ADVERTISEMENT

ಬಾನಲ್ಲಿ ಪತಂಗಗಳ ಮನಮೋಹಕ ಚಿತ್ತಾರ!

​ಪ್ರಜಾವಾಣಿ ವಾರ್ತೆ
Published 19 ಜನವರಿ 2013, 19:57 IST
Last Updated 19 ಜನವರಿ 2013, 19:57 IST
ಬೆಳಗಾವಿಯ ನಾನಾವಾಡಿ-ಸಾಂವಗಾವದ ಅಂಗಡಿ ತಾಂತ್ರಿಕ ಕಾಲೇಜಿನ ಮೈದಾನಲ್ಲಿ ಶನಿವಾರ ಆರಂಭವಾದ 3ನೇ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ದೇಶ-ವಿದೇಶಗಳ ಪಟುಗಳು ಹಾರಿಸಿದ ವೈವಿಧ್ಯಮಯ ಗಾಳಿಪಟಗಳು ಬಾನಲ್ಲಿ ಚಿತ್ತಾರ ಮೂಡಿಸಿದವು.               ಪ್ರಜಾವಾಣಿ ಚಿತ್ರಗಳು: ಚೇತನ ಕುಲಕರ್ಣಿ
ಬೆಳಗಾವಿಯ ನಾನಾವಾಡಿ-ಸಾಂವಗಾವದ ಅಂಗಡಿ ತಾಂತ್ರಿಕ ಕಾಲೇಜಿನ ಮೈದಾನಲ್ಲಿ ಶನಿವಾರ ಆರಂಭವಾದ 3ನೇ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ದೇಶ-ವಿದೇಶಗಳ ಪಟುಗಳು ಹಾರಿಸಿದ ವೈವಿಧ್ಯಮಯ ಗಾಳಿಪಟಗಳು ಬಾನಲ್ಲಿ ಚಿತ್ತಾರ ಮೂಡಿಸಿದವು. ಪ್ರಜಾವಾಣಿ ಚಿತ್ರಗಳು: ಚೇತನ ಕುಲಕರ್ಣಿ   

ಬೆಳಗಾವಿ:  ತಂಗಾಳಿಯಲ್ಲಿ ತೇಲುತ್ತ ಫುಟ್‌ಬಾಲ್ ಆಡಿದ ಅಳಿಲು, ಮುಗಿಲೆತ್ತರಕ್ಕೆ ತಲೆ ಎತ್ತಿ ಬುಸುಗುಡುತ್ತಿದ್ದ ಕಾಳಿಂಗ ಸರ್ಪ, ಗಗನಕ್ಕೇ ಹಾರಿದ ಬೈಕ್, ಬಾನಾಡಿಗಳನ್ನೂ ನಾಚಿಸುವಂತೆ ಮುಗಿಲೆತ್ತರಕ್ಕೆ ಹಾರಿದ ಬಟ್ಟೆಯ ಹಕ್ಕಿ...!

ಪರಿವರ್ತನ ಪರಿವಾರವು ಬೆಳಗಾವಿಯ ಸಾಂವಗಾವದ ಅಂಗಡಿ ತಾಂತ್ರಿಕ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಂಡಿರುವ 3ನೇ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶನಿವಾರ ಚಾಲನೆ ದೊರೆಯುತ್ತಿದ್ದಂತೆಯೇ ವೈವಿಧ್ಯಮಯ ಗಾಳಿಪಟಗಳ ಚಿತ್ತಾರ ಬಾನಲ್ಲಿ ಮೂಡಿತು. ದೇಶ- ವಿದೇಶಗಳಿಂದ ಆಗಮಿಸಿದ್ದ ಅನೇಕ ಉತ್ಸಾಹಿಗಳು ಬಣ್ಣ-ಬಣ್ಣದ ಬೃಹತ್ ಗಾತ್ರದ ಗಾಳಿಪಟಗಳನ್ನು ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಸಾವಿರಾರು ವೀಕ್ಷಕರನ್ನು ಹೊಸದೊಂದು ಲೋಕಕ್ಕೆ ಕರೆದೊಯ್ದರು.

ಇಂಗ್ಲೆಂಡ್, ಫ್ರಾನ್ಸ್, ಇಂಡೋನೇಷ್ಯ, ಸಿಂಗಪುರ, ಚೀನಾ, ಇಟಲಿ, ಜರ್ಮನಿ ಸೇರಿದಂತೆ 14 ದೇಶಗಳ 30ಕ್ಕೂ ಹೆಚ್ಚು ಮಂದಿ ಬಾನಂಗಳದಲ್ಲಿ ಪತಂಗಗಳ ಮೆರವಣಿಗೆ ನಡೆಸಿದರು. ಅಹಮದಾಬಾದ್, ರಾಜಕೋಟ್, ಮೈಸೂರು, ಮಂಡ್ಯ, ಬೆಂಗಳೂರು, ಬೆಳಗಾವಿ ಸೇರಿದಂತೆ ದೇಶದ 20ಕ್ಕೂ ಹೆಚ್ಚು ತಂಡಗಳ ಸದಸ್ಯರು ಹಾರಿಸಿದ ಬಗೆ ಬಗೆಯ ಗಾಳಿಪಟಗಳು ಬಾನಲ್ಲಿ ಜುಗಲ್‌ಬಂದಿ ನಡೆಸುತ್ತಿದ್ದರೆ, ವೀಕ್ಷಕರು ರೋಮಾಂಚನಗೊಳ್ಳುತ್ತಿದ್ದರು.

