ADVERTISEMENT

‘ದೊಡ್ಡ ಕೆರೆ’ಯಲ್ಲಿ ಹನಿಯೂ ನೀರಿಲ್ಲ!

ನಿರ್ಲಕ್ಷ್ಯಕ್ಕೆ ಬಲಿಯಾದ ಇಟಗಿಯ ಪ್ರಮುಖ ಜಲಮೂಲ

ಪ್ರಸನ್ನ ಕುಲಕರ್ಣಿ
Published 1 ಜೂನ್ 2017, 10:12 IST
Last Updated 1 ಜೂನ್ 2017, 10:12 IST
‘ದೊಡ್ಡ ಕೆರೆ’ಯಲ್ಲಿ ಹನಿಯೂ ನೀರಿಲ್ಲ!
‘ದೊಡ್ಡ ಕೆರೆ’ಯಲ್ಲಿ ಹನಿಯೂ ನೀರಿಲ್ಲ!   

ಖಾನಾಪುರ: ಹತ್ತು ವರ್ಷಗಳ ಹಿಂದೆ ವರ್ಷಪೂರ್ತಿ ತುಂಬಿ ಜನ, ಜಾನುವಾರುಗಳ ದಾಹ ತಣಿಸುತ್ತಿದ್ದ ತಾಲ್ಲೂಕಿನ ಇಟಗಿ ಗ್ರಾಮದ ಐತಿಹಾಸಿಕ ದೊಡ್ಡ ಕೆರೆ ಈಗ ನಿರ್ವಹಣೆಯ ಕೊರತೆಯಿಂದಾಗಿ ನಲುಗಿದೆ.

ಸುತ್ತಲಿನ ಎಂಟು ಗ್ರಾಮಗಳ ಪ್ರಮುಖ ಜಲಮೂಲವಾಗಿರುವ ಈ ಕೆರೆಯನ್ನು ಪುನಶ್ಚೇತನಗೊಳಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಇಟಗಿ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಕೆರೆಯ ಇತಿಹಾಸ:  ಗ್ರಾಮವನ್ನು ಅರ್ಧ ಚಂದ್ರಾಕೃತಿಯಲ್ಲಿ ಸುತ್ತುವರೆದಿರುವ ಕೆರೆ ಕದಂಬರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಇತಿಹಾಸ ಹೇಳುತ್ತದೆ.
ಕೆರೆಯ ದಡದಲ್ಲಿ ಐತಿಹಾಸಿಕ ಕಮಲ ನಾರಾಯಣನ ಆಲಯವಿದ್ದು, 53.16 ಎಕರೆಯಷ್ಟು ವಿಸ್ತಾರ ಹೊಂದಿದೆ. ತಾಲ್ಲೂಕಿನ ಅತ್ಯಂತ ದೊಡ್ಡ ಕೆರೆ ಎಂಬ ಖ್ಯಾತಿ ಹೊಂದಿದೆ.

ಕಿತ್ತೂರು ಅರಸರ ಕಾಲದಲ್ಲಿ ಕೆರೆಯನ್ನು ಪುನಶ್ಚೇತನಗೊಳಿಸಿ ಕೆರೆಯ ದಂಡೆಯಲ್ಲಿ ಕಲ್ಲುಗಳನ್ನು ಅಳವಡಿಸ ಲಾಗಿದ್ದು, ಇಟಗಿ ಸೇರಿದಂತೆ ಕಿತ್ತೂರು ತಾಲ್ಲೂಕಿನ ಮಾರ್ಗನಕೊಪ್ಪ, ಕ್ಯಾರ ಕೊಪ್ಪ, ಖಾನಾಪುರ ತಾಲ್ಲೂಕಿನ ಬೋಗೂರು, ಬೇಡರಹಟ್ಟಿ, ಕಳಸನಟ್ಟಿ, ಕರವಿನಕೊಪ್ಪ ಮತ್ತು ತೋಲಗಿ       ಗ್ರಾಮಗಳಿಗೆ ಕೆರೆ ಪ್ರಮುಖ     ಜಲಮೂಲ ವಾಗಿತ್ತು. ಆದರೆ ಈಗ ಹನಿ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ.

