ADVERTISEMENT

ಪ್ರೀತಿಯೇ ಧರ್ಮ, ದ್ವೇಷವೇ ಅಧರ್ಮ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 8:55 IST
Last Updated 8 ಫೆಬ್ರುವರಿ 2011, 8:55 IST

ಕುಡಚಿ (ರಾಯಬಾಗ): ‘ಪ್ರೀತಿಯೇ ಧರ್ಮ, ದ್ವೇಷವೇ ಅಧರ್ಮ. ಪ್ರೀತಿ ಬದುಕನ್ನು  ರೂಪಿಸುತ್ತದೆ. ಸಮಾನತೆ ಕಲ್ಪಿಸುತ್ತದೆ. ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಗಳು ಮನುಷ್ಯ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ’ ಎಂದು  ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಮಹಾಸ್ವಾಮಿಗಳು ನುಡಿದರು.ಇಲ್ಲಿನ ಸೇಡಜಿ ಆವರಣದಲ್ಲಿ ಏರ್ಪಡಿಸಿದ್ದ ಭಾರತೀಯ ಸಂಸ್ಕೃತಿ ಉತ್ಸವದ ಸಮಾರೋಪ ಸಮಾರಂಭದಲ್ಲಿ  ಅವರು ಆಶೀರ್ವಚನ ನೀಡಿದರು. ‘ಸತ್ಯ ಇದ್ದಲ್ಲಿ ದೇವರಿದ್ದಾನೆ. ಅಲ್ಲಿ ದೇವರನ್ನು ಶೋಧಿಸಬೇಕಿಲ್ಲ. ನಿರ್ಮಲ ಮನಸ್ಸು ಹಾಗೂ ನಿಸ್ವಾರ್ಥ ಸೇವೆ ವ್ಯಕ್ತಿಯ ಬದುಕನ್ನು ಸುಂದರಗೊಳಿಸುತ್ತದೆ’ ಎಂದು ಅವರು ನುಡಿದರು.

‘ಭಾರತ, ವಿಶ್ವದಲ್ಲೇ  ಶ್ರೇಷ್ಠವಾದ ರಾಷ್ಟ್ರ.ಕಾಣುವುದನ್ನೆಲ್ಲ ದೇವರೆಂದು ಭಾವಿಸಿದ್ದಾರೆ. ನೆಲ, ಜಲ ಹಾಗೂ  ಗ್ರಹಗಳಲ್ಲೂ ದೇವರನ್ನು ಕಾಣುತ್ತಿದ್ದೇವೆ. ಇದುವೇ ನಮ್ಮ ಸಂಸ್ಕೃತಿ’ ಎಂದು  ಶ್ರೀಗಳು ಹೇಳಿದರು.ಕೊಲ್ಲಾಪೂರ ಜೈನ ಮಠದ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಗಳು ಮಾತನಾಡಿ, ಅಹಿಂಸೆ, ಸತ್ಯ, ಬ್ರಹ್ಮಚರ್ಯದಿಂದ ಸಂಸ್ಕೃ ತಿಯನ್ನು ಪಾಲಿಸಬೇಕು ಎಂದು  ತಿಳಿಸಿದರು. ತಿಕೋಟಾದ ಚನ್ನಮಲ್ಲಿಕಾರ್ಜುನ ಸ್ವಾಮಿ, ಉಗಾರದ ಬಸವಲಿಂಗಸ್ವಾಮಿ, ಮೀರಜದ ಕೋಳೆಕರ ಮಠದ ವಿಜಯಾನಂದ ಸ್ವಾಮೀಜಿ ಮಾತನಾಡಿದರು.

ಗೋಕಾಕದ ಬಾವ ಸಂಗಮದ ಕಲಾವಿದರು ಜಾನಪದ ನೃ ತ್ಯ ಹಾಗೂ ಶಿರಗುಪ್ಪಿಯ ಪದ್ಮಶ್ರೀ ಚೌಗಲಾ ದೀಪದ ನೃತ್ಯ ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಎಸ್.ಬಿ. ಘಾಟಗೆ ನಿವೇಶನ ಒದಗಿಸಿದರೆ ಧರ್ಮಪೀಠ ನಿರ್ಮಾಣ ಮಾಡಲಾಗುವುದು ಎಂದರು.ಇಚಲಕರಂಜಿಯ ಭಕ್ತಿಯೋಗಾಶ್ರಮದ ಮಹೇಶಾನಮದ ಸ್ವಾಮಿಗಳ ನೇತೃತ್ವದಲ್ಲಿ ಒಂದು ತಿಂಗಳು ಕಾಲ ನಡೆದ ಪ್ರವಚನ ಹಾಗೂ  ಮೂರು ದಿನಗಳ ಕಾಲ ಜರುಗಿದ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಶ್ರಮವಹಿಸಿದವರನ್ನು ಸನ್ಮಾನಿಸಲಾಯಿತು.

ಶಾಸಕ ಎಸ್.ಬಿ.ಘಾಟಗೆ, ಕಾರ್ಯಕ್ರದಮ ಸ್ವಾಗತ ಸಮಿತಿ ಅಧ್ಯಕ್ಷ ರತ್ನಂಜ ಕದ್ದು, ಹಾಲಪ್ಪ ಘಾಳಿ, ಡಿ.ಎಸ್.ನಾಯ್ಕ, ಪಾರೀಸ ಉಗಾರೆ, ಬಾಬಾಜಾನ್ ಮಗದುಮ್, ಶ್ರೀಶೈಲ ದರೂರ, ಶ್ರೀಶೈಲ ಪಾಲಬಾವಿ, ಕುಮಾರ ಸನದಿ, ಎ.ಬಿ. ಪಾಟೀಲ, ಮಹಾದೇವ ಚವ್ಹಾಣ, ಜಯವೀರ ಹುಂಚಿಮಾರ, ಮಹೇಶ ಪಟ್ಟಣಶೆಟ್ಟಿ, ಗಜಾನನ ಕಾಗೆ, ಶಾಂತಾರಾಮ ಸಣ್ಣಕ್ಕಿ, ಡಾ.ಸಂಜೀವ ಕದ್ದು, ಸುಕುಮಾರ ಪಾಟೀಲ, ಈಶ್ವರ ಗಿಣಿಮೂಗೆ, ಎಲ್.ಎಸ್. ಚೌರಿ, ಇಕ್ಬಾಲ್ ಚಮ ನಶೇಖ, ರಿಯಾಜ್ ಜಿನಾಬಡೆ, ಸಾದಿಕ ಹುಸೇನಬಾಬು ಉಗಾರೆ, ಬಸವರಾಜ ಸನದಿ, ಸಾಹೇಬಲಾಲ ರೋಹಿಲೆ, ಸಿ.ಬಿ. ಚೌಗಲಾ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಎ. ಮಹಾಜನ, ಶಿವರಾಜ ಬುಸುಗೂಂಡೆ  ಉಪಸ್ಥಿತರಿದ್ದರು. ಉಗಾರ, ಐನಾಪುರ, ಪರಮಾನಂದವಾಡಿ, ಖೇಮಲಾಪುರ, ಸಿದ್ದಾಪುರ, ಹಾರೂಗೇರಿ, ಸುಟ್ಟಟ್ಟಿ, ಚಿಂಚಲಿ, ಶಿರಗೂರ, ಗುಂಡವಾಡ, ರಾಯಬಾಗದ ಸಹಸ್ರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎ.ಬಿ. ಪಾಟೀಲ ಸ್ವಾಗತಿಸಿದರು. ಮಹೇಶಾನಂದ ಸ್ವಾಮಿಗಳು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.