ADVERTISEMENT

ಮಳೆ: ರೈತರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 8:24 IST
Last Updated 8 ಜೂನ್ 2013, 8:24 IST

ಚಿಕ್ಕೋಡಿ: ತಾಲ್ಲೂಕಿನ ವಿವಿಧೆಡೆ ಶುಕ್ರವಾರ ರಭಸದಿಂದ ಸುರಿದ ಮಳೆ ಮುಂಗಾರಿನ ಮುನ್ಸೂಚನೆ ನೀಡಿದೆ. ಇದರಿಂದಾಗಿ ಕೃಷಿಕರು ಸಂತಸಗೊಂಡಿದ್ದು, ಬಿತ್ತನೆಗೆ ಸಜ್ಜಾಗುತ್ತಿದ್ದಾರೆ.

ತಾಲ್ಲೂಕಿನಲ್ಲಿ ಕಳೆದ ವರ್ಷ ಕಾರಹುಣ್ಣಿಮೆವರೆಗೂ ಮಳೆರಾಯನ ಆಗಮನವಾಗದೇ ಕಂಗೆಟ್ಟಿದ್ದ ಕೃಷಿಕರು,  ಪ್ರಸಕ್ತ ವರ್ಷ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಸಂತಸಗೊಂಡಿದ್ದಾರೆ. ತಾಲ್ಲೂಕಿನ ಹಿರೇಕೋಡಿ, ಅಂಕಲಿ, ಯಕ್ಸಂಬಾ, ಸದಲಗಾ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸಂಜೆ 4ರಿಂದ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ರಭಸದಿಂದ ಸುರಿಯುವ ಮೂಲಕ ಮುಂಗಾರಿನ ಮುನ್ಸೂಚನೆ ನೀಡಿದೆ.

ಬೆಳಿಗ್ಗೆಯಿಂದಲೂ ತೀರಾ ಧಗಧಗಿಸುತ್ತಿದ್ದ ವಾತಾವರಣ ಸಂಜೆ ತಂಪಾಗಿ ಮಾರ್ಪಟ್ಟಿತು. ಮೃಗಶಿರಾ ಸುರಿದರೆ ಬಿತ್ತನೆ ಸಂಪೂರ್ಣವಾಗುತ್ತದೆ ಎಂದು ನಂಬಿರುವ ರೈತರು ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿದ್ದಾರೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಸೋಯಾಬಿನ್ 14400 ಹೆಕ್ಟೇರ್, ಜೋಳ 9500 ಹೆಕ್ಟೇರ್, ಗೋವಿನ ಜೋಳ 7,500 ಹೆಕ್ಟೇರ್, ದ್ವಿದಳ ಧಾನ್ಯ 3650 ಹೆಕ್ಟೇರ್, ಶೇಂಗಾ 15000 ಹೆಕ್ಟೇರ್, ಹತ್ತಿ 500 ಹೆಕ್ಟೇರ್, ಕಬ್ಬು 34,000 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು 98000 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.