನಾಡಲಿದ್ದು, ಚಂದ್ರಕಾಂತ ಪೋಕಳೆ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂವಾದ, ಸಮಾರೋಪ: ಮಧ್ಯಾಹ್ನ 2 ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು, ನಾಡಿನ ವಿವಿಧೆಡೆಯ 50 ಕವಿಗಳು ತಮ್ಮ ಕವಿತೆಗಳನ್ನು ಪ್ರಸ್ತುತ ಪಡೆಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಕವಿ ಸುಬ್ಬು ಹೊಲೆಯಾರ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಸಂವಾದಗೋಷ್ಠಿ ನಡೆಯಲಿದೆ. ಸಂಜೆ 5ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಸಾಧನೆ ಮಾಡಿದ ಗಣ್ಯರಿಗೆ ಸಮ್ಮೋನ ಸಮಾರಂಭ ಜರುಗಲಿದೆ.

ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಜರಲಿದ್ದು, ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಸಮಾರೋಪ ಭಾಷಣ ಮಾಡಲಿದ್ದಾರೆ. ಡಾ. ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಧಾರವಾಡದ ರಂಗ ಸಮಾಜದವರು ಕಾಗಿನೆಲೆ ಕನಕ ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.