ADVERTISEMENT

ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ: ಹುರಕಡ್ಲಿ

ಚೇತನ್‌, ಅದಿತಿ ಆದರ್ಶ ವಿದ್ಯಾರ್ಥಿ, ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 10:10 IST
Last Updated 4 ಏಪ್ರಿಲ್ 2018, 10:10 IST

ಬೆಳಗಾವಿ: ‘ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿ ಘಟಕದ ನಿರ್ದೇಶಕ ಎಸ್‌.ಎಂ. ಹುರಕಡ್ಲಿ ತಿಳಿಸಿದರು.ಇಲ್ಲಿನ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ 2017–18ನೇ ಸಾಲಿನ ಕ್ರೀಡಾ ಮತ್ತು ವಿವಿಧ ಸಂಘಗಳ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿದರು.‘ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸದೃಢರಾಗಬಹುದು. ಶ್ರದ್ಧೆ, ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ದೊರೆಯುತ್ತದೆ’ ಎಂದರು.

‘ಭೂಮಿಯನ್ನು ದೇವರೆಂದು ತಿಳಿಯಬೇಕು. ಉಪಯೋಗದೊಂದಿಗೆ ಸಂರಕ್ಷಣೆಯನ್ನೂ ಮಾಡಬೇಕು’ ಎಂದರು. ಅಧ್ಯಕ್ಷತೆ ವಹಿಸಿದ್ದ ರಾಜಾ ಲಖಮಗೌಡ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಲ್‌.ವಿ. ದೇಸಾಯಿ, ‘ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು. ಹೊಸ ಆವಿಷ್ಕಾರಗಳಿಗೆ ಆದ್ಯತೆ ಕೊಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ತಿಳಿದುಕೊಂಡು, ಕಾಪಾಡಬೇಕು’ ಎಂದರು. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಗಿರೀಶ ಕತ್ತಿಶೆಟ್ಟಿ, ವಿಜಯಕುಮಾರ ಪಾಟೀಲ, ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್‌ ನಿರ್ದೇಶಕಿ ರತ್ನಪ್ರಭಾ ಬೆಲ್ಲದ ಮತ್ತು ಪ್ರೊ.ಯು.ಆರ್. ರಜಪೂತ ಅವರನ್ನು ಘಟಿಕೋತ್ಸವಕ್ಕೆ ಪ್ರಾಯೋಜಕತ್ವ ನೀಡಿದಕ್ಕಾಗಿ ಸನ್ಮಾನಿಸಲಾಯಿತು.

2017–18ನೇ ಸಾಲಿನ ಆದರ್ಶ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯಾಗಿ ಆಯ್ಕೆಯಾದ ಎಲ್. ಚೇತನ್‌ ಹಾಗೂ ಅದಿತಿ ಹೆಬ್ಬಾರ ಅವರಿಗೆ ಬಹುಮಾನ ನೀಡಲಾಯಿತು. ‘ರಾಜವಾಣಿ’ 3ನೇ ಆವೃತ್ತಿ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಪ್ರತಿಮಾ ಹಾಗೂ ತಂಡದವರು ಪ್ರಾರ್ಥಿಸಿದರು. ಪ್ರಾಚಾರ್ಯ ವಿ.ಡಿ. ಯಳಮಲಿ ಸ್ವಾಗತಿಸಿದರು. ಪ್ರೊ.ಯು.ಆರ್. ರಜಪೂತ ಪರಿಚಯಿಸಿದರು. ಪ್ರೊ.ಎ.ಆರ್. ತಾರದಾಳೆ ಕ್ರೀಡಾ ವರದಿ, ಆರ್.ಎಸ್. ಹಿರೇಮಠ ಸಂಘ ಮತ್ತು ವಿದ್ಯಾರ್ಥಿ ಚಟುವಟಿಕೆಗಳ ವರದಿ ಮಂಡಿಸಿದರು. ಪ್ರೊ.ಸಜ್ಜಲ ಹಾಗೂ ಸಮೃದ್ಧಿ ನಿರೂಪಿಸಿದರು. ಅದಿತಿ ಹೆಬ್ಬಾರ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.