ADVERTISEMENT

ಪಿಡಿಒಗಳಿಗೆ ರಕ್ಷಣೆ; ಮನವಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 7:35 IST
Last Updated 10 ಏಪ್ರಿಲ್ 2012, 7:35 IST

ರಾಯಬಾಗ:  ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಆತ್ಮಹತ್ಯೆ ಘಟನೆಗಳು ಹೆಚ್ಚಾಗುತ್ತಿದ್ದು ಆ ನಿಟ್ಟಿನಲ್ಲಿ ಅದನ್ನು ತಡೆಯುವಂತೆ ಆಗ್ರಹಿಸಿ ಸೋಮವಾರ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ  ಇಲ್ಲಿ ಮನವಿ ಸಲ್ಲಿಸಲಾಯಿತು.

 ಪಿಡಿಒ ಹುದ್ದೆ ನಿರ್ವಹಿಸುವುದರಲ್ಲಿ ಹಲವು ಸಮಸ್ಯೆಗಳನ್ನು ಎದುರಿ ಸುತ್ತಿರುವ ಅಧಿಕಾರಿಗಳಿಗೆ ಯಾವುದೇ ರೀತಿ ರಕ್ಷಣೆ ಇಲ್ಲದಾಗಿದೆ.  ರಾಜ್ಯದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು,  ದೌರ್ಜನ್ಯ, ಹಲ್ಲೆ, ಒತ್ತಡ, ಶೋಷಣೆಗಳ ಬಗ್ಗೆ ಮೇಲಾಧಿಕಾರಿಗಳು ಸಚಿವರು ಹಾಗೂ ಸರ್ಕಾರದ ಗಮನಕ್ಕೆ ನೇರವಾಗಿ ತಂದಿದ್ದರೂ ಸಹ ಇದುವರೆಗೆ ಸರ್ಕಾರ ಯಾವುದೇ ಕ್ರಮ ಕೈ ಕೊಂಡಿಲ್ಲ  ಎಂದು ಮನವಿಯಲ್ಲಿ ದೂರಲಾಗಿದೆ. 

ಇತ್ತೀಚಿಗೆ ಇಂಡಿ ತಾಲ್ಲೂಕಿನ ಆವರಕೇಡ  ಗ್ರಾ.ಪಂ.ನಲ್ಲಿ    ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅರುಣ ಕುಮಾರ ಗಲಗಲಿ ಅವರ ಆತ್ಮಹತ್ಯೆ ಖಂಡಿಸಿ, ಈ ಘಟನೆ ಗೆ ಕಾರಣ ರಾದವರನ್ನು  ಜಾಮೀನು ರಹಿತವಾಗಿ ಬಂಧಿಸಿ ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಿ ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ಆಗ್ರಹಿಸಿ ಪಟ್ಟಣದಲ್ಲಿ  ರಾಜ್ಯ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕಾ ಘಟಕದ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.

ಇಲ್ಲಿಯವರೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಹೂಡಿರುವ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದು ಪಡಿಸುವಂತೆ ಸಹ ಆಗ್ರಹಿಸಿ, ಈ ರೀತಿ ಘಟನೆ ಘಟನೆ ಭವಿಷ್ಯದಲ್ಲಿ ಸಂಭವಿಸದಂತೆ   ಸರ್ಕಾರ ರಕ್ಷಣೆ ನೀಡಬೇಕು. ಅಲ್ಲದೇ ಸೂಕ್ತ  ನಿಯಮಾವಳಿ ರೂಪಿಸದಿದ್ದಲ್ಲಿ ರಾಜ್ಯದಾದ್ಯಂತ  ಗ್ರಾಮ ಪಂಚಾಯಿತಿ ಕಚೇರಿಗಳನ್ನು ಅನಿರ್ದಿಷ್ಟಾವಧಿವರೆಗೆ ಬಂದ್ ಮಾಡಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು  ಎಚ್ಚರಿಸಿದರು.
 
ರಾಜ್ಯ ಗ್ರಾಮಿಣ ಅಭಿವೃದ್ಧಿ  ಸಂಘದ ಅಧ್ಯಕ್ಷ ಉಮೇಶ ಪೋಳ, ಕಾರ್ಯದರ್ಶಿ ಬಿ.ಬಿ. ಮೊಖಾಶಿ, ಎ.ಡಿ. ಅನ್ಸಾರಿ, ಬಿ.ಎಸ್.ಕಾಂಬಳೆ, ಬಿ.ಜಿ. ಚಿವಟಗಿ, ಎಸ್.ಡಿ. ಅವಟೆ, ಕೆ.ಎಸ್.ಕಾಂಬಳೆ, ಬಿ.ಎಸ್.ನಾಗನೂರ ಆರ್.ಡಿ. ಪರಮೇಶ್ವರ,  ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಐ.ಆರ್. ನದಾಫ್, ಎನ್. ಜಿ. ಕಮ್ಮಾರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.