ಕೆರೆ ದುರಸ್ತಿ ಮಾಡುವಂತೆ ಗ್ರಾಮ ಪಂಚಾಯ್ತಿಯ ಸದಸ್ಯರು  ಸಣ್ಣ ನೀರಾ ವರಿ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೆರೆಗೆ ನೀರು ಹರಿಸುವ ಕಾಲುವೆಗಳು  ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಇದರಿಂದ 10 ವರ್ಷಗಳ ಅವಧಿಯಲ್ಲಿ ಕೆರೆಯಲ್ಲಿ ಕ್ರಮೇಣ ನೀರಿನ ಸಂಗ್ರಹ ಕುಂಠಿತ ಗೊಳ್ಳುತ್ತಾ ಸಾಗಿದೆ. ಈ ವರ್ಷವಂತೂ ಕೆರೆಯಲ್ಲಿ ನೀರು ಶೇಖರಣೆಯಲ್ಲದೇ ಭಣಗುಟ್ಟುತ್ತಿದೆ.

‘ಗ್ರಾಮದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರು ಕೆರೆ ಅಭಿವೃದ್ಧಿಯ ವಿಷಯ ಬಂದಾಗಲೆಲ್ಲ ರಾಜಕೀಯ ಹಿತಾಸಕ್ತಿ  ಅಡ್ಡ ತರುತ್ತಿದ್ದಾರೆ. ಇಲ್ಲಿಯವರೆಗೆ ಇಟಗಿ ವ್ಯಾಪ್ತಿಯ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳನ್ನು ಪ್ರತಿನಿಧಿಸಿದ ಜನಪ್ರತಿನಿಧಿಗಳು ಕೆರೆಯ ಪುನಶ್ಚೇತನದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. 

ಇಟಗಿ ಗ್ರಾಮದಿಂದ ಎರಡೇ ಕಿ.ಮೀ. ದೂರದಲ್ಲಿ ಹರಿಯುವ ಮಲಪ್ರಭಾ ನದಿಯಿಂದ ಕೆರೆಗೆ ನೀರು ಹರಿಸುವ ಯೋಜನೆ ಕೈಗೆತ್ತಿಕೊಳ್ಳಬೇಕು’ ಎಂಬುದು ಗ್ರಾಮದ ನಾಗರಿಕರ ಬೇಡಿಕೆ.

‘ನಿರ್ಲಕ್ಷ್ಯದಿಂದಾಗಿ ಗ್ರಾಮದ ನೀರಿನ ಪ್ರಮುಖ ಮೂಲ ನೆಲೆ ಕಳೆದು ಕೊಳ್ಳುತ್ತಿದೆ. ಆದ್ದರಿಂದ ಈಗಲೇ ಎಚ್ಚೆತ್ತು ಕ್ರಮಕೈಗೊಳ್ಳಬೇಕು’ ಎಂದು  ಇಟಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೋಗೂರು ಗ್ರಾಮಸ್ಥ ಸುಂದರ ಕುಲಕರ್ಣಿ ಹೇಳುತ್ತಾರೆ.
****
ನಿಯೋಗ ಕರೆದೊಯ್ಯಲು ಸಿದ್ಧತೆ
ಗ್ರಾಮದ ದೊಡ್ಡ ಕೆರೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಗ್ರಾಮ ಪಂಚಾಯ್ತಿಯ ಹಿಂದಿನ ಸಭೆಗಳಲ್ಲಿ ಅನೇಕ ಬಾರಿ ಚರ್ಚೆಯಾಗಿದೆ. ಸಾರ್ವಜನಿಕ ರಿಂದಲೂ ಬೇಡಿಕೆ ವ್ಯಕ್ತವಾಗಿದೆ. ಈ ಕುರಿತು ಕ್ರಮಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. 

ಗ್ರಾಮಕ್ಕೆ ಇತ್ತೀಚಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ಕೆರೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಕೋರಲು ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ ಅವರ ಬಳಿ ಗ್ರಾಮ ಪಂಚಾಯ್ತಿ ಸದಸ್ಯರ ನಿಯೋಗ ಕರೆದುಕೊಂಡು ಹೋಗಲಾಗುತ್ತಿದೆ. ಇತ್ತೀಚಿಗೆ ನಡೆದ ಗ್ರಾ.ಪಂ. ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ.
–ಗುರುರಾಜ ಚರಕಿ ಪಿಡಿಒ ಗ್ರಾಮ ಪಂಚಾಯ್ತಿ ಇಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.