ADVERTISEMENT

ಮೃತ್ಯುಕೂಪಗಳಾದ ರಸ್ತೆ ಬದಿಯ ಬಾವಿಗಳು

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 7:06 IST
Last Updated 5 ಜುಲೈ 2013, 7:06 IST

ಚಿಕ್ಕೋಡಿ: ತಾಲ್ಲೂಕಿನ ಬಹುತೇಕ ರಸ್ತೆ ಬದಿಯ ತೆರೆದ ಬಾವಿಗಳಿಗೆ ಸುರಕ್ಷಿತ ಗೋಡೆಗಳೇ ಇಲ್ಲ. ಇಕ್ಕಟ್ಟಾದ ರಸ್ತೆಗಳ ಬದಿಯಲ್ಲಿ ಇರುವ ಬಾವಿಗಳ ಬಳಿ ಸಂಚರಿಸುವುದೆಂದರೆ ಸಾವಿನ ಜೊತೆ ಸರಸವಾಡಿದಂತೆಯೇ. ಚಲಿಸುವಾಗ ಸ್ವಲ್ಪ ಆಯ ತಪ್ಪಿದ್ದರೂ ಸಾಕು ವಾಹನ ಸೀದಾ ಬಾವಿ ಪಾಲಾಗುತ್ತದೆ.

ಒಂದೆಡೆ ಆಳವಾದ ಬಾವಿಗಳು, ಇನ್ನೊಂದೆಡೆ ಕಡಿದಾದ ರಸ್ತೆ. ಇವೆರಡರ ಮಧ್ಯೆ ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಾಲನೆ ಮಾಡಬೇಕು. ಇಂಥ ಸ್ಥಳಗಳಲ್ಲಿ ಎದುರು ಬದಿರಾಗಿ ಎರಡು ವಾಹನಗಳು ಸಂಚರಿಸುವಾಗಂತಲೂ ವಾಹನದಲ್ಲಿ ಕುಳಿತ ಪ್ರಯಾಣಿಕನಿಗೂ ಕೂಡ ಬೆವರಿಳಿಯುತ್ತದೆ. ಕಳೆದ ಸೋಮವಾರ (ಜು.1)ವಷ್ಟೇ ತಾಲ್ಲೂಕಿನ ನೇಜ್ ಗ್ರಾಮದ ಬಳಿ ಲಾರಿಯೊಂದು ರಸ್ತೆ ಬದಿಯ ಬಾವಿಗೆ ಉರುಳಿ ಚಾಲಕ ಸಾವಿಗೀಡಾಗಿದ್ದಾನೆ. ಇಂತಹ ಅದೆಷ್ಟೋ ಬಾವಿಗಳು ಬಲಿಗಾಗಿ ಬಾಯ್ತೆರೆದು ನಿಂತಿವೆ.

ತಾಲ್ಲೂಕಿನ ಯಕ್ಸಂಬಾ-ಸದಲಗಾ, ಚಿಕ್ಕೋಡಿ-ಯಕ್ಸಂಬಾ ರಸ್ತೆಗಳ ಬದಿಗಳಲ್ಲಿ, ಹತ್ತರವಾಟ ಗೇಟ್ ಬಳಿ ಸಂಕೇಶ್ವರ-ಜೇವರ್ಗಿ ರಸ್ತೆ ಪಕ್ಕ, ನಿಪ್ಪಾಣಿ-ಮುಧೋಳ ಮುಖ್ಯರಸ್ತೆಯಿಂದ ಯಾದ್ಯಾನವಾಡಿಗೆ ಹೋಗುವ ರಸ್ತೆ ಪಕ್ಕ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ರಸ್ತೆಗಳಿಗೆ ಹೊಂದಿಕೊಂಡೇ ಇರುವ ತೆರೆದ ಬಾವಿಗಳು ಸುರಕ್ಷಿತ ಗೋಡೆಗಳಿಲ್ಲದೇ ಮೃತ್ಯುಕೂಪಗಳಾಗಿ ಪರಿಣಮಿಸಿವೆ.

ಕೆಲವು ಬಾವಿಗಳಲ್ಲಿ ನೀರಿದ್ದರೆ, ಇನ್ನು ಕೆಲವು ಪಾಳು ಬಿದ್ದಿವೆ. ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳ ಮಧ್ಯೆ ರಸ್ತೆ ಬದಿಯಲ್ಲಿ ಬಾವಿಗಳು ಇರುವುದೇ ಗೊತ್ತಾಗುವುದಿಲ್ಲ. ಮೊದಲೇ ಅಂತಹ ಬಾವಿಗಳು ಅಂಚುಗಳು ಕಳಚಿ ಬೀಳುತ್ತಿರುತ್ತವೆ. ಇಂತಹ ರಸ್ತೆಗಳಲ್ಲಿ ಅಪರಿಚಿತ ಚಾಲಕ ವಾಹನ ಚಾಲನೆ ಮಾಡುತ್ತಿದ್ದರೆ ಒಂಚೂರು ಎಚ್ಚರ ತಪ್ಪಿ ವಾಹನ ವಾಲಿದರೂ ಅವಘಡ ಕಟ್ಟಿಟ್ಟ ಬುತ್ತಿ.

`ಲೋಕೋಪಯೋಗಿ ಇಲಾಖೆಯಿಂದ ತಾಲ್ಲೂಕಿನಲ್ಲಿ ರಸ್ತೆ ಬದಿಯ ಬಾವಿಗಳಿಗೆ ಸಂರಕ್ಷಣಾ ಗೋಡೆಗಳನ್ನು ನಿರ್ಮಿಸಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಇಲಾಖೆಯು ರಸ್ತೆ ನಿರ್ಮಾಣ ಹೊರತುಪಡಿಸಿ ಬದಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇಲ್ಲ. ಆದರೂ, ತೀರಾ ಅಪಾಯ ಎನಿಸಿದಲ್ಲಿ ವಿಶೇಷ ಆದ್ಯತೆ ಮೇರೆಗೆ ರಸ್ತೆ ಬದಿಯಲ್ಲಿ ಇರುವ ಬಾವಿಗಳಿಗೆ ಸುರಕ್ಷತಾ ಗೋಡೆಗಳನ್ನು ನಿರ್ಮಿಸಲು ಶಾಸಕರು ಮತ್ತು ಸಚಿವರೊಂದಿಗೆ ಚರ್ಚಿಸಿ ಕಾಮಗಾರಿ ಕೈಗೊಳ್ಳಬಹುದಾಗಿದೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು' ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಎಇಇ ಆರ್.ಎಸ್. ಬೆಳ್ಳುಂಕಿ.

`ಪಂಚಾಯತ್ ರಾಜ್ ಇಲಾಖೆಯಿಂದ ನಿರ್ಮಿಸಲಾದ ರಸ್ತೆಗಳಿಗೆ ತೀರಾ ಹತ್ತಿರವಿರುವ ಬಾವಿಗಳಿಗೆ ಸಂರಕ್ಷಣಾ ಗೋಡೆಗಳನ್ನು ನಿರ್ಮಿಸುವ ಅಗತ್ಯವಿದೆ. ಆ ಕೆಲಸವನ್ನು ಚಿಕ್ಕೋಡಿ ಉಪವಿಭಾಗದಲ್ಲಿ ಮಾಡಲಾಗುತ್ತಿದೆ. ಚಿಕ್ಕೋಡಿಯಿಂದ ಚಿಂಚಣಿಗೆ ಹೊಸದಾಗಿ ನಿರ್ಮಿಸಿರುವ ಕೂಡುರಸ್ತೆ ಬದಿಯಲ್ಲಿ ಇರುವ ಬಾವಿಯೊಂದಕ್ಕೆ ಸಂರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅನುದಾನ ಲಭ್ಯತೆ ಮೇರೆಗೆ ಅಪಾಯಕಾರಿಯಾಗಿರುವ ರಸ್ತೆ ಬದಿಯ ಬಾವಿಗಳಿಗೆ ಸುರಕ್ಷತಾ ಗೋಡೆಗಳನ್ನು ನಿರ್ಮಿಸಲಾಗುವುದು' ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ಆರ್.ಕೆ. ನಿಂಗನೂರೆ ಹೇಳುತ್ತಾರೆ.

ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಬಲಿಗಾಗಿ ಬಾಯ್ತೆರೆದು ನಿಂತಿರುವ ರಸ್ತೆ ಬದಿಯ ಬಾವಿಗಳಿಗೆ ಸುರಕ್ಷತಾ ಗೋಡೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.