ADVERTISEMENT

ಪವಾಡ ಬಯಲು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 10:40 IST
Last Updated 20 ಜನವರಿ 2011, 10:40 IST

ಆಲಮೇಲ: ವಾಮಾಚಾರ- ಭೂತಪ್ರೇತ ಎಂಬುದು ಕಪೋಲ ಕಲ್ಪಿತ, ಇಂತಹ ಕೆಟ್ಟ ನಂಬಿಕೆಗಳನ್ನು ಬೇರು ಸಹಿತ ಕಿತ್ತು ಹಾಕಬೇಕಾದ್ದು ಜನರ ಆದ್ಯಕರ್ತವ್ಯ ಎಂದು ಪವಾಡ ಭಂಜಕ ಹುಲಿಕಲ್ ನಟರಾಜ್ ಹೇಳಿದರು.

ಆಲಮೇಲದಲ್ಲಿ ಭಾನುವಾರ ರಾತ್ರಿ ನಡೆದ ಪವಾಡ ಬಯಲು ರಹಸ್ಯ ಕಾರ್ಯಕ್ರಮದಲ್ಲಿ, ಪವಾಡಗಳು ಎಂದು ನಂಬಲಾಗಿರುವ ಹಲವಾರು ಚಮತ್ಕಾರಗಳ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಇಂದು ಇನ್ನೂ ಕಂದಾಚಾರ, ಮೂಢನಂಬಿಕೆ, ವಾಮಾಚಾರಗಳನ್ನು ನಡೆಸುವ ಜನರಿದ್ದಾರೆ. ಇಲ್ಲಿ ವೈಚಾರಿಕತೆ ಪ್ರಜ್ಞೆ ಬೆಳೆಸುವ ಉದ್ದೇಶದಿಂದ ವೈಚಾರಿಕ ಯಾತ್ರೆ ಮಾಡುವ ಹಂಬಲ ತಮಗಿದೆ ಎಂದರು.

ಇದೇ ಸಂದರ್ಭದಲ್ಲಿ ಕುದಿಯುವ ಎಣ್ಣೆಯ ಬಾಣಲೆಗೆ ಕೈ ಹಾಕುವುದು, ಹಲವಾರು ವಸ್ತುಗಳನ್ನು ಸೃಷ್ಟಿಸುವುದು, ಬೂದಿ ಕೂಡುವುದು, ರಾತ್ರಿ ಹೊತ್ತು ಕೊಳ್ಳಿದೆವ್ವ ಕಾಣಿಸಿಕೊಳ್ಳುವದು ಮುಂತಾದ ಹತ್ತಾರು ಪ್ರದರ್ಶನಗಳನ್ನು ಮೂರು ಗಂಟೆಗಳ ಕಾಲ ನೀಡಿದರು. ಇವುಗಳನ್ನು ಮಾಡುವ ಬಗೆಯನ್ನು ಎಳೆಎಳೆಯಾಗಿ ತಿಳಿಸಿಕೊಟ್ಟರು.
ಜೀವಂತ ಸಮಾಧಿಗಾಗಿ ತೋಡಲಾಗಿದ್ದ ತಗ್ಗಿನಲ್ಲಿ ನೀರು ತುಂಬಿಕೊಂಡಿದ್ದರಿಂದ ಆ ಕಾರ್ಯಕ್ರಮವನ್ನು ರದ್ದುಪಡಿಸಲಾಯಿತು.

ಸನ್ಮಾನ: ನೂತನ ಜಿಪಂ ಸದಸ್ಯ ಮಲ್ಲಪ್ಪ ತೋಡಕರ್, ತಾಪಂ ಸದಸ್ಯರಾದ ಸುಮಿತ್ರಾ ಮಾರ್ಸನಳ್ಳಿ, ಸುನೀತಾ ಮೇಲಿನಮನಿ ಅವರನ್ನು ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಸತ್ಕರಿಸಿದರು.

ಶಾಸಕ ರಮೇಶ ಭೂಸನೂರ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಡಾ.ಸಂದೀಪ ಪಾಟೀಲ ವಹಿಸಿದ್ದರು. ವೇದಿಕೆಯಲ್ಲಿ ಆಲಮೇಲ್ ಅರ್ಬನ್ ಕೋ-ಆಪ್ ಬ್ಯಾಂಕಿನ ಅಧ್ಯಕ್ಷ ಬಸವರಾಜ ಧನಶ್ರೀ, ಗ್ರಾ.ಪಂ.ಉಪಾಧ್ಯಕ್ಷ ಸಾಧಿಕ್ ಸುಂಬಡ, ಪ್ರಾ.ಎಸ್.ಎಸ್. ಧನಶೆಟ್ಟಿ, ರಮೇಶ ಭಂಟನೂರ ಮುಂತಾದವರು ಭಾಗವಹಿಸಿದ್ದರು.
ಸಾವಿರಾರು ಜನರು ಮಧ್ಯರಾತ್ರಿವರೆಗೂ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಿದರು. ಸಿದ್ದರಾಮ ಉಪ್ಪಿನ ಸ್ವಾಗತಿಸಿದರು. ಬಾಬು ಸಾಸಾಬಾಳ ವಂದಿಸಿದರು. ಶಿವು ಗುಂದಗಿ, ಶ್ರೀಶೈಲ ಮಠಪತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.