ADVERTISEMENT

ಮುಗುಳಖೋಡದಲ್ಲಿ ಬೃಹತ್ ಜಾತ್ರೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 11:12 IST
Last Updated 20 ಏಪ್ರಿಲ್ 2013, 11:12 IST

ಮುಗುಳಖೋಡ:  ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಕೆಂಡದ ಮೇಲೆ ನಡೆದು ಕೊಂಡು ಬರುವಾಗ ಲಕ್ಷಾಂತರ ಭಕ್ತರು ಭಕ್ತಿ ಭಾವುಕರಾಗಿ ಮುರುಘರಾಜೇಂದ್ರ ಸ್ವಾಮೀಜಿಗಳಲ್ಲಿ ಶ್ರೀ ಯಲ್ಲಾಲಿಂಗ ಪ್ರಭುಗಳು ಹಾಗೂ ಶ್ರೀ ಸಿದ್ಧರಾಮ ಶಿವಯೋಗಿಗಳ ಪ್ರತಿರೂಪವನ್ನು ಕಂಡರು.

ಎಲ್ಲರ ಬಾಯಲ್ಲೂ ಶಿವನಾಮ ಸ್ಮರಣೆ ಮುಗಿಲು ಮುಟ್ಟಿತ್ತು. ಶ್ರೀಗಳು ಕೆಂಡದ ಮೇಲೆ ಪಾದಸ್ಪರ್ಶ ಮಾಡು ತ್ತಿದ್ದಂತೆ ಲಕ್ಷಾಂತರ ಭಕ್ತಾದಿಗಳು ಶ್ರೀ ಸಿದ್ಧಲಿಂಗ, ಶ್ರೀ ಯಲ್ಲಾಲಿಂಗ, ಶ್ರೀ ಸಿದ್ಧರಾಮೇಶ್ವರ ಮಹಾರಾಜರು ಹಾಗೂ ಡಾ.ಮುರುಘರಾಜೇಂದ್ರ ಸ್ವಾಮೀಜಿ ಘೋಷಣೆ ಕೂಗಿ ಶ್ರೀ ಸಿದ್ಧರಾಮರ ಜಪ ಮಾಡುತ್ತ ಭಕ್ತಿಯ ಪರಾಕಾಷ್ಠೆ ಮೆರೆದರು.

ಶುಕ್ರವಾರ ಬೆಳಿಗ್ಗೆ ಶ್ರೀ ಸಿದ್ಧಲಿಂಗ ಮಹಾರಾಜರ ಗದ್ದುಗೆ, ಕೈಲಾಸ ಮಂಟಪದಲ್ಲಿನ ಬೆಳ್ಳಿ ಮಂಟಪಕ್ಕೆ ಪುಷ್ಪವೃಷ್ಟಿ ಅರ್ಪಣೆ, ಸದ್ಗುರು ಶ್ರೀ ಯಲ್ಲಾಲಿಂಗ ಪ್ರಭು ಮಹಾರಾಜರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಶ್ರೀ ಸಿದ್ಧರಾಮೇಶ್ವರ ಮಹಾಶಿವಯೋಗಿ ಗಳ ಪರುಷು ಗಟ್ಟಿಗೆ ಹಾಗೂ ಶ್ರೀ ಹೊನ್ನಲಿಂಗ ಮಹಾರಾಜರ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ಸಕಲ ವಾದ್ಯಗಳೊಂದಿಗೆ ಪುಷ್ಪವೃಷ್ಟಿ ಅರ್ಪಿಸುತ್ತ ಸುತ್ತು ಅಗ್ನಿಕುಂಡವನ್ನು ಐದು ಸುತ್ತಿದರು.

ಡಾ.ಮುರುಘರಾಜೇಂದ್ರ ಸ್ವಾಮೀಜಿ ಪಾದಸ್ಪರ್ಶ ಮಾಡಿದ ಅಗ್ನಿಕುಂಡದ ವಿಭೂತಿ ಧರಿಸಿದರೆ ತಮ್ಮೆಲ್ಲ ಕಷ್ಟ ಕಾರ್ಪಣ್ಯಗಳು ದೂರವಾಗಿ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ. ತಾವು ಕೈಗೊಂಡ ಉತ್ತಮ ಕಾರ್ಯಗಳು ಫಲದಾಯಕವಾಗುತ್ತವೆ. ಮಕ್ಕಳಿರದಿದ್ದರೆ ಮಕ್ಕಳಾಗುತ್ತವೆ. ಸರ್ವರೋಗಗಳನ್ನು ವಾಸಿಮಾಡುವ ಶಕ್ತಿ ಮಹಾತ್ಮರ ಪಾದದ ವಿಭೂತಿ ಯಲ್ಲಿದೆ ಎಂದು ಶ್ರೀಗಳು ಪಾದಸ್ಪರ್ಶ ಮಾಡಿದ ಅಗ್ನಿಕುಂಡಕ್ಕೆ ಭಕ್ತಾದಿಗಳು ನೂಕುನುಗ್ಗಲಿನಲ್ಲಿ ಮುತ್ತು, ಪುಷ್ಪ, ಹೂ ಅರ್ಪಿಸಿ ಪ್ರಸಾದವನ್ನು ಹಣೆಗೆ ಹಚ್ಚಿದರು.

ಅಲ್ಲದೇ ಶ್ರೀಗಳು ನಡೆದಾಡಿದ ಪುಷ್ಪ, ಮುತ್ತುಗಳನ್ನು ಪಡೆದರೆ ಐಶ್ವರ್ಯ ಲಭಿಸುತ್ತದೆ ಎಂದು ಭಕ್ತರು ಆಯ್ದುಕೊಂಡು ಮನೆಗಳಿಗೆ ಹೋದರು.

ಅಪ್ಪಾಜಿ ಸಂಗೀತ ಕಲಾ ಬಳಗದ ವರಿಂದ ಭಕ್ತಿ ಸಂಗೀತ ನಡೆಯಿತು. ಈ ಸಂದರ್ಭದಲ್ಲಿ ಮುಂಬೈ, ಗೋವಾ, ಹೈದರಾಬಾದ, ಸೊಲ್ಲಾಪುರ, ಬೆಂಗಳೂರು, ರಾಯಚೂರು, ಬಳ್ಳಾರಿ, ಬೆಳಗಾವಿ ಸೇರಿದಂತೆ ಮುಗುಳಖೋಡ ಶಾಖಾ ಮಠಗಳ ಎಲ್ಲ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.