ADVERTISEMENT

ಮರಾಠಿ ಶಾಲೆಗೆ ಕಾಡುತ್ತಿದೆ ಅನಾಥ ಪ್ರಜ್ಞೆ

ಶಿಕ್ಷಕರಿದ್ದಾರೆ ಆದರೆ ವಿದ್ಯಾರ್ಥಿಗಳೇ ಇಲ್ಲ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 6:47 IST
Last Updated 19 ಜುಲೈ 2013, 6:47 IST
ವಿದ್ಯಾರ್ಥಿಗಳಿಲ್ಲದೇ ಬಿಕೋ ಎನ್ನುತ್ತಿರುವ ಬೆಳಗಾವಿಯ ಕೋಟೆ ಆವರಣದ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆ ನಂಬರ್ 30ರ ಹೊರ ನೋಟ.
ವಿದ್ಯಾರ್ಥಿಗಳಿಲ್ಲದೇ ಬಿಕೋ ಎನ್ನುತ್ತಿರುವ ಬೆಳಗಾವಿಯ ಕೋಟೆ ಆವರಣದ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆ ನಂಬರ್ 30ರ ಹೊರ ನೋಟ.   

ಬೆಳಗಾವಿ: ಶಾಲೆಯಲ್ಲಿ ಇರುವುದೊಂದೆ ವರ್ಗಕೋಣೆ... ಮೂಲ ಸೌಕರ್ಯಗಳಂತೂ ಇಲ್ಲವೇ ಇಲ್ಲ... ಮೂವರು ಶಿಕ್ಷಕಿಯರಿದ್ದರೂ ಒಬ್ಬ ವಿದ್ಯಾರ್ಥಿಯು ಶಾಲೆಯತ್ತ ಸುಳಿದಿಲ್ಲ... ಅನಾಥ ಪ್ರಜ್ಞೆಯಿಂದ ನರಳುತ್ತಿದೆ ಮರಾಠಿ ಶಾಲೆ....

ಬೆಳಗಾವಿ ನಗರದ ಕೋಟೆಯ ಆವರಣದ ದುರ್ಗಾದೇವಿ ಮಂದಿರದ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆ ನಂಬರ್ 30ರ ದುಸ್ಥಿತಿ ಇದು. ಹೌದು, ರಾಜ್ಯದಲ್ಲಿನ ವಿವಿಧ ಶಾಲೆಗಳಲ್ಲಿ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದರೆ, ಇಲ್ಲಿ ಮೂವರು ಶಿಕ್ಷಕಿಯರು ವಿದ್ಯಾರ್ಥಿಗಳಿಲ್ಲದೇ ಪರದಾಡುತ್ತಿದ್ದಾರೆ.

1951ರಲ್ಲಿ ಆರಂಭಗೊಂಡಿರುವ ಈ ಶಾಲೆಗೆ 62ರ ಹರೆಯ. ಆದರೆ, ಇಲ್ಲಿಯವರೆಗೆ ಸ್ವಂತ ಕಟ್ಟಡದ ಭಾಗ್ಯ ಕೂಡಿ ಬಂದಿಲ್ಲ. ಲೋಕೋಪಯೋಗಿ ಇಲಾಖೆಯ ಕಟ್ಟಡದ ಕೋಣೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಲೆ ಅನಾಥ ಪ್ರಜ್ಞೆಯಿಂದ ನರಳುತ್ತಿದೆ.

ವಿದ್ಯಾರ್ಥಿಗಳೇ ಇಲ್ಲ: ಈ ಶಾಲೆಯು 1 ರಿಂದ 5 ತರಗತಿಯನ್ನು ಹೊಂದಿದ್ದು, ಒಬ್ಬರು ಕನ್ನಡ ಹಾಗೂ ಇಬ್ಬರು ಮರಾಠಿ ಶಿಕ್ಷಕಿಯರು ಇದ್ದಾರೆ. ಆದರೆ, ಒಬ್ಬ ವಿದ್ಯಾರ್ಥಿಯೂ ಇಲ್ಲ. ಹೀಗಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮ್ಮನೆ ಕುಳಿತುಕೊಳ್ಳುವುದು ಶಿಕ್ಷಕಿಯರ ಕೆಲಸ.

