ADVERTISEMENT

ಬಾನುಲಿ: ಕೋರೆ ಕೊಡುಗೆ ಅನನ್ಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2016, 9:30 IST
Last Updated 1 ಆಗಸ್ಟ್ 2016, 9:30 IST
ಬಾನುಲಿ: ಕೋರೆ ಕೊಡುಗೆ ಅನನ್ಯ
ಬಾನುಲಿ: ಕೋರೆ ಕೊಡುಗೆ ಅನನ್ಯ   

ಬೆಳಗಾವಿಯ ಹೆಮ್ಮೆಯ ಪ್ರತಿಷ್ಠಿತ ಸಂಸ್ಥೆ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ. ದೇಶ ವಿದೇಶದಲ್ಲಿ ತನ್ನದೇ ಆದ ಹೆಸರಿದೆ. ಶಿಕ್ಷಣ, ಸೇವೆ, ಆರೋಗ್ಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಕೊಡುಗೆಯನ್ನು ನೀಡಿರುವ ಕೆ.ಎಲ್.ಇ. ಸಂಸ್ಥೆಗೀಗ ಶತಮಾನೋತ್ಸವದ ಸಂಭ್ರಮ. ಸಂಸ್ಥೆಯ ಯಶಸ್ಸಿನ ರೂವಾರಿ ಡಾ. ಪ್ರಭಾಕರ ಕೋರೆ ಅವರ 69ನೇ ಜನ್ಮದಿನ ಆಚರಿಸುತ್ತಿರುವುದು ಅಭಿಮಾನ ವನ್ನುಂಟು ಮಾಡಿದೆ.

ಡಾ. ಪ್ರಭಾಕರ ಕೋರೆ ಅವರು ಅಗಸ್ಟ್ 1, 1947ರಲ್ಲಿ ಬೆಳಗಾವಿ ಜಿಲ್ಲೆಯ ಅಂಕಲಿ ಗ್ರಾಮದಲ್ಲಿ ಜನಿಸಿದರು. ಬೆಳಗಾವಿಯ ಗೋಗಟೆ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ. ಪದವೀಧರರಾದರು. ದೂರದೃಷ್ಟಿ ಮಹಾತ್ವಾಕಾಂಕ್ಷಿ ಮತ್ತು ಸತತ ಪ್ರಯತ್ನಗಳೇ ಅವರ ಸಾಧನೆಗೆ ಮೆಟ್ಟಿಲಗಳಾದವು. ತಾವು ಶಿಕ್ಷಣ-ಆರೋಗ್ಯ-ಸಂಶೋಧನ ಕ್ಷೇತ್ರದಲ್ಲಿ ಕಂಡ ಕನಸ್ಸನ್ನು ಸಾಕಾರಗೊಳಿಸಿದರು. ಅವರ ದೂರದೃಷ್ಟಿಯಿಂದ ಕೆಎಲ್‌ಇ ಸಂಸ್ಥೆಯ ಜಾಗತಿಕವಾಗಿ ವಿಸ್ತರಿಸಿದ್ದು ಸೂರ್ಯನಷ್ಟೇ ಸತ್ಯ.

252 ಅಂಗ ಸಂಸ್ಥೆಗಳನ್ನು ಹೊಂದಿರುವ ಕೆ.ಎಲ್.ಇ. ಸಂಸ್ಥೆಯ ಕೆ.ಎಲ್.ಇ. ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾಲಯ ಇಡೀ ದೇಶದಲ್ಲೇ ತನ್ನ ಮೌಲಿಕ ಸೇವೆಯಿಂದ ಹೆಸರು ವಾಸಿಯಾಗಿದೆ. ಕೆ.ಎಲ್.ಇ. ಆಸ್ಪತ್ರೆಯು ತನ್ನ ತಜ್ಞವೈದ್ಯರು ಮತ್ತು ಅತ್ಯಾಧುನಿಕ ವೈದ್ಯಕೀಯ ಸೇವೆಯಿಂದ ದೇಶಕ್ಕೆ ಮಾದರಿಯಾಗಿದೆ. ತಮ್ಮ ನಾಯಕತ್ವ ಗುಣದಿಂದ ಡಾ.ಪ್ರಭಾಕರ ಕೋರೆ ಅವರು ಸಮಾಜದಲ್ಲಿ ಅಪರೂಪವಾದ ಕಾರ್ಯಗಳನ್ನು ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಅವರ ಕನಸಿನ ಕೂಸಾಗಿದ್ದ ಸಮುದಾಯ ಬಾನುಲಿ ಕೇಂದ್ರಗಳು ಹುಬ್ಬಳ್ಳಿ ಹಾಗೂ ಬೆಳಗಾವಿಗಳಲ್ಲಿ ತಲೆಎತ್ತುವ ಮೂಲಕ ಹೊಸ ಸಂಚಲನ ಮೂಡಿಸಿದೆ.

