ADVERTISEMENT

ಪಾಕ್‌ ಹಾಡಿಗೆ ಪಾಲಿಕೆ ಸದಸ್ಯರ ನೃತ್ಯ– ಆರೋಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 7:28 IST
Last Updated 3 ಡಿಸೆಂಬರ್ 2017, 7:28 IST

ಬೆಳಗಾವಿ: ‘ಈದ್‌ ಮಿಲಾದ್‌ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ, ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರು ಪಾಕಿಸ್ತಾನದ ಸೇನೆಯನ್ನು ಹೊಗಳುವ ಹಾಡೊಂದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು’ ಎಂದು ಬಿಜೆಪಿಯ ಬೆಳಗಾವಿ ಮಹಾನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟೋಪಣ್ಣವರ ಆಗ್ರಹಿಸಿದರು.

‘ಪಾಲಿಕೆಯ ಸದಸ್ಯರಾದ ಮತೀನ್‌ಶೇಖ್ ಅಲಿ, ಬಂದೆನವಾಜ್ ಬಾಳೆಕುಂದ್ರಿ ಹಾಗೂ ಮುಖಂಡ ಅಜೀಂ ಪಟವೆಗಾರ ಅವರು ಪಾಕಿಸ್ತಾನ ಸೈನ್ಯವನ್ನು ಪ್ರಶಂಸಿಸುವ ಹಾಡಿಗೆ ನೃತ್ಯ ಮಾಡುವ ದೃಶ್ಯಾವಳಿಗಳು ನಮಗೆ ಲಭ್ಯವಾಗಿವೆ. ಕಳೆದ ವರ್ಷವೂ ಅವರು ಇಂಥದೇ ಹಾಡಿಗೆ ಕುಣಿದಿದ್ದರು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಇವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು. ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಶಾಸಕ ಸಂಜಯ ಪಾಟೀಲ ವಿರುದ್ಧ ಸ್ವಯಂ ಪೇರಿತ ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು, ಇವರ ವಿರುದ್ಧ ಏಕೆ ದಾಖಲಿಸಬಾರದು’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.