ADVERTISEMENT

ಬೆಳಗಾವಿ ದಕ್ಷಿಣ: ಅಭಿವೃದ್ಧಿ ಪರ್ವ ಆರಂಭ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:34 IST
Last Updated 2 ಡಿಸೆಂಬರ್ 2013, 8:34 IST

ಬೆಳಗಾವಿ: ‘ನಗರದ ಯಳ್ಳೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಆಸ್ಪತ್ರೆಯು ಶೀಘ್ರದಲ್ಲೇ ಆರಂಭವಾಗ­ಲಿದ್ದು, ಬೆಳಗಾವಿ ದಕ್ಷಿಣ ಭಾಗವು ಅಭಿವೃದ್ಧಿಯ ಪರ್ವ ಕಾಣಲಿದೆ’ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಭಿಪ್ರಾಯಪಟ್ಟರು.

ಡಾ. ಪ್ರಭಾಕರ ಕೋರೆ ಉಚಿತ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋ­ಧನಾ ಕೇಂದ್ರ ಹಾಗೂ ಜವಹಾರಲಾಲ್‌ ನೆಹರೂ ವೈದ್ಯಕೀಯ ಮಹಾವಿದ್ಯಾಲ­ಯದ ಸಂಯುಕ್ತ ಆಶ್ರಯದಲ್ಲಿ ನಗರದ ಯಳ್ಳೂರ ರಸ್ತೆಯಲ್ಲಿ ಭಾನುವಾರ ಹಮ್ಮಿ­ಕೊಂಡಿದ್ದ ಬೃಹತ್‌ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೆಳಗಾವಿ ತಾಲ್ಲೂಕಿನ ಯಳ್ಳೂರ, ಸುಳಗಾ, ರಾಜಹಂಸಗಡ, ದೇಸೂರ, ಅವಚಾರಟ್ಟಿ ಹಾಗೂ ಖಾನಾಪುರ ತಾಲ್ಲೂಕಿನ ಗ್ರಾಮಗಳಿಗೆ ಕೆಎಲ್ಇ ಚಾರಿಟೇಬಲ್ ಆಸ್ಪತ್ರೆ ಉತ್ತಮ ಆರೋಗ್ಯ ಸೇವೆ ನೀಡಲಿದೆ. ಜನರು ಇದರ ಲಾಭ ಪಡೆದುಕೊಂಡು ಆರೋಗ್ಯಕರ ಜೀವನ ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಶಾಸಕ ಸಂಜಯ ಪಾಟೀಲ ಉದ್ಘಾಟಿಸಿ, ‘ಡಾ. ಪ್ರಭಾಕರ ಕೋರೆ ಅವರು ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಶ್ಲಾಘನೀಯ. ಜಾತಿ, ಮತ, ಪಂಥ, ಭಾಷೆ ಹಾಗೂ ಗಡಿಗಳನ್ನು ಮೀರಿ ಸೇವೆ ಸಲ್ಲಿಸುತ್ತಿರುವ ಕೆಎಲ್ಇ ಸಂಸ್ಥೆಯ ಕಾರ್ಯ ಸ್ತುತ್ಯಾರ್ಹ’ ಎಂದು ಬಣ್ಣಸಿದರು.

ಮಾಜಿ ಶಾಸಕ ಅಭಯ ಪಾಟೀಲ ಮಾತನಾಡಿ, ‘ಯಳ್ಳೂರ ರಸ್ತೆಯಲ್ಲಿ ಆರಂಭವಾಗುವ ಕೆಎಲ್ಇ ಚಾರಿಟೆ­ಬಲ್ ಆಸ್ಪತ್ರೆ ಗ್ರಾಮೀಣ ಪ್ರದೇಶದ ಜನರಿಗೆ ವರದಾನವಾಗಲಿದೆ. ಈ ಭಾಗದ 40 ಸಾವಿರಕ್ಕೂ ಹೆಚ್ಚು ಜನರು ಇದರ ಲಾಭ ಪಡೆದುಕೊಳ್ಳಲಿದ್ದಾರೆ’ ಎಂದರು.
‘ನಗರದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಡಾ. ಪ್ರಭಾಕರ ಕೋರೆ ಅವರು ಹೊಸ ಆಯಾಮ ನೀಡಿದ್ದಾರೆ. ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕೋರೆಯವರ ಕ್ರಿಯಾತ್ಮಕತೆ ಹಾಗೂ ಸೃಜನಶೀಲತೆ ಎಲ್ಲರಿಗೂ ಮಾದರಿ’ ಎಂದು ಹೇಳಿದರು.

ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ. ವಿಶ್ವನಾಥ ಪಾಟೀಲ, ಕೆಎಲ್ಇ ವಿಶ್ವವಿದ್ಯಾಲಯದ ಕುಲಪತಿ ಡಾ. ಚಂದ್ರಕಾಂತ ಕೋಕಾಟೆ, ಕೆಎಲ್‌ಇ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿ.ಡಿ.ಪಾಟೀಲ, ಕೆಎಲ್ಇ ಸಂಸ್ಥೆಯ ನಿರ್ದೇಶಕ ಅಶೋಕ ಬಾಗೇವಾಡಿ, ಡಾ. ವಿ.ಎಸ್‌. ಸಾಧುನವರ, ಅನಿಲ ಪಟ್ಟೇದ, ವೈ.ಎಸ್. ಪಾಟೀಲ, ಡಾ. ಎಚ್.ಬಿ.ರಾಜಶೇಖರ ಉಪಸ್ಥಿತರಿದ್ದರು.

ಡಾ. ಎ.ಎಸ್.ಗೋಧಿ ಸ್ವಾಗತಿಸಿದರು. ಡಾ. ಆರ್.ಎಸ್.ಮುಧೋಳ ವಂದಿಸಿದರು.

ಕೆಎಲ್ಇ ಆಸ್ಪತ್ರೆಯ 150 ಕ್ಕೂ ಹೆಚ್ಚು ತಜ್ಞವೈದ್ಯರು ತಪಾಸಣೆ ನಡೆಸಿದರು. ಸುಮಾರು 2,500 ಜನರು ಶಿಬಿರದ ಲಾಭ ಪಡೆದುಕೊಂಡರು. 1,450 ಜನರ ಉಚಿತ ರಕ್ತ ತಪಾಸಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.