ಸಂಗೀತವನ್ನು ಪ್ರೀತಿಯಿಂದ ಆಲಿಸುವ ಇವರಿಗೆ ಹಳೆಯ ಹಿಂದಿ ಮತ್ತು ಕನ್ನಡ ಚಿತ್ರಗೀತೆಗಳೆಂದರೆ ಪಂಚಪ್ರಾಣ. ತಮ್ಮ ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ಸಾಂಸ್ಕೃತಿಕ ಅಭಿರುಚಿಯನ್ನು ಹೊಂದಿದವರು. ಇದರೊಂದಿಗೆ ಸ್ನೇಹಿತರು, ಕುಟುಂಬ ಮತ್ತು ಕೆ.ಎಲ್.ಇ. ಪರಿವಾರಕ್ಕೆ ಸಮಯ ನೀಡುವದರೊಂದಿಗೆ ತಮ್ಮ ಸಾಂಸ್ಕೃತಿಕ ಮನಸ್ಸಿನ ಅರ್ಥ ಸಂಪತ್ತನ್ನು ಹೆಚ್ಚಿಕೊಂಡಿದ್ದು ಡಾ.ಪ್ರಭಾಕರ ಕೋರ ಅವರ ಹಿರಿಮೆ.

ಕೆ.ಎಲ್.ಇ. ಸಂಸ್ಥೆಯೆಂದರೆ ಒಂದು ಹಿರಿದಾದ ಆಲದ ಮರ. ತನ್ನ ಅಂಗ ಸಂಸ್ಥೆಗಳಾದ ನೂರಾರು ರೆಂಬೆ ಕೊಂಬೆಗಳಿಂದ ಕೂಡಿರುವ ಈ ಮರದಲ್ಲಿ ಬದುಕು ಕಟ್ಟಿಕೊಂಡಿರುವ ಹಕ್ಕಿಗಳು ಅಸಂಖ್ಯಾತ. ಸಂಸ್ಥೆಯು ಅಸಂಖ್ಯಾತ ಜನರಿಗೆ ಆಲದ ಮರದಂತೆ ಆಶ್ರಯ ತಾಣವಾಗಿ, ಅಭಿವೃದ್ಧಿಯ ಸಾಫಲ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.

ವೇಣುಧ್ವನಿಯ ಉದ್ದೇಶ
ವೇಣುಧ್ವನಿ ಜನರಿಂದ ಜನರಿಗಾಗಿ ಇರುವ ಜನರ ರೇಡಿಯೊ. ಇದರ ವಿಶೇಷತೆಯೆಂದರೆ ಇಲ್ಲಿ ಪ್ರತಿಯೊಬ್ಬರಿಗೂ ಮುಕ್ತವಾಗಿ ಮಾತನಾಡುವ ಅವಕಾಶವಿದೆ. ಕಲಾವಿದರಾಗಿ, ಆಸಕ್ತ ಕೇಳುಗರಾಗಿ, ನಿರ್ವಾಹಕರಾಗಿಯೂ ಪ್ರತಿಯೊಬ್ಬರೂ ಭಾಗವಹಿಸಿಬಹುದು. ಧ್ವನಿಯ ಪರೀಕ್ಷೆ, ಜ್ಞಾನ ಮೊದಲಾದ ಯಾವುದೇ ಮಾನದಂಡಗಳನ್ನು ಕಲಾವಿದರ ಮೇಲೆ ಹೇರದೆ ಅವರಿಗೆ ಅವಕಾಶ ನೀಡುವ ಕೇಂದ್ರವಿದು.