2010-11ನೇ ಸಾಲಿನಲ್ಲಿ 18, 2011-12ನೇ ಸಾಲಿನಲ್ಲಿ 14, 2012-13 ಸಾಲಿನಲ್ಲಿ 14 ವಿದ್ಯಾರ್ಥಿಗಳು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದರು. ಇದರಲ್ಲಿ ಒಬ್ಬ ವಿದ್ಯಾರ್ಥಿ 5ನೇ ತರಗತಿ ಪೂರೈಸಿ ಬೇರೆ ಶಾಲೆಗೆ ಹೋಗಿದ್ದಾನೆ. ಇನ್ನುಳಿದವರು ಶಾಲೆಯಲ್ಲಿನ ಸೌಲಭ್ಯಗಳ ಕೊರತೆಯನ್ನು ಕಂಡು ತಮ್ಮ ಮಕ್ಕಳನ್ನು ಈ ವರ್ಷ ಬೇರೆ ಶಾಲೆಗೆ ದಾಖಲಿಸಿದ್ದಾರೆ. ಹೀಗಾಗಿ ಶಾಲೆಯು ವಿದ್ಯಾರ್ಥಿಗಳ ಆಗಮನದ ನಿರೀಕ್ಷೆಯಲ್ಲಿಯೇ ಇದೆ.

`ಇಲ್ಲ' ಗಳ ಶಾಲೆ: ಆಟದ ಮೈದಾನ, ಶೌಚಾಲಯ, ಕುಡಿಯುವ ನೀರು, ಪೀಠೋಪಕರಣಗಳು, ವಿದ್ಯುತ್ ಸೌಲಭ್ಯ ದೂರದ ಮಾತು. ಈ ಶಾಲೆಗೆ ಸ್ವಂತ ಕಟ್ಟಡವೇ ಇಲ್ಲ. ಒಟ್ಟಿನಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಿದೆ.

ಶಾಲೆಯಲ್ಲಿರುವ ಕೆಲವು ಪೀಠೋಪಕರಣಗಳು, ಚಿತ್ರಪಟಗಳು ಹಾಗೂ ಕಲಿಕಾ ಸಾಮಗ್ರಿಗಳು ಬಳಕೆಯಾಗದ ಪರಿಣಾಮ ಧೂಳು ಹಿಡಿದು ಮೂಲೆ ಸೇರಿವೆ.

`ಶಾಲೆಯಲ್ಲಿನ ಸುತ್ತ ಮುತ್ತಲಿನ ಪರಿಸರದಲ್ಲಿ ಭಾಷಾ ಅಲ್ಪಸಂಖ್ಯಾತ ಕುಟುಂಬಗಳಿರುವುದು ಕಡಿಮೆ. ಮುಖ್ಯವಾಗಿ ಶಾಲೆಯಲ್ಲಿ ಅಂತಹ ಹೇಳಿಕೊಳ್ಳುವಂತಹ ಯಾವುದೇ ಸೌಲಭ್ಯಗಳಿಲ್ಲ. ಇದರಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಮೇಲಿನ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅವರೇ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ' ಎಂದು ಶಾಲೆಯ ಮುಖ್ಯ ಶಿಕ್ಷಕಿ ಎಸ್.ಬಿ.ಭಾತಖಾಂಡೆ `ಪ್ರಜಾವಾಣಿ'ಗೆ ತಿಳಿಸಿದರು.

`ಶೈಕ್ಷಣಿಕ ವರ್ಷದ ಆರಂಭದಿಂದ 45 ದಿನಗಳರೆಗೆ ಶಾಲೆಯಲ್ಲಿ ಯಾವುದಾದರೂ ವಿದ್ಯಾರ್ಥಿ ಪ್ರವೇಶ ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಒಬ್ಬ ವಿದ್ಯಾರ್ಥಿಯು ದಾಖಲಾತಿ ಪಡೆದಿಲ್ಲ. ಹೀಗಾಗಿ ಶಾಲೆಯನ್ನು ಮುಚ್ಚಲಾಗುವುದು ಎಂದು ಆದೇಶ ಹೊರಡಿಸಲಾಗಿದೆ.

ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಶಿಕ್ಷಕಿಯರ ಪೈಕಿ ಇಬ್ಬರನ್ನು ಹಳೇ ಗಾಂಧಿನಗರದ ಸರ್ಕಾರಿ ಕಿರಿಯ ಮರಾಠಿ ಪ್ರಾಥಮಿಕ ಶಾಲೆ ಹಾಗೂ ಒಬ್ಬರನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 29 ಕ್ಕೆ ವರ್ಗಾವಣೆ ಮಾಡಲಾಗುವುದು' ಎಂದು ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಪುಂಡಲೀಕ ಹೇಳಿದರು.
-ಇಮಾಮಹುಸೇನ್. ಎಂ.ಗೂಡುನವರ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT