ADVERTISEMENT

ಮೋದಿ ಮೋಡಿಗೆ ಒಳಗಾದ ಜನಸಾಗರ!

‘ಸುವರ್ಣ’ ಸಂಭ್ರಮದಲ್ಲಿ ಮಿನುಗಿದ ಜೆಎನ್‌ಎಂಸಿ

ವಿನಾಯಕ ಭಟ್ಟ‌
Published 20 ಡಿಸೆಂಬರ್ 2013, 6:14 IST
Last Updated 20 ಡಿಸೆಂಬರ್ 2013, 6:14 IST

ಬೆಳಗಾವಿ: ಪಡುವಣದಲ್ಲಿ  ಸೂರ್ಯ ಹೊಂಬೆಳಕು ಸೂಸುತ್ತಿದ್ದಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ   ನರೇಂದ್ರ ಮೋದಿ ವೇದಿಕೆ ಏರಿದಾಗ ಬಿಸಿಲಿನಲ್ಲಿ ಕುಳಿತು ಬಾಡಿ ಹೋಗಿದ್ದ ಸಾವಿರಾರು ಜನರಲ್ಲಿ ವಿದ್ಯುತ್‌ ಸಂಚಲನ ಮೂಡಿತು.. ಮುಗಿಲು ಮುಟ್ಟುವಂತೆ ಕರತಾಡನ, ಕೇಕೆ ಮೊಳಗಿತು!

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಎಲ್‌ಇ ಸಂಸ್ಥೆಯ ಜವಾಹರಲಾಲ್‌ ನೆಹರು ವೈದ್ಯಕೀಯ ಮಹಾವಿದ್ಯಾಲದ (ಜೆಎನ್‌ಎಂಸಿ) ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದ ವಿಶೇಷ ಆಕರ್ಷಣೆಯಾಗಿದ್ದ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಭಾಷಣವನ್ನು ಕೇಳಲು ಮಧ್ಯಾಹ್ನವೇ ವಿವಿಧೆಡೆಯಿಂದ ಜನಸಾಗರವೇ ಹರಿದು ಬರುತ್ತಿತ್ತು.

ಕೆಎಲ್‌ಇ ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ಬಿಜೆಪಿ ಮುಖಂಡರು ಮತ್ತು ಮೋದಿ ಅಭಿಮಾನಿಗಳ ದಂಡು ಮಧ್ಯಾಹ್ನ 3 ಗಂಟೆಯೇ ಕ್ರೀಡಾಂಗಣದ ಒಳಗೆ ಬಂದು ಬಿರು ಬಿಸಿಲಿನಲ್ಲೇ ಕುಳಿತುಕೊಂಡಿದ್ದರು.

ಮಧ್ಯಾಹ್ನ 4 ಗಂಟೆಯ ಹೊತ್ತಿಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದ ನರೇಂದ್ರ ಮೋದಿ ಅವರನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಬರಮಾಡಿಕೊಂಡರು. ಬಳಿಕ ಜೆಎನ್‌ಎಂಸಿಗೆ ಭೇಟಿ ನೀಡಿದ ಮೋದಿ, ಕಾಲೇಜು ಬೆಳೆದು ಬಂದ ದಾರಿಯನ್ನು ವಿವರಿಸುವ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದರು. ಬಳಿಕ ಪ್ಯಾಥಲಾಜಿ ವಸ್ತುಸಂಗ್ರಹಾಲಯವನ್ನು ನೋಡಿದರು. ನಂತರ ಕೆಎಲ್‌ಇ ಆಸ್ಪತ್ರೆಯಲ್ಲಿ ನವೀಕರಣಗೊಂಡ ಪ್ಯಾಥಲಾಜಿ ಲ್ಯಾಬ್‌ಅನ್ನು ಅವರು ಉದ್ಘಾಟಿಸಿದರು.