ಇಟಲಿಯ ಎಡಾರ್ಡೊ ಬೊರ್ಗೆಟಿ ತಂದಿದ್ದ 80 ಅಡಿ ಸುತ್ತಳತೆಯ `ಬಾಲ್ ಕೈಟ್' ಗಾಳಿಗೆ ಗರ ಗರನೆ ತಿರುಗುತ್ತಿದ್ದರೆ, ಸಿಂಗಪುರದ ಅನ್ವರ್ ರಿಜ್ವಾನ್ ಅವರ ಬೃಹತ್ ಅಳಿಲು ರೂಪದ ಗಾಳಿಪಟ ಗಾಳಿಯಲ್ಲಿ ಫುಟ್‌ಬಾಲ್ ಆಡುವ ಮೂಲಕ ಗಮನ ಸೆಳೆಯಿತು. ಬೆಂಗಳೂರಿನ ಕೈಟ್ ಕ್ಲಿನಿಕ್ ಕ್ಲಬ್ ಸದಸ್ಯರು ಹಾರಿಸಿದ ರಾಷ್ಟ್ರಧ್ವಜದ ಸಾಲು ಗಾಳಿಪಟಗಳು ಮುಗಿಲೆತ್ತರಕ್ಕೆ ಭಾರತದ ಹಿರಿಮೆಯನ್ನು ಸಾರಿದವು.

ಫ್ರಾನ್ಸ್‌ನ ಜೆಸ್ಸಿಕಾ ಹಾಗೂ ಜುಲಿಯಾ ಸುಮಾರು 15 ಅಡಿ ಎತ್ತರದ ಜೋಕರ್ ಹಾಗೂ ಆತನ ಪ್ರೇಯಸಿಯ ಗೊಂಬೆಯನ್ನು ಆಡಿಸುವ ಮೂಲಕ ರಂಜಿಸಿದರು. ಜನರ ಕೈಕುಲುಕುತ್ತ ನುಲಿಯುತ್ತ ಮೈದಾನದ ಉದ್ದಕ್ಕೂ ಸಂಚರಿಸುವ ಮೂಲಕ ಮಕ್ಕಳ ಮನಗೆದ್ದರು.

ಸಂಜೆ ಹಮ್ಮಿಕೊಂಡಿದ್ದ `ನೈಟ್ ಕೈಟ್' ಕಾರ್ಯಕ್ರಮದಲ್ಲಿ ವಿವಿಧ ವಿದ್ಯುತ್ ಬಲ್ಬ್‌ಗಳಿಂದ ಅಲಂಕೃತ ಗಾಳಿಪಟಗಳನ್ನು ಹಾರಿಸುವ ಮೂಲಕ ಹೊಸ ನಕ್ಷತ್ರ ಲೋಕವನ್ನೇ ಸೃಷ್ಟಿಸಲಾಗಿತ್ತು.

ಸಂಸದ ಸುರೇಶ ಅಂಗಡಿ, ಶಾಸಕ ಅಭಯ ಪಾಟೀಲ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ, ಪರಿವರ್ತನ ಪರಿವಾರ ಸಂಸ್ಥೆಯ ಅಧ್ಯಕ್ಷ ಸಂತೋಷ ಪಾಟೀಲ ಅವರು ಪರಿಸರ ಸ್ನೇಹಿ `ಪೇಪರ್ ಪಟಾಕಿ' ಸಿಡಿಸುವ ಮೂಲಕ ಗಾಳಿಪಟ ಉತ್ಸವಕ್ಕೆ   ಚಾಲನೆ ನೀಡಿದರು. ಗಾಳಿಪಟ ಉತ್ಸವ ವೀಕ್ಷಿಸಲು ಸಂಜೆಯವರೆಗೂ ನಗರದ ಸುತ್ತಮುತ್ತಲಿನಿಂದ ಜನಸಾಗರವೇ ನಾನಾವಾಡಿ-ಸಾವಂತವಾಡಿಯ ಮೈದಾನಕ್ಕೆ ಹರಿದು ಬಂದಿತ್ತು.  ಉತ್ಸವ ಇದೇ 22ರವರೆಗೆ ನಡೆಯಲಿದ್ದು, ಭಾನುವಾರವೂ ದೇಶ-ವಿದೇಶಗಳಿಂದ ಆಗಮಿಸಿರುವ ಪಟುಗಳು ಬಾನಲ್ಲಿ ಗಾಳಿಪಟಗಳ ಚಿತ್ತಾರ ಮೂಡಿಸಲಿದ್ದಾರೆ.

ಸೋಮವಾರ ಶಾಲಾ-  ಕಾಲೇಜು ಮಕ್ಕಳಿಗೆ ಹಾಗೂ ಮಂಗಳವಾರದಂದು ಸಾರ್ವಜನಿಕರಿಗೆ ಗಾಳಿಪಟ ಹಾರಿಸಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.