ADVERTISEMENT

ಪ್ರಾಮಾಣಿಕ ಸೇವೆ ಸಲ್ಲಿಸಲು ಶಿಕ್ಷಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 6:11 IST
Last Updated 4 ಜೂನ್ 2013, 6:11 IST

ಬೆಳಗಾವಿ: `ಶಿಕ್ಷಕರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಸದೃಢ ಸಮಾಜ ನಿರ್ಮಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಬೇಕು' ಎಂದು ಅಂಜುಮನ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್.ಐ.ತಿಮ್ಮಾಪುರ ಹೇಳಿದರು.

ಸಂಯುಕ್ತ ಜನತಾ ಆಂದೋಲನ, ಸರ್ವೋದಯ ಸೇವಾ ಸೊಸೈಟಿ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಗರ ಕೇಂದ್ರ ಗ್ರಂಥಾಲಯ ಇವರ ಆಶ್ರಯದಲ್ಲಿ ಇಲ್ಲಿನ ನಗರ ಕೇಂದ್ರ ಗ್ರಂಥಾಲಯದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಡಾ. ಶ್ರೀನಿವಾಸ ಎಲ್. ಕುಲಕರ್ಣಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಶಿಕ್ಷಕ ವೃತ್ತಿ ಸಮಾಜದಲ್ಲಿ ಪಾವಿತ್ರ್ಯತೆ ಹೊಂದಿದ ವೃತ್ತಿ. ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ಕೇವಲ ಸಂಬಳದ ಮಾನದಂಡಕ್ಕೆ ಒಳಗಾಗದೆ ನಿಸ್ವಾರ್ಥ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸುವಲ್ಲಿ ಪ್ರಯತ್ನಮೀರಿ ಶ್ರಮಿಸಬೇಕು' ಎಂದು ಸಲಹೆ ನೀಡಿದರು.

`ಡಾ. ಶ್ರೀನಿವಾಸ ಎಲ್. ಕುಲಕರ್ಣಿ ಅವರದ್ದು ನೇರ ನಡೆ, ನುಡಿಯುಳ್ಳ ವ್ಯಕ್ತಿತ್ವ. ಛಂದಸ್ಸು ಹಾಗೂ ವ್ಯಾಕರಣ ವಿಷಯಗಳ ಬಗೆಗೆ ಆಳವಾದ ಜ್ಞಾನವನ್ನು ಹೊಂದಿದ್ದ ಅವರು, ಇತರ ಶಿಕ್ಷಕರಿಗೂ ಮಾರ್ಗದರ್ಶಕರಾಗಿದ್ದರು. ವೃತ್ತಿ ಜೀವನದುದ್ದಕ್ಕೂ ನಿಸ್ವಾರ್ಥ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಎಲ್ಲರಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಅವರ ನಿವೃತ್ತಿ ಜೀವನವು ಸುಖಕರವಾಗಿರಲಿ' ಎಂದು ಶುಭ ಹಾರೈಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಆರ್. ಅನಂತನ್ ಅವರು ಮಾತನಾಡಿ, `ನಿವೃತ್ತಿ ಎಂಬುದು ವೃತ್ತಿಯಿಂದ ಮಾತ್ರವೇ ಹೊರತು ಪ್ರವೃತ್ತಿಯಿಂದಲ್ಲ. ನಿವೃತ್ತಿಯ ನಂತರವೂ ತಾವು ವಿವಿಧ ಕೃತಿಗಳು, ಲೇಖನಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ನೀಡಬೇಕು' ಎಂದು ತಿಳಿಸಿದರು.

`ಡಾ. ಶ್ರೀನಿವಾಸ ಎಲ್. ಕುಲಕರ್ಣಿ ಅವರು ಅವರು ಸರಳ ಸಜ್ಜನಿಕೆಯ ಮನುಷ್ಯ. ಹಾಸ್ಯಪ್ರಜ್ಞೆಯನ್ನು ಹೊಂದಿದ್ದ ಸ್ನೇಹಜೀವಿ. ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ವಿಶ್ವವಿದ್ಯಾಲಯಕ್ಕೆ ಅವರು ನೀಡಿದ ಸೇವೆ ಸ್ಮರಣೀಯ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಶ್ರೀನಿವಾಸ ಕುಲಕರ್ಣಿ, `ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕೆಲವೊಂದು ದೌರ್ಬಲ್ಯಗಳಿರುತ್ತವೆ. ಆದರೆ, ಸತತವಾಗಿ  ದೌರ್ಬಲ್ಯಗಳತ್ತ ಯೋಚಿಸದೇ ಧನಾತ್ಮಕ ಮೌಲ್ಯಗಳತ್ತ ಗಮನಹರಿಸಬೇಕು. ಯಾವುದೇ ಚಿಕ್ಕ ಕಾರ್ಯವಾದರೂ ಅದನ್ನು ಅಚ್ಚುಕಟ್ಟಾಗಿ ಮಾಡುವದರ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಬೇಕು' ಎಂದು ಹೇಳಿದರು.

ಡಾ. ಶ್ರೀನಿವಾಸ ಎಲ್. ಕುಲಕರ್ಣಿ ದಂಪತಿಯನ್ನು ಸನ್ಮಾನಿಸಲಾಯಿತು. ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಯುಕ್ತ ಜನತಾ ಆಂದೋಲನದ ಅಧ್ಯಕ್ಷ ಕಲ್ಯಾಣರಾವ್ ಮುಚಳಂಬಿ ಅಧ್ಯಕ್ಷತೆ ವಹಿಸಿದ್ದರು. ಡಾ. ಗುರುಪಾದ ಮರಿಗುದ್ದಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ, ಬಸವರಾಜ ಸಸಾಲಟ್ಟಿ, ನೀಲಗಂಗಾ ಚರಂತಿಮಠ, ಮಧುಕರ ಗುಂಡೇನಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.