ADVERTISEMENT

‘ಮೋದಿ ಫೆಸ್ಟ್‌’ಗೆ ಅದ್ಧೂರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 7:21 IST
Last Updated 10 ಜೂನ್ 2017, 7:21 IST
ಬೆಳಗಾವಿಯ ಸಂಭಾಜಿ ಮೈದಾನದಲ್ಲಿ ಶುಕ್ರವಾರ ಆರಂಭವಾದ ‘ಮೋದಿ ಫೆಸ್ಟ್‌’ಗೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ಶುಕ್ರವಾರ  ಚಾಲನೆ ನೀಡಿದರು
ಬೆಳಗಾವಿಯ ಸಂಭಾಜಿ ಮೈದಾನದಲ್ಲಿ ಶುಕ್ರವಾರ ಆರಂಭವಾದ ‘ಮೋದಿ ಫೆಸ್ಟ್‌’ಗೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ಶುಕ್ರವಾರ ಚಾಲನೆ ನೀಡಿದರು   

ಬೆಳಗಾವಿ: ಕೇಂದ್ರ ಸರ್ಕಾರವು ಮೂರು ವರ್ಷಗಳಲ್ಲಿ ಜಾರಿಗೊಳಿಸಿರುವ ಕಾರ್ಯಕ್ರಮಗಳ ಪ್ರಚಾರಕ್ಕೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವುದಕ್ಕೆ ಇಲ್ಲಿನ ಮಹಾದ್ವಾರ ರಸ್ತೆಯ ಸಂಭಾಜಿ ಮೈದಾನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿರುವ ಮೂರು ದಿನಗಳ ‘ಮೋದಿ ಫೆಸ್ಟ್‌’ಗೆ ತುಂತುರು ಮಳೆಯ ನಡುವೆಯೇ ಶುಕ್ರವಾರ ಚಾಲನೆ ನೀಡಲಾಯಿತು.

ಉದ್ಘಾಟಿಸಿದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ನಂತರ ಬಹಳಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರೈತರು, ಮಹಿಳೆಯರು, ಹಿಂದುಳಿದವರ ನೈಜ ಸಮಸ್ಯೆಗಳ ಅರಿವಿರುವ ಮೋದಿ ನೀಡಿರುವ ಕಾರ್ಯಕ್ರಮಗಳ ಪ್ರಯೋಜನವನ್ನು ಫಲಾನುಭವಿಗಳು ಪಡೆಯುವಂತೆ ಮಾಡುವ ಜವಾಬ್ದಾರಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಮೇಲಿದೆ. ಬಹಳಷ್ಟು ಮಂದಿಗೆ ಯೋಜನೆಗಳ ಅರಿವಿಲ್ಲ. ಈ ಕೊರತೆಯನ್ನು ನೀಗಿಸಬೇಕಾಗಿದೆ’ ಎಂದು ಹೇಳಿದರು.

‘ಸರ್ಕಾರವು ಎಲ್ಲ ವರ್ಗದವರಿಗೂ ಕಾರ್ಯಕ್ರಮ ನೀಡಿದೆ. ಯುವಕರ ಕೌಶಲ ಅಭಿವೃದ್ಧಿಗೆ, ಸಾಲ ಸೌಲಭ್ಯ ನೀಡುವ ಮೂಲಕ ಅವರನ್ನು ಉದ್ಯಮಿಗಳಾಗಿಸುವುದಕ್ಕೆ ಕ್ರಮ ವಹಿಸಿದೆ. ರೈತರಿಗೆ ಫಸಲ್‌ ಬಿಮಾ ಯೋಜನೆ ಜಾರಿಯಾಗಿದೆ. ವರ್ಷಕ್ಕೆ ಕೇವಲ ₹ 12 ಕಟ್ಟಿದರೆ, ಜೀವವಿಮೆ ದೊರೆಯುತ್ತದೆ. ಸಣ್ಣ ವ್ಯಾಪಾರಿಗಳಿಗೆ ‘ಮುದ್ರಾ’ ಯೋಜನೆಯಲ್ಲಿ ಬ್ಯಾಂಕ್‌ನಿಂದ ಸಾಲ ಸಿಗುತ್ತದೆ. 17 ಕೋಟಿ ಶೌಚಾಲಯಗಳನ್ನು ಹೊಸದಾಗಿ ಕಟ್ಟಿಸಿಕೊಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ವಿನೋದ್‌ ದತ್ತವಾಡಕರ, ಮಾಜಿ ಶಾಸಕ ಅಭಯ ಪಾಟೀಲ, ಪಕ್ಷದ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಮುಖಂಡರಾದ ಮನೋಹರ ಕಡೋಲ್ಕರ್‌, ಕಿರಣ ಜಾಧವ, ಶ್ರೀನಿವಾಸ ಬೀಸನಕೊಪ್ಪ, ಮಂಗೇಶ್‌, ರಾಜು ಟೋಪಣ್ಣವರ, ರಾಜು ಚಿಕ್ಕನಗೌಡರ, ಬಾಬುಲಾಲ್‌ ರಾಜಪುರೋಹಿತ್‌, ಭಾಗವಹಿಸಿದ್ದರು.

ತುಂತುರು ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಬಂದಿರಲಿಲ್ಲ. ಫೆಸ್ಟ್‌ನಲ್ಲಿ ಸ್ಕಿಲ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ಸ್ಟಾಂಡ್‌ ಅಫ್‌ ಇಂಡಿಯಾ, ಸ್ಟಾರ್ಟ್‌ ಅಪ್‌ ಇಂಡಿಯಾ ಸೇರಿದಂತೆ ಕೇಂದ್ರ ಜಾರಿಗೊಳಿಸಿರುವ 47 ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆಯಬಹುದು. ಮೋದಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಎಲ್‌ಇಡಿ ಬಲ್ಬ್‌ಗಳ ಮಾರಾಟವೂ ನಡೆಯುತ್ತಿದೆ. ಎಸ್‌ಬಿಐ ಮಳಿಗೆಯಲ್ಲಿ, ಬ್ಯಾಂಕ್‌ನಿಂದ ದೊರೆಯುವ ಸಾಲ–ಸೌಲಭ್ಯಗಳನ್ನು ತಿಳಿದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.