ವೇಣುಧ್ವನಿ ಬಾನುಲಿಯಲ್ಲಿ ಸಮಾಜದ ಪ್ರತಿಯೊಂದು ವರ್ಗದ ಪ್ರತಿಯೊಂದು ವಯಸ್ಸಿನ, ಪ್ರತಿಯೊಬ್ಬರಿಗೂ ಮಾತನಾಡುವ ಅವಕಾಶ ನೀಡಲಾಗುತ್ತಿದೆ. ಚಿಕ್ಕಮಕ್ಕಳಿಗಾಗಿ ಚಿನ್ನಾರಿ ಚಿಲುಮೆಯ ಮೂಲಕ ಅವರದ್ದೇ ಆದ ಧ್ವನಿಯಲ್ಲಿ ಕಥೆ, ಕವನ, ಹಾಡು, ನಾಟಕ ಮತ್ತತರ ಅಭಿವ್ಯಕ್ತಿಗೆ ಅವಕಾಶ ಕೊಡಲಾಗುತ್ತದೆ. ಯುವಧ್ವನಿಯಲ್ಲಿ ಬೆಳಗಾವಿಯ ಯುವಜನತೆಯು ತಮ್ಮ ಕನಸುಗಳನ್ನು, ಪ್ರತಿಭೆಯನ್ನು ಮತ್ತು ನೋವು- ನಲಿವುಗಳನ್ನು ಹಂಚಿಕೊಳ್ಳುತ್ತಾರೆ.

ಮಹಿಳಾ ವೇದಿಕೆಯಲ್ಲಿ ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆಯರ ಸಾಧನೆಯ, ಮಾತುಕತೆಯ ಹೂರಣವನ್ನು ಕೇಳುತ್ತೀರಿ. ಆರೋಗ್ಯದರ್ಶನ ಇದು ತಜ್ಞ ವೈದ್ಯರೊಂದಿಗೆ ಆರೋಗ್ಯ ಸಮಾಲೋಚನೆ. ಹಿರಿಯರಿಗಾಗಿ ಸಂಧ್ಯಾ ಸಮಯ, ಜಾನಪದ ಲೋಕದ ಅನಾವರಣವಾಗಿ ಜಾನಪದ ಸಿರಿ, ಸಂಸ್ಕೃತಿಯ ದ್ಯೋತಕವಾಗಿ ಸಂಸ್ಕೃತಿ ಸಂಭ್ರಮ, ಸ್ಥಳೀಯ ಸಂಗೀತ ಪ್ರತಿಭೆಗಳಿಗೊಂದು ವೇದಿಕೆ ಗೀತ ಸಂಗಮ, ಮಿಶ್ರ ಮಾಧುರ್ಯ ಮನರಂಜನೆಗಾಗಿ ಕೆ.ಎಲ್.ಇ. ಕಲರವ, ಕೆ.ಎಲ್.ಇ. ಝೇಂಕಾರ, ಕೆ.ಎಲ್.ಇ. ಗೀತಮಾಲಾ ಕಾರ್ಯಕ್ರಮ ಪ್ರಸಾರವಾಗುತ್ತಿವೆ. ಜೊತೆಗೆ ನಕ್ಕು ನಗಿಸಲು ಹಾಸ್ಯ ಹೊನಲು, ಮರಾಠಿ ಕನ್ನಡೇತರ ಹಾಸ್ಯಗಳ ಕಾರ್ಯಕ್ರಮ ಭಾಷಾ ಸಂಗಮ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ.

