ADVERTISEMENT

ಬಳೋಬಾಳ ಬಾಲೆಯರ ಮನಸೆಳೆವ ಯೋಗ

ಬಾಲಶೇಖರ ಬಂದಿ
Published 17 ಮಾರ್ಚ್ 2014, 9:33 IST
Last Updated 17 ಮಾರ್ಚ್ 2014, 9:33 IST
ವಿಪರೀತ ವೃಶ್ಚಿಕಾಸನದಲ್ಲಿ ಪ್ರೇಮಾ ಸನದಿ ಮತ್ತು ನಿರ್ಮಲಾ ಕೊಡ್ಲಿಕಾರ ಬಾಲಕಿಯರು
ವಿಪರೀತ ವೃಶ್ಚಿಕಾಸನದಲ್ಲಿ ಪ್ರೇಮಾ ಸನದಿ ಮತ್ತು ನಿರ್ಮಲಾ ಕೊಡ್ಲಿಕಾರ ಬಾಲಕಿಯರು   

ವಜ್ರಾಸನ, ಶೀರ್ಷಾಸನ ಇರಲಿ, ಸರ್ವಾಂಗಾಸನ ಆಗಿರಲಿ, ಇಲ್ಲವೆ ಧನುರ್‌ಆಸನ ಇರಲಿ ಎಂಥದೆ ಯೋಗದ ಪ್ರಕಾರ ಪ್ರದರ್ಶಿಸಿಸುವುದು ಗೋಕಾಕ ತಾಲ್ಲೂಕು ಬಳೋಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲೆಯರಿಗೆ ನೀರು ಕುಡಿದಷ್ಟೇ ಸಲೀಸು. ಇವರ ಸಾಧನೆ ಈಗ ಯೋಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನವನ್ನು ಸೆಳೆದಿದ್ದಾರೆ.

ಯೋಗವು ಮಕ್ಕಳಲ್ಲಿ ಏಕಾಗ್ರತೆ, ನೆನಪಿನ ಶಕ್ತಿ ವೃದ್ಧಿ ಹಾಗೂ ಚುರುಕತನವನ್ನು ಬೆಳೆಸುತ್ತದೆ ಎನ್ನುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಯೋಗವನ್ನು ಕಡ್ಡಾಯಗೊಳಿಸಿರುವುದನ್ನು ಈ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಸಪ್ಪ ಬಡವಣ್ಣಿ ವಿಶೇಷ ಗಮನಹರಿಸಿದ್ದರ ಫಲವಾಗಿ ಇಲ್ಲಿಯ ಮಕ್ಕಳಲ್ಲಿ ಯೋಗದ ಬಗ್ಗೆ ಅಭಿರುಚಿ ಮೂಡಲು ಕಾರಣವಾಗಿದೆ.

ಪ್ರತಿ ಶನಿವಾರ ನಡೆಯುವ ಎಂ.ಡಿ. ಅವಧಿಯಲ್ಲಿ ಒಂದೂವರೆ ಗಂಟೆ ಯೋಗದ ತರಬೇತಿ ನೀಡುತ್ತಿದ್ದು, ಅದರಲ್ಲಿ ಅತ್ಯುತ್ತಮ 10 ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ನಿತ್ಯ ಒಂದು ಗಂಟೆ ಯೋಗದಲ್ಲಿ ವಿಶೇಷ ತರಬೇತಿ ನೀಡುತ್ತಾರೆ.  ಯೋಗಕ್ಕಾಗಿ ಒಂದು ಪುಟ್ಟ ಕೊಠಡಿಯನ್ನು ಮಾಡಿದ್ದು, ಅಲ್ಲಿ ಯೋಗಾಸನದ ವಿವಿಧ ಭಂಗಿಗಳ ಇರುವ ಚಿತ್ರ ಪಟಗಳನ್ನು ಮಕ್ಕಳಿಗೆ ಪ್ರೇರಣೆ ನೀಡುತ್ತವೆ. 

ವಜ್ರಾಸನ, ಶೀರ್ಷಾಸನ,ಪಶ್ಚಿಮೋತ್ತಾಸನ, ಸರ್ವಾಂಗಾಸನ, ಧನುರಾಸನ, ಉತ್ತಾನಪಾದಾಸನ ಹೀಗೆ 30ಕ್ಕೂ ಅಧಿಕ ಯೋಗಾಸನಗಳನ್ನು ನಾ ಮುಂದು ತಾ ಮುಂದು ಎಂದು ಸುಲಭವಾಗಿ ಮಾಡಿ ಒಪ್ಪಿಸುತ್ತಾರೆ. ಕಠಿಣ ಯೋಗಾಸನಗಳಾದ ಹಸ್ತಮುಕ್ತ ವೃಶ್ಚಿಕಾಸನ, ಏಕಪಾದ ಲಿಖರಾಸನ, ವಿಪರೀತ ವೃಶ್ಚಿಕಾಸನಗಳನ್ನು ಸಹ ಮಾಡಲು ಇಲ್ಲಿಯ ಮಕ್ಕಳು ಸೈ. 