ಬಲ ಭಾಗದಲ್ಲಿ ಕೆಎಲ್‌ಇ ಸಂಸ್ಥೆಯನ್ನು ನಿರ್ಮಿಸಿದ ಸಪ್ತರ್ಷಿಗಳ ಭಾವಚಿತ್ರ ಹಾಗೂ ಎಡಬದಿಯಲ್ಲಿ ಜೆಎನ್‌ಎಂಸಿ ಪ್ರಾಚಾರ್ಯರ ಭಾವಚಿತ್ರಗಳು ಮತ್ತು ಶಿಲ್ಪಕಲೆಯಿಂದ ಕಂಗೊಳಿಸುತ್ತಿದ್ದ ವೇದಿಕೆಯನ್ನು ಸಂಜೆ 5 ಗಂಟೆಗೆ ಸರಿಯಾಗಿ ಏರಿದ ಮೋದಿ ಜನರತ್ತ ಕೈ ಬೀಸುತ್ತಿದ್ದಂತೆ ಚಪ್ಪಾಳೆಯ ಸುರಿಮಳೆಯೇ ಹರಿಯಿತು. ‘ಮೋದಿ ಅವರೇ ನೀವು ಮುಂದೆ ಸಾಗಿರಿ, ನಾವು ನಿಮ್ಮೊಂದಿಗೆ ಇದ್ದೇವೆ’ ಎಂಬ ಘೋಷಣೆ ಅವರ ಅಭಿಮಾನಿಗಳಿಂದ ಮೊಳಗಿತು.

ಮೋದಿ ಅವರಿಗೆ ಕಲಾವಿದ ಶಂಕರ ಭಾತಕಾಂಡೆ ಅವರು ಕೇಸರಿ ಪಗಡಿ ಕಟ್ಟಿದ್ದನ್ನು ಕ್ಯಾಮೆರಾ, ಮೊಬೈಲ್‌ನಲ್ಲಿ  ಸೆರೆ ಹಿಡಿದುಕೊಳ್ಳಲು  ಜನರು ತವಕಿಸಿದರು.

ಸ್ವಾಗತ ಭಾಷಣ ಮಾಡಿದ ಪ್ರಭಾಕರ ಕೋರೆ, ‘ಮೋದಿ ಹೆಸರು ಮಂತ್ರದಂತೆ ಕೆಲಸ ಮಾಡುತ್ತದೆ.  ಭವ್ಯ ಭಾರತದ ಕನಸನ್ನು ಕಂಡ ಮಹಾತ್ಮ ಗಾಂಧಿ, ಸರದಾರ್‌ ವಲ್ಲಭಭಾಯಿ ಪಟೇಲ್ ಅವರಂತೆ ಗುಜರಾತ್‌ ಇಂದು ನರೇಂದ್ರ ಮೋದಿಯನ್ನು ದೇಶಕ್ಕೆ ನೀಡಿದೆ. ಮೋದಿ ಪ್ರಧಾನಿಯಾದರೆ ಭಾರತದ ಭಾಗ್ಯದ ಬಾಗಿಲು ತೆರೆಯಲಿದೆ. ಕೆಎಲ್‌ಇ ಶತಮಾನೋತ್ಸವಕ್ಕೆ ಅವರು ಪ್ರಧಾನಿಯಾಗಿ ಇಲ್ಲಿಗೆ ಬರಲಿ. ಪ್ರಧಾನಿಯಾದ ಬಳಿಕ ಅವರಿಗೆ ಕನ್ನಡವನ್ನು ಕಲಿಸೋಣ’ ಎಂದು ಬಣ್ಣಿಸಿದರು.

ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಸರಿಯಾಗಿ ಸಂಜೆ 5.35ಕ್ಕೆ ಭಾಷಣ ಆರಂಭಿಸಿದ ನರೇಂದ್ರ ಮೋದಿ, ತಮ್ಮ ಅಧಿಕಾರದ ಅವಧಿಯಲ್ಲಿ ಹಲವು ಯೋಜನೆಗಳ ಮೂಲಕ ಗುಜರಾತ್‌ ಅನ್ನು ಅಭಿವೃದ್ಧಿ ಪಥದಲ್ಲಿ ಕರೆದುಕೊಂಡು ಹೋದ ಕಥೆಯನ್ನು ಸಂಕ್ಷಿಪ್ತವಾಗಿ ಜನರ ಮುಂದಿಟ್ಟರು.

