ADVERTISEMENT

ಪ್ಲಾಸ್ಟಿಕ್ ಬಳಸಿದರೆ ₹ 200 ದಂಡ

ಹೆಬ್ಬಾಳ ಪಂಚಾಯ್ತಿ ವ್ಯಾಪ್ತಿ: ಕಟ್ಟುನಿಟ್ಟಿನ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 7:08 IST
Last Updated 5 ಜೂನ್ 2018, 7:08 IST
ಖಾನಾಪುರ ತಾಲ್ಲೂಕು ಹೆಬ್ಬಾಳ ಗ್ರಾಮ ಪಂಚಾಯ್ತಿ ಸಿಬ್ಬಂದಿ ರಸ್ತೆಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುತ್ತಿರುವುದು
ಖಾನಾಪುರ ತಾಲ್ಲೂಕು ಹೆಬ್ಬಾಳ ಗ್ರಾಮ ಪಂಚಾಯ್ತಿ ಸಿಬ್ಬಂದಿ ರಸ್ತೆಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುತ್ತಿರುವುದು   

ಖಾನಾಪುರ: ತಾಲ್ಲೂಕಿನ ಹೆಬ್ಬಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ, ಪರಿಸರಕ್ಕೆ ಮಾರಕವಾದ 40 ಮೈಕ್ರಾನ್‌ಗಿಂತ ಕಡಿಮೆ ತೂಕದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ.

2014ರ ಡಿ.1ರಿಂದ ಈ ನಿಯಮ ಜಾರಿಯಲ್ಲಿದ್ದು, ಇದರ ಪರಿಣಾಮ ಈಗಾಗಲೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗರಿಕರು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರ ಸಂರಕ್ಷಣೆಗೆ ಪಂಚಾಯ್ತಿಯೊಂದಿಗೆ ಸಹಕರಿಸುತ್ತಿದ್ದಾರೆ.

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಖ್ಯ ರಸ್ತೆಗಳ ಬಳಿ ಪ್ಲಾಸ್ಟಿಕ್ ನಿಷೇಧದ ಫಲಕಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಪಂಚಾಯ್ತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಪ್ಲಾಸ್ಟಿಕ್ ಬಳಸಿದರೆ ವಿಧಿಸಲಾಗುವ ದಂಡದ ಮೊತ್ತದ ಬಗ್ಗೆ ಡಂಗುರ ಸಾರಿ ಮಾಹಿತಿ ನೀಡಲಾಗಿದೆ. ಶಾಲೆ ಮತ್ತು ಅಂಗನವಾಡಿಗಳ ಮಕ್ಕಳ ಮೂಲಕ ಪಾಲಕರಿಗೆ ಈ ಸಂದೇಶ ತಲುಪಿಸಲಾಗಿದೆ. ರಸ್ತೆ ಬದಿಯಲ್ಲಿ ವಾಹನ ಸವಾರರು ಮತ್ತು ಪ್ರಯಾಣಿಕರು ಎಸೆಯುವ ತ್ಯಾಜ್ಯವನ್ನು ಪಂಚಾಯ್ತಿಯಿಂದ ತೆರವುಗೊಳಿಸುವ ಕೆಲಸವನ್ನು 3 ವರ್ಷಗಳಿಂದ ಮಾಡಲಾಗುತ್ತಿದೆ ಎನ್ನುತ್ತಾರೆ ಗ್ರಾ.ಪಂ ಸಿಬ್ಬಂದಿ ಮುತ್ತು ಅಂದಾನಿ.

ADVERTISEMENT

‘2014ರ ಮಹಾತ್ಮಾ ಗಾಂಧಿ ಆದರ್ಶ ಗ್ರಾಮ, 2016ರ ನಿರ್ಮಲ ಗ್ರಾಮ, ನೈರ್ಮಲ್ಯ ರತ್ನ ಪುರಸ್ಕಾರವನ್ನು ಈ ಪಂಚಾಯ್ತಿ ಪಡೆದಿದೆ. ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಸುವವರ ಬಗ್ಗೆ ಪಂಚಾಯ್ತಿಗೆ ಮಾಹಿತಿ ನೀಡಿದವರ ಹೆಸರು ಗೋಪ್ಯವಾಗಿಡಲಾಗುವುದು. ವಸೂಲಾದ ದಂಡದ ಪೈಕಿ ಅವರಿಗೆ ₹ 50 ಪ್ರೋತ್ಸಾಹಧನ ನೀಡಲಾಗುತ್ತದೆ. ಹೀಗಾಗಿ ಪಂಚಾಯ್ತಿಯ ಜನಪರ ಕಾರ್ಯಕ್ಕೆ ಇಡೀ ಪಂಚಾಯ್ತಿಯ ನಾಗರಿಕರು ಕೈಜೋಡಿಸಿದ್ದಾರೆ. ಹೆಬ್ಬಾಳ, ಲಾಲವಾಡಿ, ಕಾರಲಗಾ ಹಟ್ಟಿ, ಹೆಬ್ಬಾಳ ಹಟ್ಟಿ, ನಾವಗಾ ಮತ್ತು ಕಾರಲಗಾ ಗ್ರಾಮಗಳ ಜನರು ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯವಾಗಿ ಬಟ್ಟೆ ಅಥವಾ ಕಾಗದದ ಉತ್ಪನ್ನಗಳನ್ನು ಬಳಸುತ್ತಿದ್ದಾರೆ’ ಎಂದು ಹೆಬ್ಬಾಳ ಗ್ರಾಮ ಪಂಚಾಯ್ತಿ ಪಿಡಿಒ ಯಶವಂತ ಘಾಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಉದ್ಯೋಗ ಖಾತ್ರಿ ಯೋಜನೆ, ಸುವರ್ಣ ಗ್ರಾಮೋದಯ, ಸ್ವಚ್ಛ ಭಾರತ ಅಭಿಯಾನ, ಹಣಕಾಸು ಯೋಜನೆ, ಅಭಿವೃದ್ಧಿ (ಶಾಸನಬದ್ಧ) ಅನುದಾನ ಸೇರಿದಂತೆ ಹಲವಾರು ಯೋಜನೆಗಳ ಸಮರ್ಪಕ ಅನುಷ್ಠಾನದ ಜೊತೆಗೆ ಈ ಪಂಚಾಯ್ತಿಯು ಪರಿಸರ ಸಂರಕ್ಷಣೆಗೂ ಕ್ರಮ ಕೈಗೊಂಡಿದೆ. ಮಾದರಿ ಪಂಚಾಯ್ತಿಯಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಗಜಾನನ ರೇಮಾಣಿ ಹೇಳಿದರು.

– ಪ್ರಸನ್ನ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.