ಬಳೋಬಾಳ ಶಾಲೆಯು ಕಳೆದ ಮೂರು ವರ್ಷಗಳಿಂದ ಶಿಕ್ಷಣ ಇಲಾಖೆಯ ಪ್ರಾಥಮಿಕ ವಿಭಾಗದಲ್ಲಿ ವಿಭಾಗೀಯ ಮಟ್ಟ, ರಾಜ್ಯ ಮಟ್ಟದಲ್ಲಿ ಯೋಗದಲ್ಲಿ ಪ್ರಶಸ್ತಿಗಳನ್ನು ಗಿಟ್ಟಿಸುತ್ತಾ ಬಂದಿದೆ. ಇತ್ತೀಚೆಗೆ ಗುಜರಾತದ ಅಹ್ಮದಾಬಾದ್‌ನಲ್ಲಿ ಜರುಗಿದ 2013–14ನೇ ಸಾಲಿನ ಪ್ರಾಥಮಿಕ ಶಾಲಾ ಮಕ್ಕಳ 28 ರಾಜ್ಯ ತಂಡಗಳನ್ನೊಳಗೊಂಡ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಬಳೋಬಾಳದ ಬಾಲಕಿಯರು ದ್ವಿತೀಯ ಸ್ಥಾನ ತಮ್ಮ ಮುಡಿಗೇರಿಸಿಕೊಳ್ಳುವದರ ಮೂಲಕ ತಮ್ಮ ಶಾಲೆ ಮತ್ತು ವಲಯಕ್ಕೆ ಕೀರ್ತಿ ತಂದಿದ್ದಾರೆ.

ಅದು ಅಲ್ಲದೆ ಸತತ ಎರಡು ಬಾರಿ ಸತೀಶ ಆವಾರ್ಡ್ಸ್ ಪ್ರಶಸ್ತಿ ಸೇರಿದಂತೆ ಜಿಲ್ಲೆಯಲ್ಲಿ ನಡೆದ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಬಳೋಬಾಳದ ಬಾಲಕಿಯರ ಯೋಗದ ಅದ್ಭುತ ಪ್ರದರ್ಶನವು ಪ್ರೇಕ್ಷಕರ ಮೆಚ್ಚುಗೆ ಪಡೆದಿವೆ.

ಪ್ರೇಮಾ ಸನದಿ, ನಿರ್ಮಲಾ ಕೊಡ್ಲಿಕಾರ, ಪೂಜಾ ಸುಣಧೋಳಿ, ಚೈತ್ರಾ ಬೆಳವಿ, ಸವಿತಾ ಪಾಟೀಲ, ಶ್ವೇತಾ ಹುಬ್ಬಳ್ಳಿ ಈ ಮಕ್ಕಳು ಯೋಗದಲ್ಲಿ ಸಾಧನೆಯನ್ನು ಮೆರೆದಿದ್ದಾರೆ.  ಮೊದಮೊದಲು ಯೋಗಕ್ಕೆ ನಿರುತ್ಸಾಹ ತೋರುತ್ತಿದ್ದ ಬಾಲಕಿಯರ ಪಾಲಕರು ಈಗ ತಮ್ಮ ಮಕ್ಕಳಿಗೆ ಹೇಳಿಕೊಡಿ ಎಂದು ದುಂಬಾಲು ಬೀಳುತ್ತಿದ್ದಾರೆ ಎನ್ನುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕ ಬಡವಣ್ಣಿ.

ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್‌ ಮನ್ನಿಕೇರಿ, ವಲಯ ದೈಹಿಕ ಪರವೀಕ್ಷಕ ಎಸ್.ಎ. ನಾಡಗೌಡ ಅವರ ಮಾರ್ಗದರ್ಶನ ಮತ್ತು ಶಾಲಾ ಮುಖ್ಯಸ್ಥರು, ಗ್ರಾಮ ಪಂಚಾಯಿತಿ ಮತ್ತು ಸಮುದಾಯ ಜನರ ಪ್ರೋತ್ಸಾಹದಿಂದ ರಾಷ್ಟ್ರ ಮಟ್ಟದಲ್ಲಿ ಸಾಧಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಶಿಕ್ಷಕರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.