ಸಾಬರಮತಿಯಲ್ಲಿ ನರ್ಮದಾ ನದಿಗೆ ಮರುಜೀವ ನೀಡಿರುವುದು, ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳಿಗಾಗಿ ಹಾಸ್ಟೆಲ್‌ ನಿರ್ಮಿಸುವ ಮೂಲಕ ಕ್ಷೀರ ಕ್ರಾಂತಿ ಮಾಡಿರುವಂತಹ ಯೋಜನೆಗಳ ಕುರಿತು ಪ್ರಸ್ತಾಪಿಸುವ ಮೂಲಕ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾದ ಮೋದಿ, ಜನರಲ್ಲಿ ದೇಶದ ಅಭಿವೃದ್ಧಿಯ ಕನಸನ್ನು ಕಾಣುವಂತೆ ಮಾಡಿದರು. ಸುಮಾರು ಅರ್ಧ ಗಂಟೆ ಕಾಲ ಮಾತನಾಡಿದರೂ ಎಲ್ಲಿಯೂ ‘ರಾಜಕೀಯ’ವನ್ನು ಮಧ್ಯದಲ್ಲಿ ತರಲಿಲ್ಲ. ಅವರು ಮಾತನಾಡುವಷ್ಟು ಹೊತ್ತು ಜನರು ಸೂಜಿಗಲ್ಲು ಸೆಳೆದಂತೆ ಸ್ತಬ್ಧರಾಗಿ ಕುಳಿತಿದ್ದರು.

ಕೆಎಲ್‌ಇ ಸಂಸ್ಥೆ ಅಧ್ಯಕ್ಷ ಶಿವಾನಂದ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿ.ಡಿ. ಪಾಟೀಲ, ಜೆಎನ್‌ಎಂಸಿ ನಡೆದು ಬಂದ ದಾರಿ ಕುರಿತು ಮಾಹಿತಿ ನೀಡಿದರು. ಕುಲಪತಿ ಪ್ರೊ. ಸಿ.ಕೆ. ಕೊಕಾಟೆ ಅವರು ಶಿಕ್ಷಕರ ಜೀವನಚರಿತ್ರೆ ಪುಸ್ತಕವನ್ನು ಬಿಡುಗಡೆ ಮಾಡಿದರು. ಜೆಎನ್‌ಎಂಸಿ ಪ್ರಾಚಾರ್ಯ ಡಾ. ಎ.ಎಸ್‌. ಗೋಧಿ ವಂದಿಸಿದರು. ಕೆಎಲ್‌ಇ ಸಂಗೀತ ಶಾಲೆಯವರು ಪ್ರಾರ್ಥನಾ ಗೀತೆ ಹಾಡಿದರು.

ಉಪ ಪ್ರಾಚಾರ್ಯೆ ಡಾ. ಎನ್‌.ಎಸ್‌. ಮಹಾಂತಶೆಟ್ಟಿ, ಕೆಎಲ್‌ಇ ಸಂಸ್ಥೆಯ ಉಪಾಧ್ಯಕ್ಷ ಅಶೋಕ ಬಾಗೇವಾಡಿ, ಕಾರ್ಯದರ್ಶಿ ಬಾಪು ದೇಸಾಯಿ ವೇದಿಕೆಯಲ್ಲಿ ಹಾಜರಿದ್ದರು. ಕೆಎಲ್‌ಇ ಸಂಸ್ಥೆ ನಿರ್ದೇಶಕ ಮಹಾಂತೇಶ ಕವಟಗಿಮಠ, ಕೆಎಲ್‌ಇ ಆಡಳಿತ ಮಂಡಳಿ ಸದಸ್ಯರು, ಮಾಜಿ ಸಚಿವರು, ಸಂಸದರು, ಶಾಸಕರು, ಕೆಎಲ್‌ಇ ಸಂಸ್ಥೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಜೆಎನ್‌ಎಂಸಿ ಹಳೆ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.