ADVERTISEMENT

ಪೊಲೀಸರ ಮೇಲೆ ಹೆಚ್ಚಿನ ಜವಾಬ್ದಾರಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 11:20 IST
Last Updated 22 ಅಕ್ಟೋಬರ್ 2011, 11:20 IST

ಬೆಳಗಾವಿ: ಪೊಲೀಸ್ ಹಾಗೂ ಸೇನಾ ವೃತ್ತಿ ರಾಷ್ಟ್ರಕ್ಕಾಗಿ ಸಮರ್ಪಣೆ, ತ್ಯಾಗ ಹಾಗೂ ಬಲಿದಾನ ಮಾಡುವಂತಹ ಗೌರವಯುತ ವೃತ್ತಿಗಳಾಗಿವೆ ಎಂದು ನಿವೃತ್ತ ಮೇಜರ್ ಜನರಲ್ ಎಸ್. ಎಸ್.ಗೌಡರ ಹೇಳಿದರು.

ನಗರದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆಯ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

`ಸೇನಾ ಸಿಬ್ಬಂದಿ ದೇಶವನ್ನು ಬಾಹ್ಯ ಆಕ್ರಮಣದಿಂದ ರಕ್ಷಿಸುವ ಜವಾಬ್ದಾರಿ ಹೊಂದಿದ್ದರೆ, ಪೊಲೀಸ್ ಸಿಬ್ಬಂದಿ ದೇಶದ ಆಂತರಿಕ ಭದ್ರತೆಯ ಗುರುತರ ಜವಾಬ್ದಾರಿ ಹೊಂದಿರುತ್ತಾರೆ. ಈ ಎರಡೂ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ತ್ಯಾಗ, ಬಲಿದಾನ ಮಾಡಿದವರನ್ನು ಎಂದಿಗೂ ಮರೆಯಲಾಗದು~ ಎಂದು ಅವರು ಹೇಳಿದರು.

`ದೇಶದ ಪ್ರತಿಯೊಬ್ಬ ನಾಗರಿಕರ, ಕುಟುಂಬಗಳ ಸ್ವಾತಂತ್ರ್ಯ ರಕ್ಷಣೆಗೆ ತಮ್ಮ ಜೀವವನ್ನು ಮುಡುಪಾಗಿಟ್ಟು ಹೋರಾಟ ನಡೆಸುತ್ತಾರೆ. ಇವರ ತ್ಯಾಗ, ಸದಾ ಸ್ಮರಣೀಯವಾಗಿದೆ~ ಎಂದು ಅವರು ಅಭಿಪ್ರಾಯಪಟ್ಟರು.

`ಈಗ ಭಯೋತ್ಪಾದನೆ, ನಕ್ಸಲ್, ಪೂರ್ವೋತ್ತರ ಭಾಗಗಳಿಂದ ಸಮಾಜಘಾತುಕ ಶಕ್ತಿಗಳ ಒಳ ನುಸುಳುವಿಕೆಯಂತಹ ಸಮಸ್ಯೆಗಳನ್ನು ಎದುರಿಸಲು ಸನ್ನದ್ಧವಾಗಬೇಕಾಗಿದೆ. ಆಂತರಿಕ ರಕ್ಷಣಾ ಜವಾಬ್ದಾರಿಯನ್ನು ಹೊರಬೇಕು~ ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ್ ಪಾಟೀಲ  ಮಾತನಾಡಿ, ಪೊಲೀಸ್‌ರು ಶೌರ್ಯ, ಧೈರ್ಯ ಹಾಗೂ ಸಾಹಸದಿಂದ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತ ವೀರ ಮರಣ ಹೊಂದಿದ್ದಾರೆ. ಅಂತಹವರನ್ನು ನೆನೆಸುವುದು ಸಮಾಜದ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಪಿ.ಎಸ್. ಸಂಧು ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಗಣ್ಯ ನಾಗರಿಕರು ಪೊಲೀಸ್  ಹುತಾತ್ಮರ ಸ್ಮಾರಕಕ್ಕೆ ಪುಷ್ಪವಿಟ್ಟು ಗೌರವ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಆಕಾಶದತ್ತ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಹುತಾತ್ಮರಾದ ಪೊಲೀಸರಿಗೆ ಗೌರವ ಸಲ್ಲಿಸಲಾುತು. ಎರಡು ನಿಮಿಷ ಮೌನ ಆಚರಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.