ADVERTISEMENT

ಪ್ರಾದೇಶಿಕ ಪಕ್ಷಗಳಿಂದ ಸಾಮಾಜಿಕ ನ್ಯಾಯ

ಜೆಡಿಎಸ್‌ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಓವೈಸಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 9 ಮೇ 2018, 8:05 IST
Last Updated 9 ಮೇ 2018, 8:05 IST

ಬೆಳಗಾವಿ: ‘ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ. ಹಕ್ಕುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಪರ್ಯಾಯ ಶಕ್ತಿಗಳನ್ನು ಬೆಂಬಲಿಸಬೇಕು’ ಎಂದು ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್) ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದರು.

ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪರ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ಬಿಜೆಪಿ ಹಾಗೂ ಕಾಂಗ್ರೆಸ್‌ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿವೆ. ಹೀಗಾಗಿ, ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಬೆಂಬಲ ಕೊಡುತ್ತಿದ್ದೇವೆ. ಕುಮಾರಸ್ವಾಮಿ ಎಲ್ಲರ ಪ್ರಗತಿಗೆ ಬದ್ಧವಾಗಿದ್ದಾರೆ’ ಎಂದರು.

‘ನಾನು ಇಲ್ಲಿಗೆ ಬರುತ್ತಿದ್ದೇನೆ ಎನ್ನುವುದನ್ನು ಕಾಂಗ್ರೆಸ್‌ನವರು ಫೋಟೊ ಸಮೇತ ವಾಟ್ಸ್‌ಆ್ಯಪ್‌ ಮಾಡಿ ಜನ
ಪ್ರಿಯತೆ ಹೆಚ್ಚಿಸಿದ್ದಾರೆ. ಕಾಂಗ್ರೆಸ್‌ನವರೇ, ನನ್ನ ಬೆನ್ನಿಗೇಕೆ ಬಿದ್ದಿದೀರಿ? ನನಗೆ ಮದುವೆ ಆಗಿದೆ. ಮದುವೆ ಆಗಿಲ್ಲದವರ ಹಿಂದೆ ಬೀಳಿ. ನನಗೆ ಒಬ್ಬಳೇ ಪತ್ನಿ ಇದ್ದಾಳೆ. ಮಕ್ಕಳಿವೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಕಾಂಗ್ರೆಸ್‌ನಿಂದ ನ್ಯಾಯ ಸಿಗುತ್ತಿಲ್ಲ: ‘ನಾನು ಮತ ವಿಭಜನೆ ಮಾಡುವುದಕ್ಕೆ ಬರುತ್ತೇನೆ ಎಂದು ಕಾಂಗ್ರೆಸ್‌ನವರು ಪದೇ ಪದೇ ಹೇಳುತ್ತಾರೆ. 2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಎಷ್ಟು ಮಂದಿ ಮುಸ್ಲಿಮರನ್ನು ಗೆಲ್ಲಿಸಿದ್ದಾರೆ’ ಎಂದು ಪ್ರಶ್ನಿಸಿದರು.

‘ಜೆಡಿಎಸ್ ಅನ್ನು ‘ಬಿ’ ಟೀಮ್‌ ಎನ್ನುವುದನ್ನು ಬಿಡಿ. ಇದೇನು ಆಟವಲ್ಲ. ಮೋದಿ- ರಾಹುಲ್‌ ಎಸಿ ರೂಂನಲ್ಲಿ ಕೆಲ ನಿಮಿಷ ಕುಳಿತು ಚರ್ಚಿಸಿಕೊಂಡು ಮಾತನಾಡಲಿ’ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ವೈಫಲ್ಯ ಕಾರಣ: ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ವೈಫಲ್ಯಗಳೇ ಕಾರಣ. ಇಷ್ಟಾದರೂ ಆ ಪಕ್ಷಕ್ಕೆ ಬುದ್ಧಿ ಬಂದಿಲ್ಲ’ ಎಂದು ಛೇಡಿಸಿದರು.

‘ತ್ರಿವಳಿ ತಲಾಖ್‌ ಮಸೂದೆ ಸಂವಿಧಾನಕ್ಕೆ ವಿರುದ್ಧವಾದುದು. ಆದರೆ, ಲೋಕಸಭೆಯಲ್ಲಿ ಕಾಂಗ್ರೆಸ್‌ನವರು ವಿರೋಧಿಸಲಿಲ್ಲ, ಚರ್ಚಿಸಲೇ ಇಲ್ಲ. ನಮ್ಮ ಬದುಕು ಹಾಗೂ ಅಸ್ತಿತ್ವದ ಪ್ರಶ್ನೆಯ ವಿಷಯದಲ್ಲಿ ಬದ್ಧತೆ ತೋರ
ಲಿಲ್ಲ. ಇಂತಹ ಕಾಂಗ್ರೆಸ್‌ ಮತ ಹಾಕುತ್ತೀರಾ?’ ಎಂದು ಕೇಳಿದರು.

ಬೆಳಗಾವಿ ಮುಸ್ಲಿಂ ವೇದಿಕೆ ಮುಖಂಡ ಸಿ.ಕೆ.ಎಸ್‌. ನಜೀರ್‌, ‘ಉತ್ತರ ಕ್ಷೇತ್ರದಲ್ಲಿ ಜೆಡಿಎಸ್‌ ಬೆಂಬಲಿಸುತ್ತಿದ್ದೇವೆ. ಬೆಳಗಾವಿ ಉಳಿಸುವುದಕ್ಕಾಗಿ ಆರ್‌ಎಸ್‌ಎಸ್‌ನ ಮೋಹನ್‌ ಭಾಗವತ್‌ ಜೊತೆ ಚರ್ಚೆಗೂ ಸಿದ್ಧ’ ಎಂದರು.

ಗ್ರಾಮೀಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶಿವನಗೌಡ ಪಾಟೀಲ, ‘ಬಾಬ್ರಿ ಮಸೀದಿ ಕೆಡವಿದವರು ಕಾಂಗ್ರೆಸ್‌
ನವರು. ಕಾಶ್ಮೀರಿ ಪಂಡಿತರಿಂದ ಆದ ಕಾಂಗ್ರೆಸ್‌ ಮತ್ತು ನಾಗಪುರದವರಿಂದ ಬಂದ ಬಿಜೆಪಿ ಪಕ್ಷಗಳು ದೇಶ ಹಾಳು ಮಾಡುತ್ತಿವೆ. ಹೀಗಾಗಿ, ಪರ್ಯಾಯ ಶಕ್ತಿಗಳನ್ನು ಬೆಂಬಲಿಸಬೇಕು’ ಎಂದು ಕೋರಿದರು.

ಉತ್ತರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಅಶ್ಫಾಕ್‌ ಅಹಮದ್‌ ಮಡಕಿ, ಎಐಎಂಐಎಂ ರಾಜ್ಯ ಘಟಕದ ಅಧ್ಯಕ್ಷ ಉಸ್ಮಾನ್‌ ಘನಿ ಮಾತನಾಡಿದರು. ಮುಖಂಡರಾದ ಫುಜುಲ್ಲಾ ಮಾಡಿವಾಲೆ, ಲತೀಫ್‌ಖಾನ್‌ ಪಠಾಣ್‌, ಪ್ರಮೋದ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.