ADVERTISEMENT

ಬೈಲಹೊಂಗಲದಲ್ಲಿ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 5:49 IST
Last Updated 17 ಮಾರ್ಚ್ 2018, 5:49 IST

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಭಾರಿ ಮಳೆ ಆಗಿದೆ. ಬಿಸಿಲಿನ ತಾಪಕ್ಕೆ ಕಂಗೆಟ್ಟ ಜನರಿಗೆ ಮಳೆರಾಯ ಕೆಲಹೊತ್ತು ತಂಪೆರೆದಿದೆ. ಸುಮಾರು ಒಂದು ಗಂಟೆಗೂ ಅಧಿಕಕಾಲ ಸುರಿದ ಮಳೆಯಿಂದ ಸಂಚಾರ ಅಸ್ತವ್ಯಸ್ಥವಾಗಿತ್ತು.

ಶುಕ್ರವಾರ ಸಂತೆ ದಿನ ಆಗಿದ್ದರಿಂದ ಸಂಜೆ ಹೊತ್ತು ವ್ಯಾಪಾರ ಮುಗಿಸಿಕೊಂಡು ಮನೆಗಳಿಗೆ ತೆರಳುತ್ತಿದ್ದ ಬೇರೆ, ಬೇರೆ ಗ್ರಾಮಗಳ ರೈತರು, ವ್ಯಾಪಾರಸ್ಥರು ಮಳೆಗೆ ಸಿಲುಕಿ ತೊಂದರೆಗೆ ಒಳಗಾದರು. ಕೇಂದ್ರ ಬಸ್ ನಿಲ್ದಾಣದ ತಗ್ಗು ಪ್ರದೇಶದ ರಸ್ತೆ ಸೇರಿದಂತೆ ಪ್ರಮುಖ ಬಜಾರ ರಸ್ತೆ, ರಾಯಣ್ಣ ವೃತ್ತದಲ್ಲಿ ಮಳೆ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು.

ಪುರಸಭೆ ಪ್ರಮುಖ ವಾರ್ಡಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ, ಇಂದಿರಾ ನಗರ ಪ್ರದೇಶದಲ್ಲಿ ಚರಂಡಿ ಒಡಿದು ಮಳೆ ನೀರು ನಿಂತು ಸಂಚಾರಕ್ಕೆ ತೀವ್ರ ಅಡೆತಡೆ ಆಗಿತ್ತು. ಅಮಟೂರ, ಬೇವಿನಕೊಪ್ಪ, ದೇವಲಾಪುರ, ಆನಿಗೋಳ, ನಯಾನಗರ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ.

ADVERTISEMENT

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಶುಕ್ರವಾರ ತುಂತುರು ಮಳೆಯಾಗಿದೆ.

ಬೈಲಹೊಂಗಲ, ಬೆಳಗಾವಿ, ಹಲಗಾ, ಕಿತ್ತೂರು, ಖಾನಾಪುರ, ಕಿತ್ತೂರು ಪ್ರದೇಶಗಳಲ್ಲಿ ಮಳೆಯಾಗಿದೆ. ಗೋಕಾಕದಲ್ಲಿ ಬೆಳಗಿನಜಾವ ನಾಲ್ಕಾರು ಹನಿಗಳ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.