ADVERTISEMENT

ಪಾಳು ಬಾವಿಗೆ ಜೀವ ತುಂಬಿದ ಸ್ಥಳೀಯರು

ಪಹರೆ ವೇದಿಕೆ, ಜೇನುಗೂಡು ವಾಟ್ಸ್‌ಆ್ಯಪ್ ತಂಡ, ಅವರ್ಸಾದ ಮಾತೃಭೂಮಿ ಸಂಸ್ಥೆ, ಲಯನ್ಸ್ ಸಂಸ್ಥೆ ನೇತೃತ್ವ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 9:11 IST
Last Updated 3 ಏಪ್ರಿಲ್ 2018, 9:11 IST

ಅಂಕೋಲಾ: 15 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಇಲ್ಲಿನ ಬಾವಿಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಾಬೀತಕೇಣಿಯ ಸಾರ್ವಜನಿಕ ಬಾವಿ ದುರಸ್ತಿ ಇಲ್ಲದೇ ಪಾಳು ಬಿದ್ದಿತ್ತು. ಹೀಗಾಗಿ ಅದರ ಸುತ್ತಲೂ ಕುರುಚಲು ಗಿಡಗಳು ಬೆಳೆದಿದ್ದವು. ಅದನ್ನು ಅನೇಕ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳೀಯರು ಒಟ್ಟಾಗಿ ಸೇರಿ ಭಾನುವಾರ ಸ್ವಚ್ಛಗೊಳಿಸುವ ಮೂಲಕ ಪರಿಸರ ಜಾಗೃತಿ ಮೆರೆದರು.ಪಹರೆ ವೇದಿಕೆಯ ನಾಗರಾಜ ನಾಯಕ ಈ ಸ್ವಚ್ಛತಾ ಕಾರ್ಯದ ನೇತೃತ್ವ ವಹಿಸಿಕೊಂಡು, ಜೇನುಗೂಡು ವಾಟ್ಸ್‌ಆ್ಯಪ್ ತಂಡ, ಅವರ್ಸಾದ ಮಾತೃಭೂಮಿ ಸಂಸ್ಥೆ, ಲಯನ್ಸ್ ಹಾಗೂ ರೋಟರಿ ಸಂಸ್ಥೆ, ಗ್ರಾಮಸ್ಥರು ಪಾಳು ಬಿದ್ದಿದ್ದ ಬಾವಿಯನ್ನು ಹಾಗೂ ಸುತ್ತಮುತ್ತಲು ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಸ್ವಚ್ಛಗೊಳಿಸಿದರು.

400 ಮನೆಗಳಿಗೆ ಕುಡಿಯುವ ನೀರು: ಅರಬ್ಬಿ ಸಮುದ್ರ ಮತ್ತು ಕೇಣಿ ಹಳ್ಳದ ಸಂಗಮ ಸ್ಥಳದಿಂದ ಕೇವಲ 100 ಅಡಿ ದೂರದಲ್ಲಿರುವ ಈ ಬಾವಿಯಲ್ಲಿ ಸಿಹಿ ನೀರು ಬರುತ್ತಿತ್ತು. ಅಂದಿನ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಭಾವಿಕೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಪ್ಪಣ್ಣ ಕಾಂಬಳೆ ಮುತುವರ್ಜಿಯಲ್ಲಿ ಕಿರು ನೀರು ಸರಬರಾಜು ಯೋಜನೆಯಡಿ ಈ ಬಾವಿಯ ಕಾಮಗಾರಿ ಕಾರ್ಯಗತಗೊಂಡಿತ್ತು. ₹ 7 ಲಕ್ಷ ಅನುದಾನದಲ್ಲಿ ಒಂದು ವಿಸ್ತಾರವಾದ 20 ಅಡಿ ಸುತ್ತಳತೆಯ ಬಾವಿ, 400 ಮನೆಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ನೀರಿನ ಟ್ಯಾಂಕ್‌ಗಳು ನಿರ್ಮಾಣಗೊಂಡಿತ್ತು. ಕೇವಲ 2 ವರ್ಷದವರೆಗೆ ಬಳಕೆಗೆ ಬಂದ ಬಳಿಕ ಇದು ನನೆಗುದಿಗೆ ಬಿದ್ದಿತ್ತು. ಕುರುಚಲು ಗಿಡಗಳು ಬೆಳೆದು ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜೇನುಗೂಡು ವಾಟ್ಸ್‌ಆ್ಯಪ್ ತಂಡದ ವಿಶಾಲ ಬಂಟ್, ಪ್ರಮುಖರಾದ ರಾಮಚಂದ್ರ ನಾಯ್ಕ, ಅರುಣ ಶೇಣ್ವಿ, ಶಾರದಾ ನಾಯ್ಕ, ಬಾಸ್ಕರ ನಾರ್ವೇಕರ, ಕೃಷ್ಣ ಬಾನಾವಾಳಿಕರ, ಸೋನಂ ಅರುಂದೇಕರ ಇದ್ದರು.

ADVERTISEMENT

**

ಗಾಬೀತಕೇಣಿಯ ಬಾವಿ ಗ್ರಾಮಕ್ಕೆ ನೀರುಣಿಸುತ್ತಿರುವ ದೇವತೆಯಂತಿತ್ತು. ಆದರೆ ಕೆಲವರ ನಿರ್ಲಕ್ಷದಿಂದ ಅದು ನಿರ್ವಹಣೆ ಇಲ್ಲದಂತಾಗಿ ಪಾಳು ಬಿದ್ದಿತ್ತು. ಎಲ್ಲರ ಸಹಕಾರದಿಂದ ಈಗ ಪುನರ್‌ ಬಳಗೆಕೆ ಸಿದ್ಧಗೊಂಡಿದೆ – ನಾಗರಾಜ ನಾಯಕ, ಪಹರೆ ವೇದಿಕೆ ಅಧ್ಯಕ್ಷ.

**

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಕಿರು ನೀರು ಸರಬರಾಜು ಯೋಜನೆ ಹಳ್ಳ ಹಿಡಿದಿದೆ. ಇದು ಸರಿಯಾಗಿ ನಿರ್ವಹಣೆಯಾದರೆ ಪಟ್ಟಣಕ್ಕೆ ಬೇರೆ ಕುಡಿಯುವ ನೀರಿನ ಯೋಜನೆ ಅಗತ್ಯವಿಲ್ಲ – ಅಪ್ಪಣ್ಣ ಕಾಂಬಳೆ, ಬಾವಿಕೇರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.