ಗಡಿ ಬೆಳಗಾವಿಯಲ್ಲಿ ಕರ್ನಾಟಕ, ಮಹಾರಾಷ್ಟ್ರದ ಮಿಶ್ರ ಸಂಸ್ಕೃತಿ. ಅಂತೆಯೇ ಬೆಳಗಾವಿಯ ಮರಾಠಿ ಬಾಂಧವರಿಗಾಗಿ ಪ್ರತಿದಿನ ಮರಾಠಿ ಸಮಯ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ. ಕಾರ್ಯಕ್ರಮಗಳನ್ನು ಮೊಬೈಲ್ ಫೋನ್, ಕಾರ್ ರೇಡಿಯೊ ಗಳಲ್ಲಿಯೂ ವೇಣುಧ್ವನಿ ಕೇಳಬಹುದು.
ಬಾನುಲಿಕೇಂದ್ರವು 2014ರ ಫೆಬ್ರು ವರಿ 6ರಂದು ಉದ್ಘಾಟನೆಯಾಯಿತು. ಬೆಳಗಾವಿಯ ನೆಹರು ನಗರದ ಕೆ.ಎಲ್.ಇ. ವಿಶ್ವವಿದ್ಯಾಲಯದ 3ನೇ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಅಭಿವ್ಯಕ್ತಿಗೆ ಮುಕ್ತ ಅವಕಾಶ
ಮಾಧ್ಯಮ ಲೋಕದಲ್ಲಿ ಪದಾರ್ಪಣೆ ಡಾ. ಪ್ರಭಾಕರ ಕೋರೆಯವರ ಮತ್ತೊಂದು ಅಭಿಪ್ಸೆಯಾಗಿತ್ತು. ಈ ಕನಸು ನನಸಾಗಿದ್ದು ಹುಬ್ಬಳ್ಳಿಯ ಬಿ.ವಿ.ಬಿ. ವಿಶ್ವವಿದ್ಯಾಲಯದಲ್ಲಿ ಆರಂಭವಾದ ಸಂಸ್ಥೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ ‘ಕೆ.ಎಲ್.ಇ. ಧ್ವನಿ’ ಮೂಲಕ. ಆಯಾ ಸಮುದಾಯದ ಜನರಿಗೆ ಅವಕಾಶ ನೀಡುವ ಉದ್ದೇಶ ಈ ಬಾನುಲಿ ಕೇಂದ್ರದ್ದಾಗಿತ್ತು. ಈ ಉದ್ದೇಶದ ಮುಂದುವರಿದ ಭಾಗವೆಂಬಂತೆ ರೂಪುತಳೆದದ್ದು ಬೆಳಗಾವಿಯ ಮೊಟ್ಟಮೊದಲ ’ವೇಣುಧ್ವನಿ 90.4’ ಸಮುದಾಯ ರೇಡಿಯೊ ಕೇಂದ್ರ. ಬೆಳಗಾವಿಯ ಜನರ ಅಂತರಂಗದ ಧ್ವನಿಗಳ ಅಭಿವ್ಯಕ್ತಿಗೆ ಮುಕ್ತ ಅವಕಾಶ ದೊರಕಿಸಬೇಕೆಂಬುದು ಬಹುದಿನಗಳ ಕನಸಾಗಿತ್ತು ಅದು ವೇಣುಧ್ವನಿಯ ಮೂಲಕ ಸಾಕಾರಗೊಂಡಿದೆ.

ಡಾ. ಪ್ರಭಾಕರ ಕೋರೆಯವರ ಸಾಮಾಜಿಕ ಕಳಕಳಿ, ಚಿಂತನೆಯನ್ನು ಅಳವಡಿಸಿಕೊಂಡು ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಬಾನುಲಿ ಕೇಂದ್ರವಿದು. ಬೆಳಗಾವಿಯ ಜನರಿಗೂ ತಮ್ಮದೇ ಆದ ರೇಡಿಯೊ ಕೇಂದ್ರ ಎಂಬ ಆಪ್ತ ಭಾವನೆಯನ್ನು ಹುಟ್ಟು ಹಾಕಿರುವ ಬಾನುಲಿಯೂ ಹೌದು. ದೇಶ-ವಿದೇಶದಲ್ಲಿ ಪ್ರತಿಷ್ಠಿತ ಶಿಕ್ಷಣ ಕಾಲೇಜುಗಳು, ಶಾಲೆಗಳು, ಆಸ್ಪತ್ರೆಗಳನ್ನು ಕೆ.ಎಲ್.ಇ. ಹೊಂದಿದ್ದರೂ ಡಾ. ಪ್ರಭಾಕರ ಕೋರೆ ಅವರಿಗೆ ಮಾಧ್ಯಮ ಕ್ಷೇತ್ರದಲ್ಲಿ ಅಂಬೆ ಗಾಲು ಇಡುತ್ತಿರುವ ವೇಣುಧ್ವನಿಯ ಬಗ್ಗೆ ಅತೀವ ಕಾಳಜಿ. ಅಂತೆಯೇ ವಾಣಿಜ್ಯ ರೇಡಿಯೋ ಕೇಂದ್ರಗಳಿಗಿಂತ ಸುಸಜ್ಜಿತ ಮತ್ತು ಗುಣಮಟ್ಟದ ಸ್ಟುಡಿಯೊ ಸ್ಥಾಪಿಸಲಾಗಿದೆ.
- ಡಾ. ಸುನೀಲ ಜಲಾಲಪುರೆ, ಸಂಯೋಜಕರು, ಕೆ.ಎಲ್.ಇ. ವೇಣುಧ್ವನಿ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.