ADVERTISEMENT

ಮಾಂಸದ ಅಂಗಡಿ ಹಾವಳಿ ತಪ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 9:19 IST
Last Updated 10 ಜೂನ್ 2013, 9:19 IST

ಚನ್ನಮ್ಮನ ಕಿತ್ತೂರು: ಸ್ಥಳೀಯ ಗುರುವಾರ ಪೇಟೆಯ ಕೊಂಡವಾಡ ವೃತ್ತದಲ್ಲಿ ತೆರೆಯಲಾಗಿರುವ ಕೋಳಿ, ಮಟನ್ ಅಂಗಡಿಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟುವಂತೆ ಅಲ್ಲಿಯ ನಾಗರಿಕರು ಜಿಲ್ಲಾ ಆರೋಗ್ಯ ಅಧಿಕಾರಿಯವರನ್ನು ಒತ್ತಾಯಿಸಿದ್ದಾರೆ.

`ಕೊಂಡವಾಡ ವೃತ್ತದಲ್ಲಿ ತೆರೆದಿರುವ ಮೂರು ಕೋಳಿಯ ಮಟನ್ ಮಾರುವ ಅಂಗಡಿಗಳಲ್ಲಿ ಕೋಳಿ ಕೊಯ್ದು, ಅದನ್ನು ತೊಳೆದ ನೀರನ್ನು ಗಟಾರಿನಲ್ಲಿ ಹಾಕುತ್ತಾರೆ. ಗಟಾರ್ ನೀರು ಮುಂದೆ ಹರಿಯದ ಕಾರಣ ಅಲ್ಲೇ ನಿಂತು ಕೊಳಚೆ ನಿರ್ಮಾಣವಾಗುತ್ತಿದ್ದು, ಈ ಕೊಳಚೆ ನೀರು ಬೀರುತ್ತಿರುವ ದುರ್ವಾಸನೆಯನ್ನು ಮೇದಾರ ಓಣಿ, ಸುಣಗಾರ ಓಣಿ ಮತ್ತು ವೃತ್ತದ ಜನರಿಗೆ ಸಹಿಸಲು ಅಸಾಧ್ಯವಾಗಿದೆ' ಎಂದು ಅವರಿಗೆ ಸಲ್ಲಿಸಲಾಗಿರುವ ದೂರಿನಲ್ಲಿ ತಿಳಿಸಿದ್ದಾರೆ.

`ಒಂದೊಂದು ಬಾರಿ ರಕ್ತ ಮಿಶ್ರಿತ ನೀರು ಸಹ ಅಲ್ಲೇ ನಿಂತು ಹೊಂಡವಾಗುತ್ತದೆ. ರಾತ್ರಿ ಹೊತ್ತು ಉಳಿದ ತ್ಯಾಜ್ಯವನ್ನೂ ಗಟಾರಿನಲ್ಲಿ ಹಾಕಿ ಹೋಗುತ್ತಾರೆ.

ಮಟನ್ ಚೂರುಗಳು ಹಾಗೂ ರಕ್ತ ಮಿಶ್ರಿತ ಹೊಂಡದ ನೀರಿನ ದುರ್ವಾಸನೆಯನ್ನು ತೆಗೆದುಕೊಳ್ಳತ್ತಲೇ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ತೆರಳಬೇಕಾದ ದು:ಸ್ಥಿತಿಯಿದೆ.

ಕೊಳೆತ ನೀರಿನಿಂದ ಸೊಳ್ಳೆಗಳ ಕಾಟವೂ ಈ ಭಾಗದಲ್ಲಿ ಹೆಚ್ಚಾಗಿದ್ದು, ಮಕ್ಕಳ ಮತ್ತು ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ' ಎಂದಿರುವ ಅವರು `ಇವುಗಳನ್ನು ಮುಖ್ಯ ರಸ್ತೆಯಿಂದ ಬೇರೆಡೆ ಸ್ಥಳಾಂತರಿಸಬೇಕು' ಎಂದು ಎಫ್. ಎಂ. ಮುರಗೋಡ, ಯಲ್ಲಪ್ಪ ಬೋಗೂರ, ಎಸ್. ಎಫ್. ಬಾಳೇಕುಂದ್ರಿ, ಪ್ರಕಾಶ್ ಸುಣಗಾರ, ಸುಭಾಸ ಆನಿಗೋಳ, ಗುರು ಕಟ್ಟೀಮನಿ, ಎ. ಎ. ಬಾನಿ,  ಕೆ. ಕೆ. ವೀರಾಪುರ, ಮಾರುತಿ ಸುಣಗಾರ,  ಎ. ಎಸ್. ಹಂಚಿನಮನಿ, ಶಂಕರ ಬಡಿಗೇರ, ನಾಗೇಶ್ ಸುಣಗಾರ, ರವಿ ಭಜಂತ್ರಿ, ಐ. ಎ. ಅತ್ತಾರ, ಎ. ಎಲ್. ತಲ್ಲೂರ ಮುಂತಾದವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.