ಚನ್ನಮ್ಮನ ಕಿತ್ತೂರು: 18 ಅಥವಾ 19ನೇ ಶತಮಾನದ್ದು ಎನ್ನಲಾದ ಪುರಾತನ ಬದು (ಹಾಳೆ) ಸವರುವ ದೊಡ್ಡ ಆಕಾರದ ಎರಡು ಕುಡುಗೋಲುಗಳನ್ನು ಸಮೀಪದ ಡೊಂಬರಕೊಪ್ಪದ ಸಿದ್ದಲಿಂಗಪ್ಪ ಕಲ್ಲೇದ ಅವರು ಇಲ್ಲಿಯ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
4.5 ಕೆ.ಜಿ ತೂಕದ ಒಂದು ಕುಡಗೋಲು ಸುಮಾರು 5 ಅಡಿ ಉದ್ದವಿದೆ. ಅದರ ಹಿಡಿಕೆಯೇ 7 ಅಂಗುಲದಷ್ಟು ದೊಡ್ಡದಿದೆ. ಮತ್ತೊಂದು ಕುಡುಗೋಲು 3 ಕೆ.ಜಿಯಷ್ಟಿದ್ದು ಸುಮಾರು 3.5 ಅಡಿ ಉದ್ದವಿದೆ. ಇದರ ಹಿಡಿಕೆ 6 ಅಂಗುಲದಷ್ಟಿದೆ. ‘ಹೊಲದ ಹಾಳೆ ಸವರಲು, ಮಣ್ಣು ಸಮ ಮಾಡಲು ಹಿಂದೆ ಏನು ಉಪಕರಣ ಬಳಸುತ್ತಿದ್ದರು ಎಂಬುದಕ್ಕೆ ಈ ಬದು ಸವರುವ ಕುಡುಗೋಲು ನಿದರ್ಶನವಾಗಿದೆ’ ಎಂದು ಪುರಾತತ್ವ ಇಲಾಖೆ ಸಹಾಯಕ ಕ್ಯೂರೇಟರ್ ಎನ್. ರಾಘವೇಂದ್ರ ತಿಳಿಸಿದರು.
‘ಇವುಗಳನ್ನು ಅಂದಗೊಳಿಸಿ ಒಂದು ಫ್ರೇಮ್ ಹಾಕಿಸಿ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು’ ಎಂದು ಅವರು ಹೇಳಿದರು. ಕಿತ್ತೂರು ಅಥವಾ ಸುತ್ತಮುತ್ತಲಿನ ಊರುಗಳಲ್ಲಿ ಇಂತಹ ವಿಶೇಷ ವಸ್ತುಗಳೇನಾದರೂ ಸಿಕ್ಕರೆ ಅಥವಾ ಮನೆಯಲ್ಲಿದ್ದರೆ ಅವುಗಳನ್ನು ವಸ್ತು ಸಂಗ್ರಹಾಲಯಕ್ಕೆ ನೀಡುವಂತೆಯೂ ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.